Tuesday, August 11, 2009

ಜೀವನ ಧಾರೆ

ಇತ್ತೀಚಿನ ದಿನಗಳಲ್ಲಿ ಕೃಷಿಕ ಜೀವನ ಕಷ್ಟಕರವಾದ್ದರಿಂದ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿವೆ . ಕೂಲಿ, ಆಳಿನ ಸಮಸ್ಯೆ, ರಸಗೊಬ್ಬರ ಸಮಸ್ಯೆ. ಈ ಸಮಸ್ಯೆಗಳನ್ನು ನಿವಾರಿಸಲು ಸುಸ್ಥಿರ ಬೇಸಾಯ ಕ್ರಮಗಳನ್ನು ಅನುಸರಿಸಲು ಮುಂದಾದೆ . ಪಿಯುಸಿ ಮುಗಿಸಿ ಡೈರಿ ಡಿಪ್ಲೊಮಾ, ಬೆಂಗಳೂರಿನ ಹೆಸರುಘಟ್ಟ (ರಾಜ್ಯ ಜಾನುವಾರು ಸಂವರ್ದನ ತರಬೇತಿ ಕೆಂದ್ರ, ಹೆಸರುಘಟ್ಟ) ಇಲ್ಲಿ ತರಬೇತಿ ಪಡೆದೆ. ಮಹಾನಗರದ ಜೀವನ ಬೇಸರಪಡಿಸಿತು. ಮಾಲಿನ್ಯ, ವಸತಿ ಮತ್ತು ನೀರಿನಂತಹ ಮೂಲಭೂತ ಸಮಸ್ಯೆಯಿಂದ ಬಳಲಿದೆನು.
ಏನಾದರೂ ಸುಸ್ಥಿರ ಬೇಸಾಯ ಕ್ರಮಕ್ಕೆ ಆತುರದಲ್ಲಿದ್ದೆ. ಅಷ್ಟರಲ್ಲಿ ಮೈಸೂರು ಆಕಾಶವಾಣಿಯ ಸಾಯಂಕಾಲ ಪ್ರಸಾರವಾಗುತ್ತಿದ್ದ ಕೃಷಿರಂಗ ಕಿಸಾನ್ವಾಣಿ ನನ್ನ ನೆರವಿಗೆ ಬಂತು ಹಾಗೂ ಅನ್ನದಾತ ಮಾಸಿಕ ಪತ್ರಿಕೆ ನನಗೆ ಸಹಕಾರವಾಯಿತು. ಡೈರಿ ಡಿಪ್ಲೊಮಾ ಮುಗಿಸಿದ ನಂತರ ಎರಡು ಮಿಶ್ರತಳಿ ಕರುಗಳನ್ನು ಪಾಲನೆ ಮಾಡಿದೆನು. ಅದು ನನ್ನ ಹೈನು ಉದ್ಯಮಕ್ಕೆ ನಾಂದಿಯಾಯಿತು. ಕೃಷಿ ತ್ಯಾಜ್ಯವನ್ನು (ಭತ್ತ ಮತ್ತು ರಾಗಿ ಹುಲ್ಲು) ಬಳಸಿ ಹೈನು ರಾಸುಗಳಿಗೆ ಆಹಾರ ಪೂರೈಸಿಕೊಂಡು, 10 ಅಡಿ ಅಗಲ 4 ಅಡಿ ಉದ್ದ 1 ಅಡಿ ಆಳವಿರುವ ಕಾಂಕ್ರೀಟ್ ತೊಟ್ಟಿಯನ್ನು ನಿರ್ಮಿಸಿ ಅಜೋಲ ಬೆಳೆಸಿ ತಿಂಡಿಮಿಶ್ರಣದೊಂದಿಗೆ ರಾಸುಗಳಿಗೆ ದಿನಕ್ಕೆ1 ಕೆಜಿಯಂತೆ ಕೊಡುತ್ತಾ ಬಂದೆ. ಶಾರೀರಕ ಪೋಷಣೆ ಮತ್ತು ಹಾಲು ಉತ್ಪಾದನೆ ಸುಧಾರಣೆಗೊಂದಿತು.
ಹೈನು ತ್ಯಾಜ್ಯವನ್ನು ಗೋಬರ್ ಗ್ಯಾಸ್ (ಬಯೋಗ್ಯಾಸ್) ಬಳಸಿ ದಿನನಿತ್ಯದ ಅಡುಗೆಗೆ ಅನಿಲವಾಗಿ ಬಳಸಿ ವಾಯುಮಾಲಿನ್ಯ ಮತ್ತು ಅರಣ್ಯ ನಾಶವನ್ನು ತಪ್ಪಿಸಲು ಕಿರು ಪ್ರಯತ್ನ ಮಾಡಿದೆ.
ಬಯೋಸ್ಲರಿಯನ್ನು 10 ಅಡಿ ಉದ್ದ 8 ಅಡಿ ಅಗಲ 10 ಅಡಿ ಆಳ ಉಳ್ಳ ಭೂಗರ್ಭ ಕಾಂಕ್ರೀಟ್ ಗುಂಡಿಯಲ್ಲಿ ಶೇಖರಿಸಿ ಬಯೋಸ್ಲರಿ ಮೋಟಾರ್ ಅಳವಡಿಸಿ ಪಕ್ಕದಲ್ಲಿ ಇರುವ ಬೋರ್ ವೆಲ್ ಹೊರಭಾಗಕ್ಕೆ ಪೈಪ್ ಮುಖಾಂತರ ಬಯೋಸ್ಲರಿಯನ್ನು ಹೋಗುವಂತೆ ಮಾಡಿದೆ. ನನ್ನ 6 ಎಕರೆ ಜಮೀನು ಒಂದೇಕಡೆ ಇರುವುದರಿಂದ ಜಮೀನಿನ ಉದ್ದಕ್ಕೂ ಪೈಪ್ ಲೈನ್ ಮಾಡಿಸಿದ್ದೇನೆ. ಯಾವ ಬೆಳೆಗೆ ಬಯೋಸ್ಲರಿ ಬೇಕೋ ವಾಲ್ ಮುಖಾಂತರ ಬೋರ್ ವೆಲ್ ನೀರಿನ ಜೊತೆಯಲ್ಲಿ ಹರಿಸುತ್ತೇವೆ.
ಇದನ್ನು 2007 ಜೂನ್ 1ರಿಂದ ಪ್ರಾರಂಭಿಸಿದೆ. ಈಗ ನನ್ನ ಆರು ಎಕರೆ ಜಮೀನು ರಸವತ್ತಾದ ಸಾವಯವಯುಕ್ತ ಮಣ್ಣಾಗಿ ಪರಿವರ್ತನೆಗೊಂಡಿತು.
ನನ್ನ ಮುಂದಿನ ಪೀಳಿಗೆಗೆ ಸಾವಯುಕ್ತ ಭೂಮಿಯನ್ನು ಬಳುವಳಿಯಾಗಿ ಕೊಡಲು ರಾಸಾಯನಿಕ ಮುಕ್ತ ಭೂಮಿಯನ್ನು ಕೊಡಲು ಮನಸ್ಸಂತೋಷವಾಯಿತು. ಭತ್ತದ ಉತ್ಪಾದನೆಯಲ್ಲಿ ಶ್ರೀ ಪದ್ಧತಿಯನ್ನು (ಎಸ್ ಆರ್ ಟಿ) ಅಳವಡಿಸಿ ಕೇವಲ ಒಂದು ಎಕರೆಗೆ 2 ಕೆಜಿ ಬಿತ್ತನೆ ಭತ್ತದ ಬೀಜವನ್ನು ಬಳಸಿ 35 ರಿಂದ 38 ಕ್ವಿಂಟಾಲ್ ಭತ್ತದ ಇಳುವರಿಯನ್ನು ಪಡೆಯುತ್ತಿದ್ದೇನೆ. ಇದಕ್ಕೆ ನಾನೆ ತಯಾರಿಸಿದ ಎರೆಹುಳುವಿನ ಗೊಬ್ಬರವನ್ನು ಉಪಯೋಗಿಸಿದೆ. ದಿನದಿಂದ ದಿನಕ್ಕೆ ಕಬ್ಬಿನ ವ್ಯವಸಾಯದ ಖರ್ಚು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಕಬ್ಬಿನ ಬೆಳೆಗೂ ಶ್ರೀ ಪದ್ದತಿಯನ್ನು ಮಾಡುವ ಹಂಬಲ. ಭತ್ತದ ಶ್ರೀ ಪದ್ದತಿಯನ್ನು ಗುರಿ ಇಟ್ಟುಕೊಂಡು (3 3) ಸಾಲಿನಿಂದ ಸಾಲಿಗೆ 3 ಅಡಿ ಗಿಡದಿಂದ ಗಿಡಕ್ಕೆ ಅಂತರವಿಟ್ಟು ನಾಟಿ ಮಾಡಿದೆ.
ಕಳೆ ನಿರ್ವಹಣೆಗೆ ಮತ್ತು ಬೆಳೆಗಳ ಅಭಿವೃದ್ಧಿಗೆ ಸಹಕಾರಿ ಆಯಿತು. ಈ ಪದ್ದತಿಯಿಂದ ಕೂಲಿ ಆಳುಗಳ ಸಮಸ್ಯೆ ಮತ್ತು ಬಿತ್ತನೆ ಬೀಜ ಸಮಸ್ಯೆ ಕಡಿಮೆಯಾಗಿದೆ. ನಂತರ ತೋಟಗಾರಿಕೆ ಮಾಡಬೇಕೆಂಬ ಹಂಬಲವಿದ್ದರಿಂದ ನನ್ನ ಅಣ್ಣನವರಾದ ಕೆ ಎಸ್ ತೋಂಟದಾರ್ಯಸ್ವಾಮಿ ಅವರ 2 ಎಕರೆ ಜಮೀನಿನಲ್ಲಿ ಅಡಿಕೆ, ತೆಂಗು, ಸಿಲ್ವರ್, ತೇಗ, ಸಪೋಟ, ಮಾವು, ಸೀಬೆ, ಕಿರಳಿ, ನಿಂಬೆ, ಹಲಸು ಇತರ ಹಣ್ಣಿನ ಬೆಲೆಗಳು ಮತ್ತು ಸಾಂಬಾರ್ ಪದಾರ್ಥಗಳಾದ ಮೆಣಸು , ದಾಲ್ಚಿನ್ನಿ, ಚೆಕ್ಕೆ, ಏಲಕ್ಕಿ ಗಿಡಗಳಂತಹ ತೋಟಗಾರಿಕೆ ಮಾಡಿ ಕಣ್ಮನ ತಣಿಸಲು ಮುಂದಾಗಿದ್ದೇವೆ.
ಇದು ನಮ್ಮ ಜೀವನಧಾರೆ ಸುಸ್ಥಿರ ಕೃಷಿ.

ಕವನ:
ಕಲ್ಪವೃಕ್ಷದಡಿ ನನ್ನ ಜೀವನ
ಹೈನು ಇರುವ ವರೆಗೆ ನೆಂಟರ ಇಷ್ಟರ ಸತ್ಕಾರ
ತೆಂಗುಬಾಳೆ ನಡುವೆ ನನ್ನ ಜೀವನ
ತೇಗ,ಹೊನ್ನೆ,ಹೊಂಗೆ,ಬೇವು ಸುತ್ತಲಿರುವ ಸೈನಿಕ
ನೋಡಬನ್ನಿ ನೀವೀಗ, ನಾನೆ ಇದರ ಮಾಲಿಕ
-ಕೆ ಎಸ್ ಮೃತ್ಯೂಂಜಯ ತಂದೆ: ಶಿವನಂಜಪ್ಪ
ಎಸ್ ಐ ಕೋಡಿಹಳ್ಳಿ, ಮಂಡ್ಯ ತಾ:
ಮಂಡ್ಯ ಜಿಲ್ಲೆ, ಕೊರಗೋಡು ಹೋ: ಕೆ ಗೌಡಗೆರೆ ಅಂಚೆ.

No comments:

Post a Comment