Saturday, August 1, 2009


ತಾಜಾ ತೆಂಗಿನೆಣ್ಣೆಯ ಮೈಸೋಪು ಸುಗ್ಗಿ

ವಿನಯ್ ಕುಮಾರ್
ಬಿನ್ ರಾಮೇಗೌಡ
ಹೊನ್ನಗಿರಿ ಫಾರಂ, ಚಾಮನಹಳ್ಳಿ
ಮದ್ದೂರು ತಾಲ್ಲೂಕು
ಮಂಡ್ಯ ಜಿಲ್ಲೆ
ಮೊಬೈಲ್ - 9449785914

ನನ್ನ ಹೆಸರು ವಿನಯ್ ಕುಮಾರ್. ನಾನು ಶಶಿರೇಖಾ ರಾಮೇಗೌಡರ ಪುತ್ರ. ನಾನು ತೆಂಗಿನ ತೋಟ, ಮಾವಿನ ತೋಟ ಮಾಡಿದ್ದೇನೆ. ನಾನು, ನನ್ನ ಪತ್ನಿ ರೇಡಿಯೋ ಕೇಳುಗರು. ಅದರಲ್ಲಿ ಮೈಸೂರು ಆಕಾಶವಾಣಿಯ ಕೃಷಿ ರಂಗ ಕಾರ್ಯಕ್ರಮವನ್ನು ನಿರಂತರವಾಗಿ ಕೇಳುತ್ತಿದ್ದೇವೆ. ಮೈಸೂರು ಆಕಾಶವಾಣಿಯವರು ಬಾನುಲಿ ಕೃಷಿ ಬೆಳಗು ಕಾರ್ಯಕ್ರಮವನ್ನು ವೆಬ್ ಸೆಟಿ ವಿಜಯ್ ಬ್ಯಾಂಕಿನಲ್ಲಿ ನಡೆಸುತ್ತಿರುವುದು ತಿಳಿದು ನಾನು ಮತ್ತು ನನ್ನ ಪತ್ನಿ ಭಾಗವಹಿಸಿದೆವು. 2 ವರ್ಷದಿಂದ ನಿರಂತರವಾಗಿ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇವೆ. ಈ ಮೈಸೂರು ಆಕಾಶವಾಣಿಗೆ ವಿಕಸನ,ವೆಬ್ ಸೆಟಿ ವಿ.ಸಿ. ಫಾರಂ ಸಂಸ್ಥೆಯವರು ಸಹಕಾರ ನೀಡುತ್ತಿದ್ದಾರೆ. ಈ ಎಲ್ಲಾ ಸಂಸ್ಥೆ ಸೇರಿ ರೈತರಿಗೋಸ್ಕರ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮವನ್ನು ವರ್ಷದ ಪ್ರತಿ ತಿಂಗಳೂ ಕೊನೆಯ ಭಾನುವಾರ ಆಸಕ್ತ ರೈತರ ಜಮೀನಿನಲ್ಲಿ ಹಮ್ಮಿಕೊಳ್ಳುತ್ತಿದ್ದಾರೆ . ಇಲ್ಲಿ ನಮಗೆ ಕೃಷಿ, ತೋಟಗಾರಿಕೆ, ಮಾರ್ಕೆಟಿಂಗ್, ಕೃಷಿಯ ಉಪಕರಣದ ಬಗ್ಗೆ ಎಲ್ಲಾ ಮಾಧ್ಯಮದ ಬಗ್ಗೆಯೂ ತಿಳಿದವರಿಂದ ಮಾಹಿತಿಯನ್ನು ಒದಗಿಸುತ್ತಿದ್ದಾರೆ ಹಾಗೂ ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಸುಸ್ಥಿರ, ಸ್ವಾವಲಂಬನೆ ಬದುಕಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ನಮ್ಮ ಬಾನುಲಿ ಕೃಷಿ ಬೆಳಗು ತಂಡವನ್ನು ಮೈಸೂರು ಆಕಾಶವಾಣಿಯವರು ಪ್ರವಾಸ ಕರೆದುಕೊಂಡು ಹೋಗಿದ್ದರು. ಪ್ರವಾಸದಲ್ಲಿ ತುಮಕೂರು ಜಿಲ್ಲೆಯ ಶಿರಸಿ ರಸ್ತೆಯಲ್ಲಿರುವ ಅನಿತ ನೀಲಕಂಠ ಮೂರ್ತಿ ವಾದೇಕರ್ ಫಾರಂಗೆ ಭೇಟಿ ಕೊಟ್ಟೆವು. ಅಲ್ಲಿ ನಮಗೆ ಸ್ವಾವಲಂಬನೆಯ ಸುಸ್ಥಿರ ಬದುಕಿಗಾಗಿ ನಮ್ಮಲ್ಲಿಯೇ ಸಿಗುವ ಪದಾರ್ಥಗಳನ್ನು ಉಪಯೋಗಿಸಿ ದಿನನಿತ್ಯ ಬಳಸುವ ಮೈ ಸೋಪು ಪುಡಿ, ಹರ್ಬಲ್ ಸೋಪು ಹೀಗೆ ಹಲವಾರು ಪದಾರ್ಥಗಳ ಬಗ್ಗೆ ಅನಿತ ನೀಲಕಂಠಮೂರ್ತಿ ಅವರು ತಿಳಿಸಿಕೊಟ್ಟರು. ಇಂತಹ ವಸ್ತುಗಳನ್ನು ಅವರೇ ಮಾಡಿಕೊಂಡು ಬಳಸುತ್ತಿದ್ದಾರೆ ಮತ್ತು ಮಾರ್ಕೆಟಿಂಗ್ ಕೂಡಾ ಮಾಡುತ್ತಿದ್ದಾರೆ. ನಮಗೆ ಅಲ್ಲಿ ಹಲವಾರು ಮಾಹಿತಿಗಳು ದೊರಕಿದವು.
ನಂತರ ವೆಬ್ ಸೆಟಿ ಸುಸ್ಥಿರ ಬದುಕಿಗಾಗಿ ಸ್ವಾವಲಂಬನೆಯಿಂದ ನಾವು ದಿನನಿತ್ಯ ಬಳಸುವಂತಹ ಹಲವು ಪದಾರ್ಥಗಳನ್ನು ಮಾಡುವ ಬಗ್ಗೆ 5 ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅದರಲ್ಲಿ ನೀಲಕಂಠಮೂರ್ತಿ ಒಂದು ದಿನ ನಡೆಸಿದರು. ನಾವು ಅಲ್ಲಿ ಭಾಗವಹಿಸಿದೆವು. ಅವರು ನಮಗೆ ಮೈಸೋಪು, ನೋವಿನ ಎಣ್ಣೆ, ಹರ್ಬಲ್ ಸೋಪು, ತಾಜಾ ತೆಂಗಿನ ಎಣ್ಣೆ ಇವುಗಳನ್ನು ಮಾಡಿ ತೋರಿಸಿದರು ಮತ್ತೆ ಮಾಹಿತಿಗಳನ್ನು ಕೊಟ್ಟರು. ಅದರಲ್ಲಿ ನಾನು ಮೈ ಸೋಪು ಮತ್ತು ತಾಜಾ ತೆಂಗಿನ ಎಣ್ಣೆ ಬಗ್ಗೆ ತುಂಬಾ ಆಸಕ್ತಿ ಹೊಂದಿದೆ. ನಾನು ಏಕೆ ಇದನ್ನು ಮಾಡಬಾರದು ಎಂದು? ಏಕೆಂದರೆ ನಮಗೆ ತೆಂಗಿನ ತೋಟ ಇರುವುದರಿಂದ ಸೋಪಿಗೆ ಬೇಕಾದ ಕೊಬ್ಬರಿ ಎಣ್ಣೆ ನಮ್ಮ ತೋಟದ ಕೊಬ್ಬರಿಯಿಂದ ತಯಾರು ಮಾಡಿಕೊಳ್ಳಬಹುದು. ನಾನು ತಡಮಾಡದೇ ಅವರು ಹೇಳಿಕೊಟ್ಟ ಮಾದರಿಯಲ್ಲೇ ಸೋಪನ್ನು ತಯಾರಿಸಿದೆ . ಇದಕ್ಕೆ ಮುಖ್ಯವಾಗಿ ತೆಂಗಿನ ಎಣ್ಣೆಯನ್ನು ಮಾತ್ರ ಬಳಸಿದ್ದೇನೆ. ಈ ಸೋಪನ್ನು ತಯಾರಿಸಿ ಉಪಯೋಗಿಸಿದೆವು. ಯಾವುದೇ ಅಡ್ಡ ಪರಿಣಾಮ ಆಗಲಿಲ್ಲ. ಬೇರೆ ಸೋಪಿಗಿಂತಲೂ ನೊರೆ ಬರುತ್ತದೆ. ಇದು ಆಯಿಲಿ ಆಗಿರುವುದರಿಂದ ಚರ್ಮ ಹೊಳೆಯುತ್ತದೆ. ಇದು ಬೇರೆ ಸೋಪಿಗಿಂತಲೂ ತುಂಬಾ ಚೆನ್ನಾಗಿದೆ ಮತ್ತು ಮನೆಯವರು ಉಪಯೋಗಿಸುತ್ತಾರೆ ಹಾಗೂ ನಮ್ಮ ಸ್ನೇಹಿತರಿಗೂ ಸಹ ಕೊಟ್ಟಿದ್ದೆವು. ಅವರು ಸಹ ತುಂಬಾ ಚೆನ್ನಾಗಿದೆ, ನಮಗೆ ಯಾವಾಗಲೂ ಇದನ್ನು ಕೊಡಿ ಎಂದು ಹೇಳುತ್ತಿದ್ದಾರೆ. ಹಾಗೆಯೇ ವಿಜಯ ಬ್ಯಾಂಕ್ , ಮೈಸೂರು ಆಕಾಶವಾಣಿ, ವಿಕಸನ, ವಿ.ಸಿ. ಫಾರಂ ಸಂಸ್ಥೆಯ ಅಧಿಕಾರಿಗಳು ಸಹ ಉಪಯೋಗಿಸಿ ತುಂಬಾ ಚೆನ್ನಾಗಿದೆ ಎಂದು ಹೇಳಿರುತ್ತಾರೆ. ನಮ್ಮ ಬಾನುಲಿ ಕೃಷಿ ಬೆಳಗು ತಂಡದವರು ಉಪಯೋಗಿಸಿದ್ದಾರೆ. ಎಲ್ಲರೂ ಇದನ್ನು ತುಂಬಾ ಇಷ್ಟಪಟ್ಟು ನಮಗೆ ಪ್ರತಿ ತಿಂಗಳು ಸೋಪನ್ನು ತಂದುಕೊಡಿ ಎಂದು ಹೇಳುತ್ತಿದ್ದಾರೆ. ಇದನ್ನು ಮಕ್ಕಳಿಗೂ ಸಹ ಉಪಯೋಗಿಸಿದೆವು. ಯಾವುದೇ ತರಹ ಹಾನಿಯಾಗಲಿಲ್ಲ. ಪ್ರಖ್ಯಾತ ಕಂಪನಿಯ ಬೇಬಿ ಸೋಪು ತರಹವೇ ಇದೆ. ನಾವು 8 ತಿಂಗಳಿನಿಂದ ಬಳಸುತ್ತಿದ್ದೇವೆ, ಈಗಂತೂ ನಾವು ಬೇರೆ ಸೋಪನ್ನು ತರುವುದಿಲ್ಲ. ನಮಗೆ ಇದನ್ನು ಬಳಸಿದೆ ಮೇಲೆ ಯಾವುದೇ ಸೋಪು ಬೇಡ ಅನಿಸುತ್ತಿದೆ. ಈ ಸೋಪು ನಮಗೆ ತುಂಬಾ ಖುಷಿ ಕೊಟ್ಟಿದೆ. ಆಹ್ಲಾದಕರವಾಗಿದೆ. ಸ್ಯಾಂಡಲ್ ಜಾಸ್ಮೀನ್ ಸುಗಂಧ ದ್ರವ್ಯವನ್ನು ಉಪಯೋಗಿಸಿದ್ದೇವೆ. ಇದು ಪ್ಯೂರ್ ಕೋಕ್ನೆಟ್ ಆಯಿಲ್ ಸೋಪು. ಬೇರೆ ಯಾವ ರಾಸಾಯನಿಕವನ್ನು ಉಪಯೋಗಿಸಿಲ್ಲ. ಇದಕ್ಕೆ ಅವರು ಹೇಳಿಕೊಟ್ಟಿರುವ ಪ್ರಕಾರ ತುಳಸಿ ರಸ, ಬೇವಿನ ರಸ, ಅಲೋವೆರ, ಅರಿಶಿನ, ಸುಗಂಧ ದ್ರವ್ಯ ಹಾಕಿ ಮಾಡಬಹುದು. ನಾನು ಇದೇ ಮಾದರಿ ಬಳಸಿ ಬೇವಿನ ಎಣ್ಣೆಯನ್ನು ಬಳಸಿ ಹಸಿವಿಗೆ ಸೋಪು ತಯಾರಿಸಿದ್ದೇನೆ. ಇದನ್ನು ನಮ್ಮ ಹಸುವಿಗೆ ಬಳಸುತ್ತಿದ್ದೇವೆ. ಈ ಸೋಪಿನಲ್ಲಿ ಗಾಯ ವಾಸಿ ಮಾಡುವ ಅಂಶವಿದೆ. ಇದು ರೋಗ ನಿರೋಧಕ ಸೋಪು. ಹಾಗೆಯೇ ಇದರ ವಾಸನೆಗೆ ಸೊಳ್ಳೆ ಹಸುವಿನ ಹತ್ತಿರ ಅಷ್ಟು ಬರುವುದಿಲ್ಲ - ನಿರಂತರವಾಗಿ ಬಳಸಿದರೆ.
ಈಗ ನಮ್ಮ ಸ್ವಾವಲಂಬನೆ ಬದುಕಿಗಾಗಿ ಹಾಗೂ ಸುಸ್ಥಿರ ಬದುಕಿಗಾಗಿ ಮತ್ತು ನಮ್ಮ ಆರೋಗ್ಯಕ್ಕಾಗಿ ಏನೆಲ್ಲಾ ಬೇಕೋ ಅದನ್ನು ಮೈಸೂರು ಆಕಾಶವಾಣಿಯವರು, ವೆಬ್ಸಿಟಿಯವರು, ವಿಕಸನ ಸಂಸ್ಥೆಯವರು ನಮಗೆ ತೋರಿಸಿ ಮಾಹಿತಿಗಳನ್ನು ಈ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಲ್ಲಿ ಸವಿಸ್ತಾರವಾಗಿ ನಮಗೆ ತಿಳಿಸುತ್ತಿದ್ದಾರೆ. ನಾವೆಲ್ಲಾ ಆಭಾರಿಯಾಗಿರೋಣ. ಈ ಸಂಸ್ಥೆಗೆ ಹಾಗೂ ಇದು ನಮ್ಮ ಕೃಷಿಕರ ಬದುಕಿನಲ್ಲಿ ನಿರಂತರವಾಗಿರಲಿ. ನೀವೆಲ್ಲಾ ಬನ್ನಿ ನಮ್ಮಲ್ಲಿಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಿ ಮತ್ತು ನಾವು ತಯಾರಿಸಿರುವ ಈ ಸೋಪನ್ನು ಕೊಂಡುಕೊಂಡು ಬಳಸಿದ ನಂತರ ನಿಮ್ಮ ಅಭಿಪ್ರಾಯ ಹೇಳಿ. ನಿಮಗೆ ಇದೇ ಸೋಪು ಬೇಕು ಅನ್ನಿಸುವ ಗುಣಮಟ್ಟ ಇದರಲ್ಲಿದೆ. ನೀವು ಕೂಡಾ ಈ ಸೋಪಿಗೆ ಆಕರ್ಷಿತ ರಾಗುತ್ತಿರಾ ಆಕಾಶವಾಣಿಯವರಿಗೆ, ವಿಜಯಾ ಬ್ಯಾಂಕ್ ಹಾಗೂ ವಿಕಸನದವರಿಗೆ ನಮ್ಮ ಧನ್ಯವಾದಗಳು.
ಇಂತಿ
ವಿನಯ್ ಕುಮಾರ್

No comments:

Post a Comment