Friday, June 19, 2009


ಬಾನುಲಿ ಕೃಷಿ ರತ್ನ - ಇಂದಿರಮ್ಮ ನಾಗಭೂಷಣಾರಾಧ್ಯ
ಹನುಮನಹಳ್ಳಿ ಇಂದಿರಮ್ಮ ಹತ್ತೂರಿಗೆ ಹೆಸರುವಾಸಿ. ತೆಳುಕಾಯದ, ಕಂಚಿನ ಕಂಠದ, ದೃಢ ಮನಸ್ಸಿನ ಇಂದಿರಮ್ಮ ಮಾತನಾಡಲು ಆರಂಭಿಸಿದ್ರೆ ಎಂತಹ ಸಭೆಯೂ ಆಲಿಸಬೇಕು ಆ ರೀತಿ ಇದೆ ಇಂದಿರಮ್ಮನವರ ವ್ಯಕ್ತಿತ್ವ. ಬಾನುಲಿ ಕೃಷಿ ರತ್ನ ಪ್ರಶಸ್ತಿಯ ಮೌಲ್ಯವನ್ನೇ ಹೆಚ್ಚಿಸಿದ್ದಾರೆ ರೈತ ಮಹಿಳೆ ಇಂದಿರಮ್ಮ.
ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕು ಹನುಮನಹಳ್ಳಿ ಗ್ರಾಮದ ನಾಗಭೂಷಣಾರಾಧ್ಯರು ಮನುವೆಯಾದದ್ದು ಕರತಾಳಿನ ಇಂದಿರಮ್ಮನವರನ್ನು. ಚಿಕ್ಕ ವಯಸ್ಸಿನಲ್ಲಿ ಗಂಡನ ಮನೆ ಸೇರಿದ ಇಂದಿರಮ್ಮನವರು, ತಮ್ಮ ಪತಿಗಿಂತ ಜಾಸ್ತಿ ಓದಿದ್ದಾರೆ. ಆದ್ರೆ ಗಂಡನನ್ನು ನೆರಳಿನಂತೆ ಅನುಸರಿಸಿ ನಡೆದಿದ್ದಾರೆ. ಗಂಡನ ಜತೆ ರಟ್ಟೆಮುರಿದು ದುಡಿದು, ಜಮೀನು ರೂಢಿಸಿ, ಕುಟುಂಬ ಕಟ್ಟಿ , ಬೆಳೆ ಬೆಳೆದು, ಬದುಕು ಕಟ್ಟಿದ್ದಾರೆ. ಮಕ್ಕಳನ್ನು ನೆಲೆ ಸೇರಿಸಲು ನಿರಂತರ ಶ್ರಮಿಸಿದ್ದಾರೆ. ಇಂದಿರಮ್ಮನವರ ಪಾದರಸದಂತಹ ವ್ಯಕ್ತಿತ್ವ ಗಮನಿಸಿಯೇ ಪತಿ ನಾಗಭೂಷಣಾರಾಧ್ಯರು ಇಂದಿರಮ್ಮನವರನ್ನು ಕೌಟುಂಬಿಕ ಕಟ್ಟುಪಾಡುಗಳಿಂದ ಕಟ್ಟುವ ಯತ್ನ ಮಾಡಿಲ್ಲ. ಹೀಗಾಗಿ ಇಂದಿರಮ್ಮನವರು ಇಂದು ಎಲ್ಲ ಅಭಿವೃದ್ಧಿ ಇಲಾಖೆಗಳಿಗೂ ಬೇಕಾದ ವ್ಯಕ್ತಿ. ಎಲ್ಲ ಮಹಿಳಾ ತರಬೇತಿಗಳಲ್ಲೂ ಇಂದಿರಮ್ಮನವರ ಹಾಜರಿ ಇರಲೇಬೇಕು. ಇಂದಿರಮ್ಮನವರ ಮುಂದಾಳತ್ವದಲ್ಲಿಯೇ ಹನುಮನಹಳ್ಳಿಯ ಮಹಿಳೆಯರು ಸಂಘಟಿತರಾಗಿದ್ದಾರೆ. ತಮ್ಮದೇ ಆದ ಪಶು ಆಹಾರ ತಯಾರಿಕಾ ಘಟಕ ತೆರೆದಿದ್ದಾರೆ. ಹನುಮನಹಳ್ಳಿ ಹಾಗೂ ಅಕ್ಕಪಕ್ಕದ ಹಳ್ಳಿಗಳ ರೈತರಿಂದ ಕಾಳುಕಡ್ಡಿ ಖರೀದಿಸಿ, ಅದನ್ನು ಪುಡಿಮಾಡಿ, ಪಶು ಆಹಾರ ತಯಾರಿಸಿ ಸಮೀಪದ ಹಾಲಿನ ಡೈರಿಗೆ ಮಾರುತ್ತಿದ್ದಾರೆ ಹನುಮನಹಳ್ಳಿಯ ಸ್ತ್ರೀಯರು. ಇವರಿಗೆ ಇಂದಿರಮ್ಮನೇ ಲೀಡರ್.
2008ನೇ ಇಸವಿಯ ಮೊದಲ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ನಡೆದದ್ದು ಇಂದಿರಮ್ಮನವರ ಜಮೀನಿನಲ್ಲಿ. ಈ ಕಾರಣವಾಗಿ ಆಕಾಶವಾಣಿ ಸಂದರ್ಶನಕ್ಕೆ ಬಂದಿದ್ದ ದಂಪತಿಗಳಾದ ಇಂದಿರಮ್ಮ ನಾಗಭೂಷಣಾರಾಧ್ಯ ಇಬ್ಬರೂ ಪರಸ್ಪರ ಮೆಚ್ಚಿಕೊಳ್ಳುತ್ತಲೇ, ಸಂಸಾರದ ರಥ ಸಾಗಿಸಿದ್ದನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ್ದನ್ನು ಕೇಳಿದ ನೂರಾರು ಶ್ರೋತೃಗಳು ಆಕಾಶವಾಣಿಗೆ ಮಾರುತ್ತರ ಬರೆದದ್ದು ಇನ್ನೂ ನನಗೆ ನೆನಪಿದೆ. ಅನುರೂಪವಾದ ದಾಂಪತ್ಯ ಇವರದ್ದಲ್ಲವೇ ಎಂದು ಸಂದರ್ಶನದುದ್ದಕ್ಕೂ ನನಗೆ ಅನ್ನಿಸಿದೆ. ಎಲ್ಲಿಯೂ ಒಬ್ಬರನ್ನೊಬ್ಬರು ಮೇಲರಿಮೆ ಕೀಳರಿಮೆಯಿಂದ ಕಾಣದೆ ಪರಸ್ಪರ ಪೂರಕವಾಗಿ ಬದುಕಿರುವುದು ಇಂದಿನ ಯುವ ದಂಪತಿಗಳಿಗೆ ಮಾದರಿಯಾಗಬೇಕು. ತುಂಬಿದ ಸಂಸಾರಕ್ಕೆ ಸೊಸೆಯಾಗಿ ಬಂದು, ಅತ್ತೆಗೆ ಸರಿಯಾದ ಸೊಸೆ ಅನ್ನಿಸಿಕೊಂಡಿರುವ ಇಂದಿರಮ್ಮ ಈ ತಮ್ಮ ಇಬ್ಬರು ಗಂಡುಮಕ್ಕಳ ಹೆಂಡಿರಿಗೆ ಮೆಚ್ಚಿನ ಅತ್ತೆ.
ಆಕಾಶವಾಣಿ ಸಂದರ್ಶನದಲ್ಲಿ ಇಂದಿರಮ್ಮ ಹೇಳಿದ್ರು , ಅವರಿಗೆ ಬಾಲ್ಯದಿಂದಲೂ ರೇಡಿಯೋ ಕೇಳುವ ಹುಚ್ಚಂತೆ. ಅವರು ಬೆಂಗಳೂರಿಗೆ ನೆಂಟರ ಮನೆಗೆ ಹೋಗಿದ್ದಾಗ, ಇವರೊಬ್ಬರನ್ನು ಮನೇಲಿ ಬಿಟ್ಟು ಉಳಿದವರೆಲ್ಲಾ ಬೆಂಗಳೂರು ಆಕಾಶವಾಣಿ ನೋಡಲು ಹೋದರಂತೆ. ಆಗ ಇಂದಿರಮ್ಮನವರಿಗೆ ಬರೀ ಎಂಟು ವರುಷ. ಆಗಲೇ ಇಂದಿರಮ್ಮ ನಿರ್ಧರಿಸಿದರಂತೆ, ಮುಂದೆ ನಾನು ಎಲ್ಲರಂತೆ ಆಕಾಶವಾಣಿ ನೋಡಲು ಹೋಗಬಾರದು, ಹೋದರೆ ಆಕಾಶವಾಣಿಯ ಆಹ್ವಾನದ ಮೇಲೆ ಸಂದರ್ಶನಕ್ಕೆ ಮಾತ್ರ ಹೋಗಬೇಕು ಅಂತ. ಅಂದುಕೊಂಡಿದ್ದನ್ನು ಸಾಧಿಸಿದ ಆತ್ಮವಿಶ್ವಾಸ ಅಂದು ಇಂದಿರಮ್ಮನವರ ಮುಖದಲ್ಲಿತ್ತು. ಅಭಿಮಾನಪೂರಕವಾದ ನೋಟ ಪತಿ ನಾಗಭೂಷಣರಾಧ್ಯರ ಕಂಗಳಲ್ಲಿತ್ತು.
ಇಂದಿರಮ್ಮನವರ ಜಮೀನಿನಲ್ಲಿ ಈಗ ಎಲ್ಲವೂ ಇದೆ. ನಿರಂತರವಾಗಿ ಮೈಸೂರು ಆಕಾಶವಾಣಿಯ ಕೃಷಿರಂಗ ಕಿಸಾನ್ ವಾಣಿ ಕಾರ್ಯಕ್ರಮಗಳನ್ನು ಪತಿಯ ಜತೆ ಕೇಳುವ ಇಂದಿರಮ್ಮನವರು ತೋಟದಲ್ಲಿಯೇ ರೇಡಿಯೋ ಇಟ್ಟುಕೊಂಡಿದ್ದಾರೆ. ಕಳೆದ ಮೂರು ವರುಷಗಳಿಂದ ಸತತವಾಗಿ 'ಬಾನುಲಿ ಕೃಷಿ ಬೆಳಗು' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕೃಷಿ, ತೋಟಗಾರಿಕೆ, ರೇಷ್ಮೆ, ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಕೇಂದ್ರ, ಪಶುಸಂಗೋಪನೆ - ಹೀಗೆ ಎಲ್ಲ ಇಲಾಖೆಗಳೊಡನೆ ನಿಕಟವಾದ ಬಾಂಧವ್ಯ ಇಂದಿರಮ್ಮನವರಿಗೆ. ಶ್ರೇಷ್ಠ ರೈತ ಮಹಿಳೆ ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಇವರನ್ನು ಸನ್ಮಾನಿಸಿದೆ. ತನ್ನಂತಿರುವ ಇತರೇ ರೈತ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಇಂದಿರಮ್ಮ.
ಸಮಗ್ರ ಸಾವಯವ ಬೇಸಾಯ ವಿಧಾನ ಇಂದಿರಮ್ಮ ನಾಗಭೂಷಣಾರಾಧ್ಯರ ಸಧ್ಯದ ಬೇಸಾಯದ ರೀತಿ. ನಮ್ಮ ಈ ಸುಸ್ಥಿರ ಬೇಸಾಯಕ್ಕೆ ಸ್ಪೂರ್ತಿ ಮೈಸೂರು ಆಕಾಶವಾಣಿ ಎಂದು ಕೃತಜ್ಞತೆಯಿಂದ ನೆನೆಯುತ್ತಾರೆ. ಸಾವಯವ ವಿಧಾನದಲ್ಲಿ ತಂಬಾಕು ಬೆಳೆದು, ತಂಬಾಕು ಹರಾಜು ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಕೃಷಿ ಇಲಾಖೆ ನೆರವು ಪಡೆದು ಎರೆಗೊಬ್ಬರದ ತೊಟ್ಟಿ ನಿರ್ಮಿಸಿ ಎರೆಗೊಬ್ಬರ ಉತ್ಪಾದನೆ ಮಾಡುತ್ತಿದ್ದಾರೆ. ಜಾನುವಾರುಗಳನ್ನು ಸಾಕಿದ್ದಾರೆ. ತಮ್ಮ ಕುಟುಂಬಕ್ಕೆ ಬೇಕಾದ ಸೊಪ್ಪು, ತರಕಾತಿ ಬೆಳೆಯಲು ಜಮೀನಿನ ಅಂಚಿನಲ್ಲಿ ಕೈತೋಟ ಮಾಡಿದ್ದಾರೆ. ಮನೆಯಲ್ಲಿ ಬಳಸುವ ಹಣ್ಣು ತರಕಾರಿಗೆ ರಾಸಾಯನಿಕ ಔಷಧ ಹೊಡೆಯದೆ, ಗೊಬ್ಬರ ಬಳಸದೆ ಬೆಳೆಯುತ್ತಾರೆ. ತನಗೆ ಬೇಕಾದ ಎಲ್ಲವನ್ನೂ ತನ್ನ ಜಮೀನಿನಲ್ಲಿ ಬೆಳೆಯುವವನು ನಿಜವಾದ ರೈತ ಎಂದು ದೃಢಮನಸ್ಸಿನಿಂದ ನುಡಿಯುತ್ತಾರೆ.

ಹನುಮನಹಳ್ಳಿಯ ರೈತ ಮಹಿಳೆಯರ ಇಂದಿರಕ್ಕ ಸುತ್ತಮುತ್ತಲ ಹಳ್ಳಿಯಲ್ಲಿ ಜನಪ್ರಿಯ. ಆದರ್ಶ ರೈತ ಮಹಿಳಾ ಗುಂಪುಗಳನ್ನು ಇವರು ಸ್ಥಾಪಿಸಿದ್ದಾರೆ. ತರಕಾರಿ ನೀಡುತ್ತಿದ್ದಾರೆ. ಸ್ತ್ರೀಶಕ್ತಿ ಗುಂಪುಗಳು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಕರ್ನಾಟಕ ರಾಜ್ಯದಲ್ಲಿ ಎಲ್ಲೇ ಇರಲಿ, ಅಲ್ಲಿ ಇಂದಿರಮ್ಮ ತಮ್ಮ ಗುಂಪಿನ ಮಹಿಳೆಯರೊಂದಿಗೆ ಹಾಜರ್. ನಾಲ್ಕೈದು ದಿನ ಅಲ್ಲೇ ಉಳಿದು, ಉತ್ಪನ್ನಗಳನ್ನು ಮಾರಿ ಅಧಿಕಾರಿಗಳಿಂದ ಮೆಚ್ಚುಗೆ ಪಡೆದೇ ಇಂದಿರಮ್ಮ ಮನೆಗೆ ಹಿಂದಿರುಗುವುದು. ಅಲ್ಲಿಯವರೆಗೆ ನಾಗಭೂಣಾರಾಧ್ಯರದ್ದೇ ಮನೆಯ ನಿರ್ವಹಣೆ.
ಇಂದಿರಮ್ಮ ಗ್ರಾಮೀಣ ಸ್ತ್ರೀಸಮಾಜದ ಶಕ್ತಿ ಹಾಗೂ ನಿಜವಾದ ಆಸ್ತಿ. ಬಾನುಲಿ ಕೃಷಿ ರತ್ನ ಪ್ರಶಸ್ತಿ ಪಡೆದಿರುವ ಇವರ ಬದುಕು ಇತರ ಗ್ರಾಮೀಣ ಕುಟುಂಬಗಳಿಗೆ ನಿಜವಾದ ಸ್ಪೂರ್ತಿಯಾಗಲಿ ಎಂಬುದು ನನ್ನ ಆಶಯ. ಒಂದು ಕೃಷಿ ಕುಟುಂಬ ಆದರ್ಶವಾಗಿ ಹೇಗೆ ಬದುಕಬಹುದು ಎಂಬುದಕ್ಕೆ ಇಂದಿರಮ್ಮನವರ ಕುಟುಂಬ ಮಾದರಿ. ಹಳ್ಳಿ ಬಗ್ಗೆ ಪ್ರೀತಿ ಹಾಗೂ ವ್ಯವಸಾಯದ ಬಗ್ಗೆ ಅಭಿಮಾನ ಇಲ್ಲದ ಇಂದಿನ ಯುವ ಜನತೆ ಇಂದಿರಮ್ಮ ನಾಗಭೂಷಣಾರಾಧ್ಯರಿಂದ ಕಲಿಯುವುದು ಬಹಳಷ್ಟಿದೆ. ಇಂದಿರಮ್ಮನವರಂತ ಒಬ್ಬ ಮಹಿಳೆ ಒಂದು ಹಳ್ಳಿಯಲ್ಲಿ ಇದ್ದರೆ ಸಾಕು, ಅದೆಷ್ಟು ಕುಟುಂಬಗಳ ಮನೆ ಬೆಳಗುತ್ತೆ, ಗ್ರಾಮೀಣ ಮಹಿಳಾ ಸ್ವಾವಲಂಬನೆಯ ಕನಸು ನನಸಾಗುತ್ತೆ.
ಲೇಖನ -ಎನ್ ಕೇಶವ ಮೂರ್ತಿ
ಪ್ರಸಾರ ನಿರ್ವಾಹಕರು (ಕೃಷಿ )
ಆಕಾಶವಾಣಿ ಮೈಸೂರು



1 comment: