Monday, August 3, 2009

ಸ್ವಾವಲಂಬಿ ಕೃಷಿ ಬದುಕಿನ ಶಕ್ತಿ
ಶಕ್ತಿ ಬಯೋಡೀಸಲ್ (ಜೈವಿಕ ಇಂಧನ)

ಇತ್ತೀಚಿನ ದಿನಗಳಲ್ಲಿ ವಿಶ್ವದ ಜನಸಂಖ್ಯೆ ಏರುತ್ತಲೆ ಇದೆ. ಜೊತೆಗೆ ವಿವಿಧ ರೀತಿಯ ವಾಹನಗಳ ಸಂಖ್ಯೆಯು ಕೂಡ ಜಾಸ್ತಿಯಾಗುತ್ತಿದೆ. ಕಾರಣದಿಂದ ಪ್ರತಿ ದಿನವು ವಿಶ್ವದ ಇಂಧನ ಬೇಡಿಕೆ ಗಣನೀಯವಾಗಿ ಏರುತ್ತಿದೆ. ಅಂಕಿ ಅಂಶಗಳ ಪ್ರಕಾರ ಭೂಗರ್ಭದಲ್ಲಿ ಸಿಗುವ ಇಂಧನ ಮೂಲಗಳು ಇನ್ನು ಕೆಲವೇ (20-30ವರ್ಷ) ವರ್ಷಗಳಲ್ಲಿ ಬರಿದಾಗಿ ಹೋಗುವ ಮುನ್ಸೂಚನೆ ಇದೆ. ಅಂತಹ ಸಮಯದಲ್ಲಿ ಇಂಧನ ಸಮಸ್ಯೆಯೆಂಬುದು ಎಲ್ಲರನ್ನು ದೊಡ್ಡ ಭೂತವಾಗಿ ಕಾಡಬಹುದು.
ಮೇಲಿನ ಎಲ್ಲಾ ಕಾರಣಗಳನ್ನು ಗಮನಿಸಿದರೆ, ಈಗ ಬಳಸುತ್ತಿರುವ ಸಾಂಪ್ರದಾಯಿಕ ಇಂಧನಗಳ ಜೊತೆಗೆ ನವಿಕರಿಸಬಹುದಾದ ಜೈವಿಕ ಇಂಧನವನ್ನ ಉತ್ಪಾದಿಸಿ ಉಪಯೋಗಿಸಿದರೆ ಮುಂದೆ ಕಾಡುವ ಒಂದು ದೊಡ್ಡ ಭೂತವನ್ನು ಸುಲಭವಾಗಿ ಎದುರಿಸಬಹುದು.
ಈಗ ಅಭಿವೃದ್ಧಿಶೀಲವಾಗಿರುವ ಭಾರತ ಮುಂದಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಸಾಧ್ಯವಾದಷ್ಟು ಇಂಧನವನ್ನು ಅಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ ತನ್ನಲ್ಲಿಯೇ, ಅವಶ್ಯಕವಾದ ಬದಲಿ ಇಂಧನ ಉತ್ಪತ್ತಿ ಮಾಡಬೇಕು. ಹೇರಳವಾದ ನಿಸರ್ಗ ಸಂಪತ್ತು ನಮ್ಮಲ್ಲಿಯೆ ಇದೆ. ಆದುದರಿಂದ ಬದಲಿ ಇಂಧನ ಮೂಲಗಳನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಪ್ರಾಕೃತಿಕವಾಗಿ ದೊರೆಯುವ ಸಸ್ಯಮೂಲಗಳಿಂದ ಜೈವಿಕ ಇಂಧನ ಉತ್ಪಾದನೆ ಹಾಗೂ ಪ್ರಕೃತಿಯ ಸಹಜತೆಯನ್ನು ಸುಸ್ಥಿರ ಸ್ಥಿತಿಗೆ ತರುವುದು ಅವಶ್ಯಕವಾಗಿದೆ. ಸಸ್ಯ ಮೂಲಗಳನ್ನು ಕೃಷಿಕರು ತಮ್ಮ ಜಮೀನಿನ ಬದುಗಳಲ್ಲಿ, ಹಿತ್ತಲು, ಸಾಮೂಹಿಕ ಸ್ಥಳಗಳು ಹಾಗೂ ಬಂಜರು ಭೂಮಿಯಲ್ಲಿ ಬೆಳೆಯಬಹುದಾಗಿದೆ.
ಪ್ರಮುಖವಾಗಿ ಹೊಂಗೆ, ಬೇವು, ಹಿಪ್ಟೆ, ಸಿಬರೂಬಗ್ಲಾಕ, ಜಟ್ರೋಪ ಇನ್ನಿತರ ಹಲವಾರು ಸಸ್ಯಗಳ ಮೂಲಕ ಬಯೋಡೀಸಲ್ (ಜೈವಿಕ ಇಂಧನ) ಉತ್ಪಾದನೆ ಮಾಡಬಹುದಾಗಿದೆ. ಜೋಳ, ಕಬ್ಬು, ಬೀಟ್ರೂಟ್, ಮುಸುಕಿನ ಜೋಳಗಳಂತ ಬೆಳೆಗಳು ಮತ್ತು ಕೊಳೆತ ಉಪಯೋಗಕ್ಕೆ ಬಾರದ ಹಣ್ಣು ತರಕಾರಿಗಳನ್ನು ಇಥೆನಾಲ್ ಉತ್ಪಾದನೆಗಾಗಿ ಬಳಸಬಹುದಾಗಿದೆ. ಬಯೋಡೀಸಲ್ಅನ್ನು ರೈತರು ತಮ್ಮ ಮನೆಯಲ್ಲಿಯೇ ತಯಾರು ಮಾಡಿಕೊಳ್ಳಬಹುದು. ಕಾಲಕ್ಕೆ ತಕ್ಕಂತೆ ದೊರೆಯುವ ಬೀಜಗಳನ್ನು ಶೇಖರಣೆ ಮಾಡಿಕೊಂಡು, ಅವುಗಳನ್ನು ಪುಟ್ಟ ವಾಕ್ವಾಫೆಲ್ಲಿರ್-(ಗಾಣ) ಯಂತ್ರದ ಮುಖಾಂತರ ಎಣ್ಣೆ ತೆಗೆಯಬೇಕು. ಒಂದು ಲೀಟರ್ ಹೊಂಗೆ ಎಣ್ಣೆಗೆ 100-150 ಎಮ್ಎಲ್ ಇಥಿನಾಲ್ ಮತ್ತು 10-15 ಗ್ರಾಂ ಸೋಡಿಯಂ ಹೈಡ್ರಾಕ್ಸೈಡ್ ಅನ್ನು ಬೆರೆಸಿ ಚೆನ್ನಾಗಿ ಕಲಕಿ ಒಂದು ದಿವಸ ಹಾಗೆ ಇಡಬೇಕು. ಮೇಲ್ಬಾಗದಲ್ಲಿ ಬಯೋಡೀಸಲ್ ಶೇಖರಗೊಂಡರೆ, ತಳಭಾಗದಲ್ಲಿ ಗ್ಲಿಸರೀನ್ ಉಪಉತ್ಪನ್ನ ಶೇಖರಗೊಳ್ಳುತ್ತದೆ. ಗ್ಲಿಸರಿನ್ ಅನ್ನು ಬೇರ್ಪಡಿಸಿದರೆ, ಬಳಸಲು ಯೋಗ್ಯವಾದ ಬಯೋಡೀಸಲ್ ದೊರೆಯುತ್ತದೆ.
ಬಯೋಡೀಸಲ್ ಪ್ರಯೋಜನಗಳು:-
* ಪರಿಸರ ಸ್ನೇಹಿ ಜೈವಿಕ ಇಂಧನ
* ಎಣ್ಣೆ ಅಂಶ ಚೆನ್ನಾಗಿ ಇರುವುದರಿಂದ, ವಾಹನಗಳು ಸುಲಭವಾಗಿ ತಿರುಗುವುದರಿಂದ, ಅವುಗಳ ಆಯಸ್ಸು ಹೆಚ್ಚುತ್ತದೆ.
* ಎಣ್ಣೆ ಬೇರ್ಪಡಿಸಿದ ನಂತರ ದೊರೆಯುವ ಮಡ್ಡಿ (ಹಿಂಡಿ) ಉತ್ತಮ ಸಾವಯವ ಗೊಬ್ಬರವಾಗುತ್ತದೆ.
* ಎಲ್ಲದಕ್ಕಿಂತ ಹೆಚ್ಚಾಗಿ ಖರ್ಚಿಲ್ಲದೆ ಸ್ವಂತ ಬಳಕೆಗೆ ಅವಶ್ಯಕವಾದ ಡೀಸಲ್ಅನ್ನು ತಯಾರು ಮಾಡಿಕೊಳ್ಳಬಹುದು.

ಅರ್ಥಿಕ ಲೆಕ್ಕಾಚಾರ:-
ಒಂದು ಲೀಟರ್ ಹೊಂಗೆ ಎಣ್ಣೆ ಉತ್ಪಾದನೆ ಮಾಡಲು 3.5 ಕೆ.ಜಿ. ಹೊಂಗೆ ಬೀಜಬೇಕಾದರೆ, 100ಎಮ್ಎಲ್ ಇಥೆನಾಲ್, 15 ಗ್ರಾಂ ಸೋಡಿಯಂ ಹೈಡ್ರಾಕ್ಸೈಡ್ ಬೇಕು.
ಖರ್ಚು :-
3.5 ಕೆ.ಜಿ. ಹೊಂಗೆ ಬೀಜದ ಬೆಲೆ 35 ರೂ. (10 ರೂ./ಕೆ.ಜಿ)
ಎಥಿನಾಲ್, ಸೋಡಿಯಂ ಹೈಡ್ರಾಕ್ಸೈಡ್, ಪ್ರೋಸಸಿಂಗ್ ಖರ್ಚು 08 ರೂ.
ಒಟ್ಟು 43 ರೂ.

ಆದಾಯ:-
1 ಲೀಟರ್ ಬಯೋಡಿಸಲ್ 40 ರೂ.
2.5 ಕೆ.ಜಿ. ಹೊಂಗೆ ಇಂಡಿ 15 ರೂ.
200 ಎಂಎಲ್ ಗ್ಲಿಸರೀನ್ 6 ರೂ.
ಒಟ್ಟು 61 ರೂ.
ಮೂಲಕ ಲೆಕ್ಕಾಚಾರದ ಅಂಕಿಅಂಶಗಳನ್ನು ಗಮನಿಸಿದರೆ, ಬಯೋಡೀಸಲ್ ಉತ್ಪಾದನೆ ಲಾಭದಾಯಕ ಮತ್ತು ಸ್ವಾವಲಂಬಿ ವಿಧಾನವಾಗಿದೆ. ಬೇಗಬೇಗ ಬದಲಾಗುತ್ತಿರುವ ಕಾಲದಲ್ಲಿ ಕೃಷಿಕರು ಇತರ ವರ್ಗಗಳಂತೆ ಸಮನಾಗಿ ಜೀವನ ನಡೆಸಬೇಕು ಎಂದುಕೊಂಡರೆ, ಹಿಂದಿನ ಹಿರಿಯರ ಅನುಭವದೊಂದಿಗೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯು ಸಹ ಉದ್ಯಮ ಎಂದು ಪರಿಗಣಿಸಿ, ಮುನ್ನೆಡೆಯಬೇಕು.
-ಹರ್ಷ.ಡಿ.ಎನ್.
ಡಿಂಕ, ಪಾಂಡವಪುರ ತಾಲ್ಲೋಕು.ಫೋನ್ 9945051194









No comments:

Post a Comment