Thursday, June 25, 2009



ಬಾನುಲಿ 'ನೇಗಿಲಯೋಗಿ'ಗಳ ಸಡಗರದ ಸಮಾವೇಶ


ಯಾರೂ ಅರಿಯದ ನೇಗಿಲ ಯೋಗಿಯು
ಲೋಕಕೆ ಅನ್ನವನ್ನೀಯುವನು
ಹೆಸರನು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ
ನೇಗಿಲ ಕುಳದೊಳಗಡಗಿದೆ ಕರ್ಮ
ನೇಗಿಲ ಮೇಲೆಯೇ ನಿಂತಿದೆ ಧರ್ಮ
-ಕುವೆಂಪು
ಯಾವುದೇ ದೇಶದ ವಿಕಾಸಕ್ಕೆ ಭದ್ರ ಬುನಾದಿ ಅದರ ಹಳ್ಳಿಗಳ ಅಭಿವೃದ್ಧಿ ಎಂಬುದರಲ್ಲಿ ಸಂಶಯವಿಲ್ಲ. ಸಂಪರ್ಕ ಮಾಧ್ಯಮಗಳಿಂದ ಬಹಳ ದೂರವಿದ್ದ ಗ್ರಾಮೀಣರಿಗೆ ಹೊಸ ಸಂಗತಿಗಳು, ದೇಶದಲ್ಲಿನ ಆಗುಹೋಗುಗಳ ಬಗೆಗಿನ ಮಾಹಿತಿ ತಲುಪುವುದು ದುಸ್ತರವಾಗಿ, ಅವರ ಮಾನಸಿಕ ವಿಕಾಸಕ್ಕೆ ಹಾಗೂ ವ್ಯಕ್ತಿತ್ವ ಬೆಳವಣಿಗೆಗೆ, ತೀರಾ ಕಡಿಮೆ ಅವಕಾಶವಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಕಾಶವಾಣಿ 1935ರಲ್ಲೇ ಆಗಿನ ವಾಯುವ್ಯ ಸರಹದ್ದು ಪ್ರಾಂತ್ಯದಿಂದ ಗ್ರಾಮೀಣ ಕಾರ್ಯಕ್ರಮವನ್ನು ಪ್ರಾರಂಭಿಸಿತು. 1936ರಲ್ಲಿ ದೆಹಲಿ ಆಕಾಶವಾಣಿಯಿಂದ ಪಂಜಾಬಿನ ಗ್ರಾಮಸ್ಥರಿಗಾಗಿ, ಕೃಷಿ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಮುಂದೆ 1948ರಿಂದ 'ಗ್ರಾಮಾಂತರ ರೇಡಿಯೋ ಗೋಷ್ಠಿ' ಕಾರ್ಯಕ್ರಮಗಳು ವಾರಕ್ಕೆರಡು ದಿನ ಅರ್ಧ ಗಂಟೆಯ ವಿಶೇಷ ಕಾರ್ಯಕ್ರಮಗಳಾಗಿ ಪ್ರಸಾರವಾಗುತ್ತಿದ್ದವು. 20 ಜನ ಗ್ರಾಮೀಣ ಸದಸ್ಯರ ಗೋಷ್ಠಿ, ಹಳ್ಳಿಯಲ್ಲಿರುತ್ತಿದ್ದ ಸಾಮೂಹಿಕ ಶ್ರವಣ ಕೇಂದ್ರದಲ್ಲಿ ಸೇರಿ ಈ ಕಾರ್ಯಕ್ರಮಗಳನ್ನು ಕೇಳಿ, ಅಲ್ಲಿ ಹೇಳಿದ ವಿಷಯಗಳು ತಮ್ಮ ಹಳ್ಳಿಗೆ ಎಷ್ಟು ಪ್ರಯೋಜನಕಾರಿ ಎಂದು ಚರ್ಚಿಸಬೇಕಿತ್ತು . ಸೂಕ್ತ ಸಲಹೆ, ಹೆಚ್ಚಿನ ಮಾಹಿತಿಗಾಗಿ ಆಕಾಶವಾಣಿ ಕೇಂದ್ರವನ್ನು ಸಂಪರ್ಕಿಸಬೇಕಿತ್ತು . ಪುಣೆಯಲ್ಲಿ ನಡೆದ ಈ ಯಶಸ್ವೀ ಪ್ರಯೋಗ, ನಮ್ಮ ದೇಶದ ಎಲ್ಲಾ ಪ್ರಾದೇಶಿಕ ಕೇಂದ್ರಗಳಿಗೂ ವಿಸ್ತರಿಸಲಾಯಿತು. ಮುಂದೆ 60ರ ದಶಕದಿಂದ ರಾಜ್ಯದ ಅನೇಕ ಜಿಲ್ಲೆಗಳಲ್ಲಿ, ಬಾನುಲಿ ಕೇಂದ್ರಗಳಲ್ಲಿ - ಕೃಷಿ ಕಾರ್ಯಕ್ರಮಗಳು 'ಕೃಷಿರಂಗ' ಎಂಬ ಶೀರ್ಷಿಕೆಯಲ್ಲಿ ಪ್ರಾರಂಭವಾಗಿ ಸ್ಥಳೀಯ ಗ್ರಾಮಸ್ಥರ ಸಮಸ್ಯೆಗಳನ್ನು, ಪರಿಹಾರಗಳನ್ನು, ಆಶೋತ್ತರಗಳನ್ನು ಬಿಂಬಿಸುವಲ್ಲಿ ಯಶಸ್ವಿಯಾಯಿತು. ತಾಂತ್ರಿಕ ದೃಷ್ಟಿಯಿಂದ, ಎಫ್ಎಂ ಪ್ರಸಾರ ಹೆಚ್ಚಾಗಿ, ಪ್ರಸಾರದ ಗುಣಮಟ್ಟವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿತು. ಇದು ಆಕಾಶವಾಣಿಯ ಕೃಷಿ ಕಾರ್ಯಕ್ರಮ ಪ್ರಸಾರದ ಸಂಕ್ಷಿಪ್ತ ಇತಿಹಾಸ.
ಲಕ್ಷಾಂತರ ಮಂದಿ ಅನಕ್ಷರಸ್ಥರಿರುವ ನಮ್ಮ ದೇಶದಲ್ಲಿ ಯಾವುದೇ ಸಂಪರ್ಕ ಮಾಧ್ಯಮ ತಲುಪಲು ಅಸಾಧ್ಯವಿರುವ ಸಂದರ್ಭದಲ್ಲಿ, ಬಾನುಲಿ, ಅವರನ್ನು ಸಮರ್ಪಕವಾಗಿ ತಲುಪಬಲ್ಲುದು ಎಂಬ ಸತ್ಯಾಂಶವನ್ನು ಮನಗಂಡ ಭಾರತ ಸರ್ಕಾರದ ಕೃಷಿ ಮಂತ್ರಾಲಯ, 2001ರಲ್ಲಿ ಆಕಾಶವಾಣಿಯ ಹಲವಾರು ಕೇಂದ್ರಗಳಿಗೆ, ಕೃಷಿ ಪ್ರಸಾರಕ್ಕಾಗಿಯೇ ವಿಶೇಷವಾದ ಧನ ಸಹಾಯ ಮಂಜೂರು ಮಾಡಿತು. ಗ್ರಾಮೀಣರ ಮನೆ - ಮನಗಳನ್ನು ಬೆಳಗುವಂತಹ ವಿಶೇಷ ಕಾರ್ಯಕ್ರಮಗಳ ಪ್ರಸಾರದ ಮೂಲಕ, ಬಾನುಲಿ ಗ್ರಾಮೀಣ ಅಭಿವೃದ್ದಿಯತ್ತ ದಾಪುಗಾಲು ಹಾಕಿತು. ಕಿಸಾನ್ ವಾಣಿಯಾಗಿ ಮೊಳಗಿತು. ರೈತರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿತು. ಈ ನಿಟ್ಟಿನಲ್ಲಿ ಆಕಾಶವಾಣಿ ಮೈಸೂರು ಕೇಂದ್ರವೂ ಸಾಕಷ್ಟು ಶ್ರಮವಹಿಸಿ ಕೆಲಸ ಆರಂಭಿಸಿತು . ಕೇಂದ್ರದ ಪ್ರಸಾರ, ಕೇವಲ ಪ್ರಸಾರಕ್ಕಾಗಿಯೇ ಉಳಿಯದೆ, ನಿಜವಾದ ಅರ್ಥದಲ್ಲಿ ಹಳ್ಳಿಗರ ಬದುಕು ಹಸನಾಗುವಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಬೇಕು ಎಂಬ ದೃಢ ಸಂಕಲ್ಪ ಹೊತ್ತು ಮುನ್ನಡೆಯಿತು.
ರೈತರ ಸಮಸ್ಯೆಗಳನ್ನು ಬಗೆಹರಿಸಲು ಇಲಾಖಾ ತಜ್ಞರುಗಳಿಂದ ಪ್ರಶ್ನೋತ್ತರ ಕಾರ್ಯಕ್ರಮಗಳು, ನೇರ ಫೋನ್ಇನ್ ಕಾರ್ಯಕ್ರಮಗಳು, ಪ್ರಗತಿಪರ ರೈತರ ಅನುಭವಗಳು, ಕೃಷಿ ಮಾಹಿತಿಗಳು.. ಇತ್ಯಾದಿಗಳು ಪ್ರಸಾರಕ್ಕಷ್ಟೇ ಸೀಮಿತಗೊಳ್ಳದೇ, ರೈತರನ್ನು ಸ್ವಾವಲಂಬಿಗಳಾಗಿಸುವತ್ತ ರೈತರ ಜಮೀನಿನಲ್ಲಿ ಪ್ರಸಾರದ ಮಾಹಿತಿ ಅನುಷ್ಠಾನಗೊಂಡು . . . ಬೀಜವೊಡೆದು, ಬೆಳೆಬೆಳೆದು, ಫಲ ನೀಡಿ ರೈತರ ಬದುಕನ್ನು ಬೆಳಗಿಸುವತ್ತ ವಿಶೇಷ ಪ್ರಯತ್ನ ನಡೆಸಲಾಯಿತು.
2006 ರಲ್ಲಿ 'ಬಾನುಲಿ ಕೃಷಿ ಮಾಹಿತಿ ಧಾರಣಾಶಕ್ತಿ ವೃದ್ಧಿ ಕಾರ್ಯಕ್ರಮ'ವನ್ನು ಮೈಸೂರು ಆಕಾಶವಾಣಿ, ವಲಯ ಕೃಷಿ ಸಂಶೋಧನಾ ಕೇಂದ್ರ, ವಿ.ಸಿ. ಫಾರಂ, ಮಂಡ್ಯ ಇವರ ಸಹಯೋಗದಲ್ಲಿ ಹಮ್ಮಿಕೊಂಡಿತು. ಕಡಿಮೆ ವೆಚ್ಚದಲ್ಲಿ, ರೈತರಿಗೆ, ಅವರ ಜಮೀನಿಗೆ ಅನುಕೂಲವಾಗುವಂತಹ ತಾಂತ್ರಿಕ ಮಾಹಿತಿಗಳನ್ನು ಆಕಾಶವಾಣಿ, ಮೈಸೂರು ಕೇಂದ್ರ ಪ್ರಸಾರ ಮಾಡುತ್ತಿದ್ದು, ಅವುಗಳ ಪ್ರಸಾರವನ್ನು ಕೇಳಿದ ರೈತರಿಗೆ, ಒಂದು ತಿಂಗಳ ನಂತರ ಲಿಖಿತ ಪರೀಕ್ಷೆ ನಡೆಸಿ (ಮಾಹಿತಿ ಮನದಟ್ಟಾಗಿರುವುದರ ಬಗ್ಗೆ) ವಿಜೇತರಾದವರಿಗೆ ರೇಡಿಯೋಗಳನ್ನು ಬಹುಮಾನವಾಗಿ ನೀಡಿ ಪ್ರೋತ್ಸಾಹಿಸಲಾಯಿತು. ಬಹುಮಾನ ವಿನಿಯೋಗದಿಂದಷ್ಟೇ ಕಾರ್ಯಕ್ರಮ ಮುಗಿಯಬಾರದು, ಬಂದಿದ್ದ ರೈತರಿಗೆ ಪ್ರಯೋಜನವಾಗುವ 'ಕೃಷಿ ಸಂಬಂಧಿ ತರಬೇತಿ' ನೀಡುವ ಮೂಲಕ ಅಂದಿನ ಕಾರ್ಯಕ್ರಮವನ್ನು ಸಫಲಗೊಳಿಸಬೇಕೆಂದು ಯೋಜಿಸಲಾಯಿತು. ಮಂಡ್ಯದ ವಲಯ ಕೃಷಿ ಸಂಶೋಧನಾ ಕೇಂದ್ರದವರು ರೈತರಿಗೆ ತಮ್ಮ ಕೇಂದ್ರದಲ್ಲಿ ವಿಶೇಷ ತರಬೇತಿಗಳನ್ನು ನೀಡಲು ಒಪ್ಪಿ ಸಹಕರಿಸಿದರು.
ಅದರಂತೆ 'ಬಾನುಲಿ ಕೃಷಿ ಮಾಹಿತಿ ಧಾರಣಾಶಕ್ತಿ ವೃದ್ಧಿ' ಮೊದಲ ಕಾರ್ಯಕ್ರಮವನ್ನು 2006ರ ಮೇ ತಿಂಗಳ 9ನೇ ದಿನಾಂಕದಂದು ಮಂಡ್ಯದ ವಿ.ಸಿ. ಫಾರಂನಲ್ಲಿ ಉದ್ಘಾಟಿಸಲಾಯಿತು. ಮಂಡ್ಯದ ವಿ.ಸಿ. ಫಾರಂನಲ್ಲಿ ಅಂದು ಮೊದಲಾದ ಕಾರ್ಯಕ್ರಮ ಪ್ರತಿ ತಿಂಗಳಿಗೊಂದರಂತೆ ನಿರಂತರವಾಗಿ ಇಂದಿಗೂ ನಡೆದುಕೊಂಡು ಬರುತ್ತಿದೆ. ನೂರಾರು ಕೃಷಿ ಸಂಬಂಧೀ ವಿಷಯಗಳಲ್ಲಿ ತರಬೇತಿ ಪಡೆದ ಈ ಬಾನುಲಿ ಕೃಷಿಕರು ನಿಜವಾದ ಅರ್ಥದಲ್ಲಿ ಇದರ ಪ್ರಯೋಜನ ಪಡೆದು ಸಫಲತೆಯನ್ನು ಕಂಡುಕೊಂಡಿದ್ದಾರೆ. ಪರಸ್ಪರ ವಿಚಾರ ವಿನಿಮಯ ನಡೆಸಿ, ಅನುಮಾನಗಳನ್ನು ಬಗೆಹರಿಸಿಕೊಂಡಿದ್ದಾರೆ. ತಾವು ಬೆಳೆದ ಉತ್ಪನ್ನಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಈ ತರಬೇತಿ ಕಾರ್ಯಕ್ರಮಗಳಲ್ಲಿ ಮೊದಮೊದಲು 20 ರಿಂದ 30 ಇದ್ದ ಅವರ ಸಂಖ್ಯೆ ಇಂದು 300 ರಿಂದ 400ರವರೆಗೂ ವಿಸ್ತರಿಸಿದೆ ಎಂದರೆ ಅತಿಶಯೋಕ್ತಿಯಲ್ಲ. 2007 ರಲ್ಲಿ 'ಕೃಷಿ ವಿಜಯವಾಣಿ' ಎನ್ನುವ ಸ್ಮರಣ ಸಂಚಿಕೆಯನ್ನು ವರ್ಷದ ಸಾಧನೆಯ ನೆನಪಿಗಾಗಿ ಹೊರತಂದರು. 'ಬಾನುಲಿ ಕೃಷಿ ಮಾಹಿತಿ ಧಾರಣಾಶಕ್ತಿ ವೃದ್ಧಿ ಕಾರ್ಯಕ್ರಮ' ಎಂಬ ಶೀರ್ಷಿಕೆ ಬದಲಾಗಿ 'ಬಾನುಲಿ ಕೃಷಿ ಬೆಳಗು' ಎಂಬ ಸಂಕ್ಷಿಪ್ತ ಶೀರ್ಷಿಕೆ ನೀಡಿ ತಮ್ಮ ಮನೆ-ಮನ ಬೆಳಗಿಸಿಕೊಂಡರು. ಮಂಡ್ಯದ ಕೃಷಿ ಇಲಾಖೆ, ಜಿಲ್ಲಾ ಪಂಚಾಯತ್ ಮಂಡ್ಯ, ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಮಂಡ್ಯ ವಾರ್ತಾ ಇಲಾಖೆ, ವಿಬ್ ಸೆಟಿ ಮತ್ತು ಮೈಸೂರಿನ ವಿಶ್ವೇಶ್ವರಯ್ಯ ಅಭಿವೃದ್ದಿ ಸಂಸ್ಥೆಯವರೂ ಈ ಬಾನುಲಿ ಕೃಷಿ ಬೆಳಗು ತರಬೇತಿ ಕಾರ್ಯಕ್ರಮಗಳಿಗೆ ಸಹಕಾರ ನೀಡಿದರು. ಸಂಘ ಸಂಸ್ಥೆಗಳಲ್ಲಿ ನಡೆಸುತ್ತಿದ ಈ ತರಬೇತಿ ಕಾಯುಕ್ರಮಗಳಿಂದ ಸ್ವಯಂ ಪ್ರೇರಿತರಾದ ರೈತ ಬಾಂಧವರು, ತಮ್ಮ ಜಮೀನಿನಲ್ಲೇ ಈ ವಿಶೇಷ ಕಾರ್ಯಕ್ರಮಗಳು ನಡೆಯುವಂತೆ ಏರ್ಪಾಡು ಮಾಡಿದರು. ನಾ ಮುಂದು ತಾ ಮುಂದು ಎಂಬಂತೆ ಖುಷಿಯಿಂದ ತಮ್ಮ ತಮ್ಮ ಜಮೀನುಗಳಲ್ಲಿ ಕಾರ್ಯಕ್ರಮ ನಡೆಸಲು ಮುಂಚಿತವಾಗಿ ದಿನಗಳನ್ನು ಕಾಯ್ದಿರಿಸಿಕೊಂಡರು. ಅಷ್ಟೇ ಅಲ್ಲ, ವರ್ಷದ ಷೆಡ್ಯೂಲನ್ನೇ ತಯಾರಿಸಿದರು. ಹೀಗಾಗಿ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ರೈತರ ಜಮೀನಿನಲ್ಲೇ ತರಬೇತಿ ಕಾರ್ಯಕ್ರಮಗಳು ನಡೆದು, ಯಶಸ್ಸು ಕಂಡುಕೊಂಡಿವೆ. ಎಲ್ಲ 'ಬಾನುಲಿ ಕೃಷಿ ಬೆಳಗು' ಕಾರ್ಯಕ್ರಮಗಳ ಹಿಂದೆ, ಬಾನುಲಿ ಕೃಷಿ ರೈತರ ಒಗ್ಗೂಡುವಿಕೆಗೆ ಮೈಸೂರು ಬಾನುಲಿ ಕೇಂದ್ರದ ಶ್ರೀ ಎನ್ ಕೇಶವಮೂರ್ತಿ ಅವರ ಪ್ರಯತ್ನವೇ ಪ್ರಮುಖವಾದುದು. ಅವರಿಗೆ ಸಹಾಯ ಸಹಕಾರ ನೀಡಿದವರು ಆಕಾಶವಾಣಿ ಕೇಂದ್ರದ ಶ್ರೀ ವಿ.ಮಾ. ಜಗದೀಶ್, ಆಕಾಶವಾಣಿ ನಿಲಯ ನಿರ್ದೇಶಕರು ಹಾಗೂ ಅಧಿಕಾರಿ ಸಿಬ್ಬಂದಿಗಳು. ಅದೇರೀತಿ ಬಾನುಲಿ ಕೃಷಿಕರ ದನಿಗೆ ಮುದ್ರಣ ಮಾಧ್ಯಮದ ಮೂಲಕ ಬರಹ ರೂಪಕೊಟ್ಟು ಅವರದೇ ಬರಹಗಳ, ಅವರದೇ ಅನಿಸಿಕೆಗಳ ಪರಸ್ಪರ ವಿನಿಮಯಗಳಿಗೆ ಮೀಸಲಾದ 'ನೇಗಿಲಯೋಗಿ' ಪತ್ರಿಕೆಯನ್ನು ರೂಪಿಸಿದವರು ವಾರ್ತಾ ಇಲಾಖೆಯ ಉಪನಿರ್ದೇಶಕ ಶ್ರೀ ಎ ಆರ್ ಪ್ರಕಾಶ್.ಮತ್ತೊಂದು ಹೆಮ್ಮೆಯ ಸಂಗತಿ ಎಂದರೆ - ಈ ಕೇಳುಗ ರೈತ ಬಾಂಧವರು 'ಬಾನುಲಿ ಕೃಷಿಕರ ಬಳಗ'ವನ್ನೇ ಸ್ಥಾಪಿಸಿಕೊಂಡಿದ್ದಾರೆ. ಆ ಬಳಗದ ಮೂಲಕ ವರ್ಷದ ಶ್ರೇಷ್ಠ ಬಾನುಲಿ ಕೃಷಿಕರನ್ನು ಆಯ್ಕೆ ಮಾಡಿ, ಅವರಿಗೆ 'ಬಾನುಲಿ ಕೃಷಿರತ್ನ' ಪ್ರಶಸ್ತಿ ನೀಡಿ ಗೌರವಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದಲ್ಲಿ ಬಾನುಲಿ ಕೃಷಿಕ ಸಮಾವೇಶ ನಡೆದರೆ ಚೆನ್ನ ಎಂದು ರೈತ ಬಂಧುಗಳ ಆಶಯವಾಗಿತ್ತು. ಅದರಂತೆ, ರೈತರಲ್ಲಿನ ಸಂಘಟನಾ ಶಕ್ತಿಯನ್ನು, ವಿಚಾರ ವಿನಿಮಯವನ್ನು, ಉತ್ಪನ್ನಗಳ ವಿನಿಮಯವನ್ನು ಹೆಚ್ಚಿಸಲು ಇದು ನೆರವಾಗಲಿ, ಅಷ್ಟೇ ಅಲ್ಲ, ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲೂ ಈ ಕಾರ್ಯಕ್ರಮಗಳು ನಡೆಯಲಿ, ರಾಜ್ಯದ ರೈತ ಮಿತ್ರರ ಏಳಿಗೆಗೆ ಆಕಾಶವಾಣಿ, ಕೃಷಿ ಇಲಾಖೆ, ಸ್ಥಳೀಯ ಸಂಘ ಸಂಸ್ಥೆಗಳು - ಒಟ್ಟಾರೆ ಶ್ರಮಿಸೋಣ ಎಂಬ ಸದುದ್ದೇಶದಿಂದ ರಾಜ್ಯಮಟ್ಟದ ಬಾನುಲಿ ಕೃಷಿಕರ ಸಮಾವೇಶವನ್ನು ಈ ವರ್ಷದಿಂದ ಪ್ರಾರಂಭಿಸಲಾಗಿದೆ. ಜೂನ್ ತಿಂಗಳ ದಿನಾಂಕ 17ರಂದು ಮಂಡ್ಯದ 'ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ' 'ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ಹಾಗೂ 'ಬಾನುಲಿ ಕೃಷಿಕರ ರಾಜ್ಯಮಟ್ಟದ ಸಮಾವೇಶ' ನಡೆಯಿತು.
ಸಮಾವೇಶವು ಮೈಸೂರು ಆಕಾಶವಾಣಿ, ವಾರ್ತಾ ಇಲಾಖೆ, ಮಂಡ್ಯದ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ, ವಿಜಯಾ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆ, ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಮೈಸೂರಿನ ವಿಶ್ವೇಶ್ವರಯ್ಯ ಡೆವಲಪ್ಮೆಂಟ್ ಆರ್ಗನೈಸೇಷನ್ ಹಾಗೂ ಮೈಸೂರು ಬಾನುಲಿ ಕೃಷಿಕರ ಬಳಗದ ಸಂಯುಕ್ತ ಆಶ್ರಯದಲ್ಲಿ ನಡೆಯಿತು. ಮಂಡ್ಯದ ಜಿಲ್ಲಾಧಿಕಾರಿ ಶ್ರೀ ಎಂ. ಮಹೇಶ್ವರರಾವ್ ಅವರು ಸಮಾರಂಭವನ್ನು ಉದ್ಘಾಟಿಸಿ ರೈತರನ್ನು ಲಾಭ ನಷ್ಟ ಗಮನಿಸದ ನಿಸ್ವಾರ್ಥ ಉದ್ಯಮಶೀಲ ಎಂದರು. ಈ ಸಂದರ್ಭದಲ್ಲಿ 'ನೇಗಿಲಯೋಗಿ' ಬಾನುಲಿ ಕೃಷಿ ವಾರ್ತಾ ಪತ್ರವನ್ನು ಲೋಕಾರ್ಪಣೆ ಮಾಡಿದ ರಾಜ್ಯ ವಾರ್ತಾ ಇಲಾಖೆ ನಿರ್ದೇಶಕ ಶ್ರೀ ಎನ್.ಆರ್. ವಿಶುಕುಮಾರ್ ವಾರ್ತಾ ಇಲಾಖೆಯಿಂದ ನಡೆದಿರುವ ಸಮುದಾಯ ರೇಡಿಯೋ ಕಾರ್ಯಕ್ರಮ 'ನಮ್ಮ ಬಾನುಲಿ' ವಿವರ ನೀಡಿ 'ನೇಗಿಲ ಯೋಗಿ' ಪತ್ರಿಕೆ ಪ್ರಾಯೋಜಕತ್ವದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ವಾರ್ತಾ ಇಲಾಖೆ ಉಪನಿರ್ದೇಶಕ ಶ್ರೀ ಎ ಆರ್ ಪ್ರಕಾಶ್ ಪತ್ರಿಕೆಯ ಆಶಯ ವಿವರಿಸಿದರು. 'ಕೃಷಿ ಕಲ್ಪ' ಬಾನುಲಿ ಕೃಷಿಕರ ಸ್ವಾವಲಂಬಿ ಉತ್ಪನ್ನಗಳ ಲೋಕಾರ್ಪಣೆಯೂ ನಡೆಯಿತು. ಬೆಂಗಳೂರು ಆಕಾಶವಾಣಿ ನಿಲಯ ನಿರ್ದೇಶಕ ಡಾ. ಚೇತನ್ ಎಸ್. ನಾಯಕ್, ವಿಜಯಾ ಬ್ಯಾಂಕ್ ಸಹಾಯಕ ಮಹಾ ಪ್ರಭಂದಕ ಶ್ರೀ ನಾಗೇಶ್ವರರಾವ್, ಬೆಂಗಳೂರಿನ ಕಿತ್ತೂರು ಬಳಗದ ಕೈಗಾರಿಕೋದ್ಯಮಿ ಶ್ರೀ.ಕೆ.ವಿ. ನಾರಾಯಣ್, ಮಂಡ್ಯದ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಶ್ರೀ ಮಹೇಶ್ ಚಂದ್ರ ಗುರು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ: ವಿಷಕಂಠ - ಕೃಷಿ ಉತ್ಪನ್ನಗಳ ಬಿಡುಗಡೆ ಮಾಡಿದರು. ಅಧ್ಯಕ್ಷತೆಯನ್ನು ಮಂಡ್ಯದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀ ಬಿ. ಶಿವರಾಜು ವಹಿಸಿದ್ದರು. 'ಜಾಗತಿಕ ಹವಾಮಾನ ಬದಲಾವಣೆ ಹಾಗೂ ಆಹಾರ ಭದ್ರತೆ' ವಿಷಯ ಕುರಿತು ವಿಶೇಷ ಉಪನ್ಯಾಸವನ್ನು ನಿವೃತ್ತ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಅ.ನ. ಎಲ್ಲಪ್ಪರೆಡ್ಡಿ ನೀಡಿದರು. ಮೈಸೂರು ಆಕಾಶವಾಣಿ ನಿಲಯ ನಿರ್ದೇಶಕ ಡಾ: ಎಂ.ಎಸ್. ವಿಜಯಾ ಹರನ್ ಅವರು ಪ್ರಗತಿಪರ ರೈತ ಮಹಿಳೆ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕ್ ಹನುಮನಹಳ್ಳಿಯ ಶ್ರೀಮತಿ ಇಂದಿರಮ್ಮ ನಾಗಭೂಷಣಾರಾಧ್ಯ ಅವರಿಗೆ, 'ಬಾನುಲಿ ಕೃಷಿ ರತ್ನ' ಪ್ರಶಸ್ತಿ ಪ್ರಧಾನ ಮಾಡಿದರು. ಮೈಸೂರು ಬಾನುಲಿ ಕೃಷಿಕರ ಬಳಗದ ಅಧ್ಯಕ್ಷ ಶ್ರೀ ಬಿ. ವೀರಭದ್ರಯ್ಯ ಅವರು ಬಾನುಲಿ ಕೃಷಿಕರ ಬಳಗದ ಅಭ್ಯುದಯಕ್ಕೆ ನೆರವಾಗುತ್ತಿರುವ ಆಕಾಶವಾಣಿ ಮೈಸೂರು, ಮಂಡ್ಯದ ಕೃಷಿ ಇಲಾಖೆ, ವಿಜಯಾ ಬ್ಯಾಂಕ್ ಸ್ವಉದ್ಯೋಗ ತರಬೇತಿ ಸಂಸ್ಥೆ, ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಗಳಿಗೆ ಅಭಿನಂದನಾ ಪತ್ರ ಸಮರ್ಪಣೆ ಮಾಡಿದರು. ಆಕಾಶವಾಣಿಯ ಶ್ರೀ ಕೇಶವಮೂರ್ತಿ ಹಾಗೂ ಇತರ ಅಧಿಕಾರಿ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಹೆಗಲುಕೊಟ್ಟರು.

ಬರಹ : ಮಂಜುನಾಥ ಬಾಬು
ಸಹಾಯಕ ನಿರ್ದೇಶಕ
ವಾರ್ತಾ ಇಲಾಖೆ

Friday, June 19, 2009


ಬಾನುಲಿ ಕೃಷಿ ರತ್ನ - ಇಂದಿರಮ್ಮ ನಾಗಭೂಷಣಾರಾಧ್ಯ
ಹನುಮನಹಳ್ಳಿ ಇಂದಿರಮ್ಮ ಹತ್ತೂರಿಗೆ ಹೆಸರುವಾಸಿ. ತೆಳುಕಾಯದ, ಕಂಚಿನ ಕಂಠದ, ದೃಢ ಮನಸ್ಸಿನ ಇಂದಿರಮ್ಮ ಮಾತನಾಡಲು ಆರಂಭಿಸಿದ್ರೆ ಎಂತಹ ಸಭೆಯೂ ಆಲಿಸಬೇಕು ಆ ರೀತಿ ಇದೆ ಇಂದಿರಮ್ಮನವರ ವ್ಯಕ್ತಿತ್ವ. ಬಾನುಲಿ ಕೃಷಿ ರತ್ನ ಪ್ರಶಸ್ತಿಯ ಮೌಲ್ಯವನ್ನೇ ಹೆಚ್ಚಿಸಿದ್ದಾರೆ ರೈತ ಮಹಿಳೆ ಇಂದಿರಮ್ಮ.
ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕು ಹನುಮನಹಳ್ಳಿ ಗ್ರಾಮದ ನಾಗಭೂಷಣಾರಾಧ್ಯರು ಮನುವೆಯಾದದ್ದು ಕರತಾಳಿನ ಇಂದಿರಮ್ಮನವರನ್ನು. ಚಿಕ್ಕ ವಯಸ್ಸಿನಲ್ಲಿ ಗಂಡನ ಮನೆ ಸೇರಿದ ಇಂದಿರಮ್ಮನವರು, ತಮ್ಮ ಪತಿಗಿಂತ ಜಾಸ್ತಿ ಓದಿದ್ದಾರೆ. ಆದ್ರೆ ಗಂಡನನ್ನು ನೆರಳಿನಂತೆ ಅನುಸರಿಸಿ ನಡೆದಿದ್ದಾರೆ. ಗಂಡನ ಜತೆ ರಟ್ಟೆಮುರಿದು ದುಡಿದು, ಜಮೀನು ರೂಢಿಸಿ, ಕುಟುಂಬ ಕಟ್ಟಿ , ಬೆಳೆ ಬೆಳೆದು, ಬದುಕು ಕಟ್ಟಿದ್ದಾರೆ. ಮಕ್ಕಳನ್ನು ನೆಲೆ ಸೇರಿಸಲು ನಿರಂತರ ಶ್ರಮಿಸಿದ್ದಾರೆ. ಇಂದಿರಮ್ಮನವರ ಪಾದರಸದಂತಹ ವ್ಯಕ್ತಿತ್ವ ಗಮನಿಸಿಯೇ ಪತಿ ನಾಗಭೂಷಣಾರಾಧ್ಯರು ಇಂದಿರಮ್ಮನವರನ್ನು ಕೌಟುಂಬಿಕ ಕಟ್ಟುಪಾಡುಗಳಿಂದ ಕಟ್ಟುವ ಯತ್ನ ಮಾಡಿಲ್ಲ. ಹೀಗಾಗಿ ಇಂದಿರಮ್ಮನವರು ಇಂದು ಎಲ್ಲ ಅಭಿವೃದ್ಧಿ ಇಲಾಖೆಗಳಿಗೂ ಬೇಕಾದ ವ್ಯಕ್ತಿ. ಎಲ್ಲ ಮಹಿಳಾ ತರಬೇತಿಗಳಲ್ಲೂ ಇಂದಿರಮ್ಮನವರ ಹಾಜರಿ ಇರಲೇಬೇಕು. ಇಂದಿರಮ್ಮನವರ ಮುಂದಾಳತ್ವದಲ್ಲಿಯೇ ಹನುಮನಹಳ್ಳಿಯ ಮಹಿಳೆಯರು ಸಂಘಟಿತರಾಗಿದ್ದಾರೆ. ತಮ್ಮದೇ ಆದ ಪಶು ಆಹಾರ ತಯಾರಿಕಾ ಘಟಕ ತೆರೆದಿದ್ದಾರೆ. ಹನುಮನಹಳ್ಳಿ ಹಾಗೂ ಅಕ್ಕಪಕ್ಕದ ಹಳ್ಳಿಗಳ ರೈತರಿಂದ ಕಾಳುಕಡ್ಡಿ ಖರೀದಿಸಿ, ಅದನ್ನು ಪುಡಿಮಾಡಿ, ಪಶು ಆಹಾರ ತಯಾರಿಸಿ ಸಮೀಪದ ಹಾಲಿನ ಡೈರಿಗೆ ಮಾರುತ್ತಿದ್ದಾರೆ ಹನುಮನಹಳ್ಳಿಯ ಸ್ತ್ರೀಯರು. ಇವರಿಗೆ ಇಂದಿರಮ್ಮನೇ ಲೀಡರ್.
2008ನೇ ಇಸವಿಯ ಮೊದಲ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ನಡೆದದ್ದು ಇಂದಿರಮ್ಮನವರ ಜಮೀನಿನಲ್ಲಿ. ಈ ಕಾರಣವಾಗಿ ಆಕಾಶವಾಣಿ ಸಂದರ್ಶನಕ್ಕೆ ಬಂದಿದ್ದ ದಂಪತಿಗಳಾದ ಇಂದಿರಮ್ಮ ನಾಗಭೂಷಣಾರಾಧ್ಯ ಇಬ್ಬರೂ ಪರಸ್ಪರ ಮೆಚ್ಚಿಕೊಳ್ಳುತ್ತಲೇ, ಸಂಸಾರದ ರಥ ಸಾಗಿಸಿದ್ದನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ್ದನ್ನು ಕೇಳಿದ ನೂರಾರು ಶ್ರೋತೃಗಳು ಆಕಾಶವಾಣಿಗೆ ಮಾರುತ್ತರ ಬರೆದದ್ದು ಇನ್ನೂ ನನಗೆ ನೆನಪಿದೆ. ಅನುರೂಪವಾದ ದಾಂಪತ್ಯ ಇವರದ್ದಲ್ಲವೇ ಎಂದು ಸಂದರ್ಶನದುದ್ದಕ್ಕೂ ನನಗೆ ಅನ್ನಿಸಿದೆ. ಎಲ್ಲಿಯೂ ಒಬ್ಬರನ್ನೊಬ್ಬರು ಮೇಲರಿಮೆ ಕೀಳರಿಮೆಯಿಂದ ಕಾಣದೆ ಪರಸ್ಪರ ಪೂರಕವಾಗಿ ಬದುಕಿರುವುದು ಇಂದಿನ ಯುವ ದಂಪತಿಗಳಿಗೆ ಮಾದರಿಯಾಗಬೇಕು. ತುಂಬಿದ ಸಂಸಾರಕ್ಕೆ ಸೊಸೆಯಾಗಿ ಬಂದು, ಅತ್ತೆಗೆ ಸರಿಯಾದ ಸೊಸೆ ಅನ್ನಿಸಿಕೊಂಡಿರುವ ಇಂದಿರಮ್ಮ ಈ ತಮ್ಮ ಇಬ್ಬರು ಗಂಡುಮಕ್ಕಳ ಹೆಂಡಿರಿಗೆ ಮೆಚ್ಚಿನ ಅತ್ತೆ.
ಆಕಾಶವಾಣಿ ಸಂದರ್ಶನದಲ್ಲಿ ಇಂದಿರಮ್ಮ ಹೇಳಿದ್ರು , ಅವರಿಗೆ ಬಾಲ್ಯದಿಂದಲೂ ರೇಡಿಯೋ ಕೇಳುವ ಹುಚ್ಚಂತೆ. ಅವರು ಬೆಂಗಳೂರಿಗೆ ನೆಂಟರ ಮನೆಗೆ ಹೋಗಿದ್ದಾಗ, ಇವರೊಬ್ಬರನ್ನು ಮನೇಲಿ ಬಿಟ್ಟು ಉಳಿದವರೆಲ್ಲಾ ಬೆಂಗಳೂರು ಆಕಾಶವಾಣಿ ನೋಡಲು ಹೋದರಂತೆ. ಆಗ ಇಂದಿರಮ್ಮನವರಿಗೆ ಬರೀ ಎಂಟು ವರುಷ. ಆಗಲೇ ಇಂದಿರಮ್ಮ ನಿರ್ಧರಿಸಿದರಂತೆ, ಮುಂದೆ ನಾನು ಎಲ್ಲರಂತೆ ಆಕಾಶವಾಣಿ ನೋಡಲು ಹೋಗಬಾರದು, ಹೋದರೆ ಆಕಾಶವಾಣಿಯ ಆಹ್ವಾನದ ಮೇಲೆ ಸಂದರ್ಶನಕ್ಕೆ ಮಾತ್ರ ಹೋಗಬೇಕು ಅಂತ. ಅಂದುಕೊಂಡಿದ್ದನ್ನು ಸಾಧಿಸಿದ ಆತ್ಮವಿಶ್ವಾಸ ಅಂದು ಇಂದಿರಮ್ಮನವರ ಮುಖದಲ್ಲಿತ್ತು. ಅಭಿಮಾನಪೂರಕವಾದ ನೋಟ ಪತಿ ನಾಗಭೂಷಣರಾಧ್ಯರ ಕಂಗಳಲ್ಲಿತ್ತು.
ಇಂದಿರಮ್ಮನವರ ಜಮೀನಿನಲ್ಲಿ ಈಗ ಎಲ್ಲವೂ ಇದೆ. ನಿರಂತರವಾಗಿ ಮೈಸೂರು ಆಕಾಶವಾಣಿಯ ಕೃಷಿರಂಗ ಕಿಸಾನ್ ವಾಣಿ ಕಾರ್ಯಕ್ರಮಗಳನ್ನು ಪತಿಯ ಜತೆ ಕೇಳುವ ಇಂದಿರಮ್ಮನವರು ತೋಟದಲ್ಲಿಯೇ ರೇಡಿಯೋ ಇಟ್ಟುಕೊಂಡಿದ್ದಾರೆ. ಕಳೆದ ಮೂರು ವರುಷಗಳಿಂದ ಸತತವಾಗಿ 'ಬಾನುಲಿ ಕೃಷಿ ಬೆಳಗು' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕೃಷಿ, ತೋಟಗಾರಿಕೆ, ರೇಷ್ಮೆ, ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಕೇಂದ್ರ, ಪಶುಸಂಗೋಪನೆ - ಹೀಗೆ ಎಲ್ಲ ಇಲಾಖೆಗಳೊಡನೆ ನಿಕಟವಾದ ಬಾಂಧವ್ಯ ಇಂದಿರಮ್ಮನವರಿಗೆ. ಶ್ರೇಷ್ಠ ರೈತ ಮಹಿಳೆ ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಇವರನ್ನು ಸನ್ಮಾನಿಸಿದೆ. ತನ್ನಂತಿರುವ ಇತರೇ ರೈತ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಇಂದಿರಮ್ಮ.
ಸಮಗ್ರ ಸಾವಯವ ಬೇಸಾಯ ವಿಧಾನ ಇಂದಿರಮ್ಮ ನಾಗಭೂಷಣಾರಾಧ್ಯರ ಸಧ್ಯದ ಬೇಸಾಯದ ರೀತಿ. ನಮ್ಮ ಈ ಸುಸ್ಥಿರ ಬೇಸಾಯಕ್ಕೆ ಸ್ಪೂರ್ತಿ ಮೈಸೂರು ಆಕಾಶವಾಣಿ ಎಂದು ಕೃತಜ್ಞತೆಯಿಂದ ನೆನೆಯುತ್ತಾರೆ. ಸಾವಯವ ವಿಧಾನದಲ್ಲಿ ತಂಬಾಕು ಬೆಳೆದು, ತಂಬಾಕು ಹರಾಜು ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಕೃಷಿ ಇಲಾಖೆ ನೆರವು ಪಡೆದು ಎರೆಗೊಬ್ಬರದ ತೊಟ್ಟಿ ನಿರ್ಮಿಸಿ ಎರೆಗೊಬ್ಬರ ಉತ್ಪಾದನೆ ಮಾಡುತ್ತಿದ್ದಾರೆ. ಜಾನುವಾರುಗಳನ್ನು ಸಾಕಿದ್ದಾರೆ. ತಮ್ಮ ಕುಟುಂಬಕ್ಕೆ ಬೇಕಾದ ಸೊಪ್ಪು, ತರಕಾತಿ ಬೆಳೆಯಲು ಜಮೀನಿನ ಅಂಚಿನಲ್ಲಿ ಕೈತೋಟ ಮಾಡಿದ್ದಾರೆ. ಮನೆಯಲ್ಲಿ ಬಳಸುವ ಹಣ್ಣು ತರಕಾರಿಗೆ ರಾಸಾಯನಿಕ ಔಷಧ ಹೊಡೆಯದೆ, ಗೊಬ್ಬರ ಬಳಸದೆ ಬೆಳೆಯುತ್ತಾರೆ. ತನಗೆ ಬೇಕಾದ ಎಲ್ಲವನ್ನೂ ತನ್ನ ಜಮೀನಿನಲ್ಲಿ ಬೆಳೆಯುವವನು ನಿಜವಾದ ರೈತ ಎಂದು ದೃಢಮನಸ್ಸಿನಿಂದ ನುಡಿಯುತ್ತಾರೆ.

ಹನುಮನಹಳ್ಳಿಯ ರೈತ ಮಹಿಳೆಯರ ಇಂದಿರಕ್ಕ ಸುತ್ತಮುತ್ತಲ ಹಳ್ಳಿಯಲ್ಲಿ ಜನಪ್ರಿಯ. ಆದರ್ಶ ರೈತ ಮಹಿಳಾ ಗುಂಪುಗಳನ್ನು ಇವರು ಸ್ಥಾಪಿಸಿದ್ದಾರೆ. ತರಕಾರಿ ನೀಡುತ್ತಿದ್ದಾರೆ. ಸ್ತ್ರೀಶಕ್ತಿ ಗುಂಪುಗಳು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಕರ್ನಾಟಕ ರಾಜ್ಯದಲ್ಲಿ ಎಲ್ಲೇ ಇರಲಿ, ಅಲ್ಲಿ ಇಂದಿರಮ್ಮ ತಮ್ಮ ಗುಂಪಿನ ಮಹಿಳೆಯರೊಂದಿಗೆ ಹಾಜರ್. ನಾಲ್ಕೈದು ದಿನ ಅಲ್ಲೇ ಉಳಿದು, ಉತ್ಪನ್ನಗಳನ್ನು ಮಾರಿ ಅಧಿಕಾರಿಗಳಿಂದ ಮೆಚ್ಚುಗೆ ಪಡೆದೇ ಇಂದಿರಮ್ಮ ಮನೆಗೆ ಹಿಂದಿರುಗುವುದು. ಅಲ್ಲಿಯವರೆಗೆ ನಾಗಭೂಣಾರಾಧ್ಯರದ್ದೇ ಮನೆಯ ನಿರ್ವಹಣೆ.
ಇಂದಿರಮ್ಮ ಗ್ರಾಮೀಣ ಸ್ತ್ರೀಸಮಾಜದ ಶಕ್ತಿ ಹಾಗೂ ನಿಜವಾದ ಆಸ್ತಿ. ಬಾನುಲಿ ಕೃಷಿ ರತ್ನ ಪ್ರಶಸ್ತಿ ಪಡೆದಿರುವ ಇವರ ಬದುಕು ಇತರ ಗ್ರಾಮೀಣ ಕುಟುಂಬಗಳಿಗೆ ನಿಜವಾದ ಸ್ಪೂರ್ತಿಯಾಗಲಿ ಎಂಬುದು ನನ್ನ ಆಶಯ. ಒಂದು ಕೃಷಿ ಕುಟುಂಬ ಆದರ್ಶವಾಗಿ ಹೇಗೆ ಬದುಕಬಹುದು ಎಂಬುದಕ್ಕೆ ಇಂದಿರಮ್ಮನವರ ಕುಟುಂಬ ಮಾದರಿ. ಹಳ್ಳಿ ಬಗ್ಗೆ ಪ್ರೀತಿ ಹಾಗೂ ವ್ಯವಸಾಯದ ಬಗ್ಗೆ ಅಭಿಮಾನ ಇಲ್ಲದ ಇಂದಿನ ಯುವ ಜನತೆ ಇಂದಿರಮ್ಮ ನಾಗಭೂಷಣಾರಾಧ್ಯರಿಂದ ಕಲಿಯುವುದು ಬಹಳಷ್ಟಿದೆ. ಇಂದಿರಮ್ಮನವರಂತ ಒಬ್ಬ ಮಹಿಳೆ ಒಂದು ಹಳ್ಳಿಯಲ್ಲಿ ಇದ್ದರೆ ಸಾಕು, ಅದೆಷ್ಟು ಕುಟುಂಬಗಳ ಮನೆ ಬೆಳಗುತ್ತೆ, ಗ್ರಾಮೀಣ ಮಹಿಳಾ ಸ್ವಾವಲಂಬನೆಯ ಕನಸು ನನಸಾಗುತ್ತೆ.
ಲೇಖನ -ಎನ್ ಕೇಶವ ಮೂರ್ತಿ
ಪ್ರಸಾರ ನಿರ್ವಾಹಕರು (ಕೃಷಿ )
ಆಕಾಶವಾಣಿ ಮೈಸೂರು