Friday, January 28, 2011


ಕನ್ನಡ ಪ್ರಭ ಪತ್ರಿಕೆ ಯಲ್ಲಿ ಶ್ರೀ. ಅಂಶಿ ಪ್ರಸನ್ನ ಕುಮಾರ್ ವರದಿ
ಮೈಸೂರಿನಲ್ಲೊಬ್ಬ ಸಾವವಯ ಕೃಷಿಕ
ಅರಣ್ಯಾಧರಿತ ತೋಟ ಮಾಡಿ ಗೆದ್ದಓದಿದ್ದು ಎಂಎಸ್ಸಿ, ಬಯಸಿದ್ದು ಐಎಫ್ಎಸ್
ಆಗಿದ್ದು `ಮಾಸ್ಟರ್' ಆಫ್ ಕೃಷಿ !


ಕೃಷಿ ಅಂದ್ರೆ ಏನು ? - ಅದೊಂದು ದೇಶದ ಬೆನ್ನೆಲುಬು, ಅನ್ನ ಸೃಷ್ಟಿಸುವ ಮಹಾನ್ ಕಾಯಕ, ಮೇಟಿ ವಿದ್ಯೆ, ಸಂಸ್ಕೃತಿ, ಜೀವನ ಪದ್ಧತಿ... ಹೀಗೆ ಸೂರ್ಯನ ನೆತ್ತಿಯ ಕೆಳಗಿನ ಸರ್ವಸ್ವವನ್ನು ಕೃಷಿಯೊಂದಿಗೆ ಜೋಡಿಸಿ ವ್ಯಾಖ್ಯಾನಿಸಬಹುದು.
ಇದೇ ಪ್ರಶ್ನೆಯನ್ನು ಜಿ.ಬಿ. ಸರಗೂರಿನ ಕೆ. ವೆಂಕಟೇಶ್ ಎಂಬ ಯುವ ಕೃಷಿಕನ ಮುಂದಿಟ್ಟರೆ, ಅದೊಂದು ಖುಷಿ ನೀಡುವ ಕಲೆ, ಅಷ್ಟು ಮಾತ್ರವಲ್ಲ. ಪರಿಶ್ರಮದಿಂದ ಮಾಡಿದರೆ, ಲಾಭದಾಯಕ ವ್ಯವಹಾರ. ಯಂತ್ರೋಪಕರಣ ಬಳಕೆ, ಸಾವಯವ ಪದ್ಧತಿ ಹಾಗೂ ಅರಣ್ಯ ಆಧಾರಿತ ವಾಗಿ(ಒಂದು ಪ್ರಯೋಗ) ದುಡಿಸಿಕೊಂಡರೆ, ಅದೊಂದು ಲಾಭದಾಯಕ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾದರಿಯ ವ್ಯವಹಾರ ಎಂದು ಅಚ್ಚರಿ ಮೂಡಿಸುತ್ತಾರೆ !
ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲೂಕಿನ ಜಿ. ಬಿ. ಸರಗೂರಿನಲ್ಲಿ, ವೆಂಕಟೇಶ್ ಅವರೇ ಅಭಿವೃದ್ಧಿ ಪಡಿಸಿರುವ 25 ಎಕರೆ ವಿಶಾಲ ತೋಟದಲ್ಲಿ ನಿಂತು, ಕೃಷಿಯನ್ನು ಕಂಪನಿ ವ್ಯವಹಾರಕ್ಕೆ ಹೋಲಿಸಿ ಮಾತನಾಡುತ್ತಿದ್ದರೆ, ಅವರ ಮಾತಿನ ಮೇಲೆ ವಿಶ್ವಾಸ ಮೂಡುತ್ತದೆ. ಏಕೆಂದರೆ, ಅವರ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ತೋಟವೇ ಅಲ್ಲಿ ಅರಳಿ ನಿಂತಿದೆ.
ಅಂದಹಾಗೆ ಇದು-ಸಾವಯವ ಕೃಷಿಕನೊಬ್ಬನ ಯಶೋಗಾಥೆ. ಮೈಸೂರು ವಿಶ್ವವಿದ್ಯಾನಿಲಯಲ್ಲಿ ಎಂಎಸ್ಸಿ ಕಲಿತು, ವನ್ಯಜೀವಿಗಳ ಕುರಿತು ಸಂಶೋಧನೆಗಿಳಿದು, ಕೆಲ ಕಾಲ ಐಎಫ್ಎಸ್ ಅಧಿಕಾರಿ ಆಗಬೇಕೆಂದು ಸ್ಪರ್ದಾತ್ಮಕ ಪರೀಕ್ಷೆ ಬರೆದು, ಕಟ್ಟಕಡೆಗೆ ಕೃಷಿ ಕಡೆ ಹೊರಳಿ ನಿಂತಿರುವ 37 ವರ್ಷದ ಕೆ. ವೆಂಕಟೇಶ್ ಇಲ್ಲಿನ ಕಥಾನಾಯಕ.
ಐದು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಜಮೀನು ಖರೀದಿಸಿ, ಸಾವಯವ ಪದ್ಧತಿಯಡಿ, ಅರಣ್ಯಾಧಾರಿತ ಕೃಷಿ ಮಾಡಲು ನಿಂತಾಗ, ವೆಂಕಟೇಶ್ ಅವರನ್ನು ಸುತ್ತಮುತ್ತಲಿನ ರೈತರು ಹುಚ್ಚಪ್ಪ ಅಂದ್ರು ! ಆದರೆ, ಈ ಹುಚ್ಚು ಕನಸುಗಳೇ ಒಂದೊಂದಾಗಿ ನನಸಾಗಲಾರಂಭಿಸಿದಾಗ, ಅದೇ ವೆಂಕಟೇಶ್ ಕೃಷಿಯ ಮಾಸ್ಟರ್ ಆದ್ರು.
ಮೈಸೂರಿನಿಂದ ಸುಮಾರು 20 ಕಿ. ಮೀ. ದೂರದಲ್ಲಿ ವೆಂಕಟೇಶ್ ತೋಟವಿದೆ. ಅಡಿಕೆ, ತೆಂಗು, ಬಾಳೆ, ಪರಂಗಿಯಂಥ ತೋಟಗಾರಿಕೆ ಬೆಳೆಗಳು, ಭತ್ತ, ಗೋಧಿ, ಎಳ್ಳು, ಮೆಕ್ಕೆಜೋಳ, ರಾಗಿಯಂಥ ಧವಸ-ಧಾನ್ಯಗಳು, ಹುಣಸೆ, ಬೆಟ್ಟದ ನಲ್ಲಿ, ಬೆಲ್ಲದ ಮರ, ಸೀತಾಫಲ, ರಾಮಫಲ, ಸೀಬೆ, ಕಿರುನೆಲ್ಲಿ, ಬೇವು, ಶ್ರೀಗಂಧ ಸೇರಿದಂರೆ ನಾನಾ ಜಾತಿಯ ಮರಗಳಿಂದ ಸಮೃದ್ಧವಾಗಿರುವ ಈ ತೋಟ- ಅರಣ್ಯ ಆಧಾರಿತ ಕೃಷಿಯ ಒಂದು ಮಾದರಿ. ಸಾವಯವ ಪದ್ಧತಿಯಲ್ಲಿಯೇ ತೋಟ ಅರಳಿ ನಿಂತಿರುವುದರಿಂದ, ಇಲ್ಲಿ ಹಸು, ಕೋಳಿ, ನಾಯಿಯಂಥ ದೇಸಿ ಜಾತಿಯ ಸಾಕು ಪ್ರಾಣಿಗಳಿವೆ. ತೋಟಕ್ಕೆ ಕಾಡಿನ ನಂಟಿರುವುದರಿಂದ, ಇಲ್ಲಿ ನಿತ್ಯವೂ ನೂರಾರು ಜಾತಿಯ ಪಕ್ಷಿಗಳ ಕಲರವ ಕೇಳಬಹುದು. ಕೂಲಿ ಸಮಸ್ಯೆ ಇರುವುದರಿಂದ, ವೆಂಕಟೇಶ್ಗೆ ಕೃಷಿ ಯಂತ್ರೋಪಕರಣಗಳೇ ಆಳು-ಕಾಳು, ಎತ್ತು-ಜಾನುವಾರು. ಪ್ರಯೋಗ ಶೀಲತೆಗೆ ಒತ್ತು ನೀಡಿರುವುದರಿಂದ ಜೇನು ಕೃಷಿಗೂ ತೋಟ ಆಸರೆ ನೀಡಿದೆ. ಎರಡೇ ಎರಡು ಬೋರ್ವೆಲ್ಗಳಿಂದ ಚಿಮ್ಮುವ ನೀರನ್ನು ಹನಿ-ಹನಿಯಾಗಿ ಬಳಸಿಕೊಂಡು, ಹನಿಗಾರಿಕೆಯ ಮಹತ್ವವನ್ನೂ ತೋಟ ಸಾರುತ್ತಿದೆ. ಹಾಗಾಗಿ ಇದೊಂದು ಸಮಗ್ರ ತೋಟವೂ ಹೌದು !
ಸಾವಯವ ದ್ರಾವಣ -ಗ್ಲುಕೋಸ್
ಕೃಷಿಯನ್ನು ಲಾಭದಾಯಕ ಮಾಡಬೇಕೆಂಬ ಬಯಕೆ ಇಟ್ಟುಕೊಂಡೇ ಕೃಷಿಗೆ ಇಳಿದ ವೆಂಕಟೇಶ್, ಆರಂಭದಲ್ಲಿಯೇ ರಾಸಾಯನಿಕ ಗೊಬ್ಬರದ ಸೋಂಕಿಲ್ಲದ ಸಾವಯವ ಕೃಷಿಗೆ ಶರಣೆಂದರು. ತಿಪ್ಪೇಗೊಬ್ಬರವನ್ನೂ ಅತಿಯಾಗಿ ಬಳಸುವುದು ಬೇಡ ಅನಿಸಿತು. ಹಾಗಾಗಿ ಕೊಟ್ಟಿಗೆ ಗೊಬ್ಬರಕ್ಕಾಗಿ ಎರಡೇ ಎರಡು ಹಸುಗಳನ್ನು ಮಾತ್ರ ಹೊಲದಲ್ಲಿ ತಂದು ಕಟ್ಟಿಕೊಂಡಿದ್ದಾರೆ. ಪ್ಲಾಸ್ಟಿಕ್ ಮತ್ತು ಗ್ಲಾಸ್ ಹೊರತು ಪಡಿಸಿ ತೋಟದಲ್ಲಿ ಉತ್ಪಾದನೆಯಾಗುವ ಕಳೆ, ತರಗು-ತ್ಯಾಜ್ಯ, ಹಸಿರು ಸೊಪ್ಪು-ಸೆದೆಯನ್ನೇ ವ್ಯವಸ್ಥಿತವಾಗಿ ಕೊಳಸಿ, ಅದರಲ್ಲಿಯೇ ರಸ ತೆಗೆಯುವ ವಿಧಾನ ಅಳವಡಿಸಿಕೊಂಡಿದ್ದಾರೆ. ಈ ಅರ್ಥದಲ್ಲಿ ತೋಟ ಭಾಗಷಃ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿರುವ ಪದ್ಧತಿಯೂ ಹೌದು.
ತೋಟದಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸೆಗಣಯೊಂದಿಗೆ ಕೊಳೆಸಿ, ಅದರಿಂದಲೇ ದ್ರವರೂಪದ ಕೊಟ್ಟಿಗೆ ರಸವನ್ನು ತೆಗೆಯುವ `ಅಮೂಲ್ಯಸಾರ ತಯಾರಿಕೆ ಮತ್ತು ಸಂಗ್ರಹಣೆ' ವಿಧಾನವನ್ನು ತೋಟದಲ್ಲಿ ಪರಿಚಯಿಸಲಾಗಿದೆ. ಈ ಮಾದರಿಯಲ್ಲಿ ಹೆಚ್ಚು ಸೆಗಣಿಯ ವಾಸನೆ ಇಲ್ಲ. ಎರೆಹುಳು ತಯಾರಿಕೆಗೂ ಇಲ್ಲಿ ಅವಕಾಶವಿದೆ.
ಅರಣ್ಯ ಆಧಾರಿತ ಕೃಷಿ
ಸುತ್ತಮುತ್ತಲಿನ ಪರಿಸರ ಸಮತೋಲದಿಂದ ಕೂಡಿರಬೇಕು ಎಂಬ ಉದ್ದೇಶದಿಂದ ತೋಟದ ಒಂದು ಭಾಗದಲ್ಲಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಏನನ್ನೂ ಬೆಳೆದಿಲ್ಲ. ಹಾಗಾಗಿ ಅಲ್ಲಿ ಕಾಡು ಬೆಳೆದು ನಿಂತಿದೆ. ಬೇವು, ಶ್ರೀಗಂಧ, ರಾಮಫಲ, ಸೀಬೆ ಸೇರಿದಂತೆ ಹತ್ತಾರು ಜಾತಿಯ ಹಣ್ಣಿನ ಮರಗಿಡಗಳು ನೈಸಗರ್ಿಕವಾಗಿ ಬೆಳೆದಿವೆ. ಆ ಪ್ರದೇಶದಲ್ಲಿಯೇ ಕೃತಕವಾಗಿ ಎರಡು ಜರಿಗಳನ್ನು ನಿರ್ಮಿಸಿದ್ದಾರೆ . ಹಾಗಾಗಿ ತೋಟದಲ್ಲಿ 80 ಜಾತಿಯ ಪಕ್ಷಿಗಳಿವೆ. ಕೃಷಿಗೆ ಕೂಲಿಕಾರ್ಮಿಕರ ಕೊರತೆ ಇರುವುದರಿಂದ, ವೆಂಕಟೇಶ್ ಯಂತ್ರೋಪಕರಣಗಳ ಮೊರೆ ಹೋಗಿದ್ದಾರೆ. ಕಳೆ ಕೀಳಲು, ಗುಂಡಿ ಹೊಡೆಯಲು, ಅಡಿಕೆ ಕೀಳಲು- ಎಲ್ಲದಕ್ಕೂ ಯಂತ್ರಗಳು. ಇದರಿಂದ ಹಣ ಹಾಗೂ ಶ್ರಮ- ಎರಡೂ ಉಳಿತಾಯವಾಗುತ್ತದೆ ಎನ್ನುತ್ತಾರೆ ವೆಂಕಟೇಶ್.
ಅಂದಹಾಗೆ ಈ ತೋಟವನ್ನು ಖರೀದಿ ಮಾಡಿರುವುದು ವೆಂಕಟೇಶ್ ಸ್ನೇಹಿತರಾದ ಚಂದ್ರಶೇಖರ್ ದಂಪತಿ. ವೆಂಕಟೇಶ್ ಇಲ್ಲಿ ತಮ್ಮ ಬುದ್ಧಿ-ಕೌಶಲವನ್ನು ಬಂಡವಾಳವಾಗಿ ಹೂಡಿದ್ದಾರಷ್ಟೆ. ಹಾಗಾಗೀ ಇಬ್ಬರು ಇದರ ಪಾಲುದಾರರು. ಉಳುವವನೂ ಇಲ್ಲಿ ಭೂ ಒಡೆಯ. ಕಂಪನಿಯ ನೀತಿ, ಸಹಕಾರಿ ತತ್ತ್ವವೂ ಇದೇ !ವೆಂಕಟೇಶ್ ಮೊಬೈಲ್ ನಂಬರ್ 9945290334
- ಚೀ. ಜ. ರಾಜೀವ

ಮೈಸೂರು ಆಕಾಶವಾಣಿ :
ರಾಜ್ಯಮಟ್ಟದ ಕೃಷಿ ಸಾಧನಾ ಸಮಾವೇಶ
- ಆಕಾಶವಾಣಿ ಮೈಸೂರು ತನ್ನ ಅಮೃತ ಮಹೋತ್ಸವ ವರ್ಷ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿರುವ ರಾಜ್ಯ ಮಟ್ಟದ ಮೈಸೂರು ಆಕಾಶವಾಣಿ ಕೃಷಿ ಸಾಧನಾ ಸಮಾವೇಶ ವನ್ನು ಜನವರಿ 31, 2011ರಂದು ಸಂಜೆ 5 ಗಂಟೆಗೆ ಮೈಸೂರಿನ ಜಯಲಕ್ಷ್ಮಿಪುರಂನ ಮಹಾಜನ ಕಾಲೇಜು ಆವರಣದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಏರ್ಪಡಿಸಿದೆ.
ಜಿಲ್ಲಾಧಿಕಾರಿ ಶ್ರೀ ಹರ್ಷಗುಪ್ತ ಕಾರ್ಯಕ್ರಮ ಉದ್ಘಾಟಿಸುವರು. ಕೃಷಿವಾಣಿ: ನುಡಿಸಂಚಿಕೆಯನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಸಾವಯವ ಕೃಷಿ ಮಿಷನ್ನ ಅಧ್ಯಕ್ಷ ಡಾ: ಆನಂದ್ ಲೋಕಾರ್ಪಣೆ ಮಾಡುವರು. ಶ್ರೀ ವಾಲ್ಮೀಕಿ ಶ್ರೀನಿವಾಸ ಅಯ್ಯಂಗಾರ್ಯ ಅವರು ವೇದಕೃಷಿ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಜೈವಿಕ ಇಂಧನ ಕಾರ್ಯಪಡೆ ಅಧ್ಯಕ್ಷ ಶ್ರೀ ವೈ.ಬಿ. ರಾಮಕೃಷ್ಣ ಅವರು ಬಾನುಲಿ ಕೃಷಿಕರ ಕಂಪನಿ (ಪ್ರೈ) ಲಿಮಿಟೆಡ್ನ್ನು ಸಮರ್ಪಿಸುವರು . ಬಾನುಲಿ ಕೃಷಿ ಬೆಳಗು ಅಭಿನಂದನಾ ಪತ್ರವನ್ನು ಬೆಂಗಳೂರು ಆಕಾಶವಾಣಿ ನಿಲಯ ನಿರ್ದೇಶಕ ಡಾ: ಚೇತನ್ ಎಸ್. ನಾಯಕ್ ವಿತರಿಸುವರು. ಮೈಸೂರು ಆಕಾಶವಾಣಿ ನಿಲಯ ನಿರ್ದೇಶಕ ಡಾ: ಎಂ.ಎಸ್. ವಿಜಯಾ ಹರನ್ ಬಾನುಲಿ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡುವರು.

ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆ
ಬಾನುಲಿ ಕೃಷಿಕರ ಕಂಪನಿ
ಬಾನುಲಿ ಕೃಷಿಕರ ಕಂಪನಿ (ಪ್ರೈ) ಲಿ. - ವಿಚಿತ್ರ ಆದರೂ ಸತ್ಯ ಅನ್ನುವಂತಿದೆ ಈ ಹೆಸರು. ನಮಗೆ ಪರಿಚಿತರಾಗಿರುವ ಹಲವು ಬಗೆಯ ರೈತರಿದ್ದಾರೆ. ಸಾವಯವ ಕೃಷಿಕರು, ನೈಸರ್ಗಿಕ ಕೃಷಿಕರು, ಪ್ರಗತಿಪರ ಕೃಷಿಕರು, ಮೀನು ಕೃಷಿಕರು, ತೆಂಗು ಕೃಷಿಕರು. . . . ಹೀಗೆ ಕೃಷಿಕರು ತಾವು ತೊಡಗಿಸಿಕೊಂಡಿರುವ ಅಥವಾ ಪರಿಣತಿ ಸಾಧಿಸಿರುವ ಕ್ಷೇತ್ರಕ್ಕೆ ಸಂಬಂಧಿಸಿದ ವಿಶೇಷಣವನ್ನು ಬಳಸುವುದು ಅಥವಾ ಅಂತಹ ರೈತರನ್ನು ಈ ರೀತಿ ವಿಶಿಷ್ಠವಾಗಿ ಗುರುತಿಸುವುದು ರೂಢಿಯಲ್ಲಿದೆ.
ಆದರೆ ಈ ಬಾನುಲಿ ಕೃಷಿಕ ಅನ್ನುವುದು ವಿಚಿತ್ರವಾಗಿದೆ. ಆದರೂ ಈ ಪದ ಬಳಕೆ ಚಾಲ್ತಿಗೆ ಬಂದಿದೆ ಎಷ್ಟೆಂದರೆ ಅದರ ಹೆಸರಿನಲ್ಲಿ ರೈತರ ಕೂಟವೊಂದು ಕಂಪನಿ ಸ್ಥಾಪಿಸಿ ಲಾಭದಾಯಕ ವ್ಯಾಪಾರ ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸ ಮೂಡುವ ಮಟ್ಟಿಗೆ.
ಬಾನುಲಿ ಕೃಷಿಕ - ಕನ್ನಡದ ಪದಕೋಶ ಸೇರಿದ್ದು ನಾಲ್ಕು ವರ್ಷಗಳ ಹಿಂದೆ ಬಾನುಲಿ ಕೃಷಿಕರ ಬಳಗದ ಮೂಲಕ. ಈ ಪದದ ಸೃಷ್ಠಿಕರ್ತ ಮೈಸೂರು ಆಕಾಶವಾಣಿ. ಕರ್ನಾಟಕ ಸಂಗೀತಕ್ಕೆ ಹೆಸರುವಾಸಿಯಾದ ಮೈಸೂರು ಆಕಾಶವಾಣಿಯನ್ನು ಕೃಷಿ ವಿಚಾರದಲ್ಲಿಯೂ ಜನಪ್ರಿಯಗೊಳಿಸಿರುವುದು ಅದರ ಕೃಷಿರಂಗ ವಿಭಾಗ. ಅದಕ್ಕೆ ಸಾಕ್ಷಿಯಾಗಿರುವುದು ಬಾನುಲಿ ಕೃಷಿಕರ ಬಳಗ ಹಾಗೂ ಅದರ ಮುಂದುವರಿದ ಆವೃತ್ತಿ ಬಾನುಲಿ ಕೃಷಿಕರ ಕಂಪನಿ.
ಯಾವುದೇ ಸಂಸ್ಥೆಯೊಂದರ ಹೆಸರಿನಲ್ಲಿ ಕೃಷಿಕನನ್ನು ಗುರುತಿಸುವುದು ಪ್ರಾಯಶಃ ಇದೇ ಮೊದಲು. ಕೃಷಿ ವಿಷಯಗಳನ್ನು ಪ್ರಸಾರ ಮಾಡುವ ಇತರೆ ಆಕಾಶವಾಣಿ / ದೂರದರ್ಶನ ಕೇಂದ್ರಗಳಿವೆ. ಕೃಷಿ ವಿಷಯ ಪ್ರಕಟಿಸುವ ಹಲವು ಜನಪ್ರಿಯ ಪತ್ರಿಕೆಗಳಿವೆ. ಕೃಷಿಗೆಂದೇ ಮೀಸಲಾದ ಪತ್ರಿಕೆಗಳೂ ಇವೆ. ಆದಾಗ್ಯೂ ಅದರ ಕೇಳುಗರೋ, ವೀಕ್ಷಕರೋ, ಓದುಗರೋ, ಬಳಗವೊಂದನ್ನು ರೂಪಿಸಿಕೊಂಡು ಸಕ್ರಿಯವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಕೃಷಿ ವಿಷಯಗಳನ್ನು ಚರ್ಚಿಸುತ್ತ ಅರ್ಥಪೂರ್ಣ ಸಂವಾದದಲ್ಲಿ ತೊಡಗಿಸಿಕೊಂಡಿರುವುದು ವಿರಳ. ಇಂತಹ ವಿರಳಾತಿವಿರಳ ಕಾಯಕವನ್ನು ಆಗುಮಾಡಿರುವ ಮೈಸೂರು ಆಕಾಶವಾಣಿ ಅಭಿನಂದನಾರ್ಹವಾಗಿದೆ. ಈ ದಿಸೆಯಲ್ಲಿ ಮಾರ್ಗಪ್ರವರ್ತಕವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ಕೃಷಿ ಕಾರ್ಯಕ್ರಮಗಳನ್ನು ರೈತರಿಗೆ ಪರಿಣಾಮಕಾರಿಯಾಗಿ ತಲುಪಿಸುತ್ತಿರುವ ಮಾಧ್ಯಮ ಎಂದರೆ ಆಕಾಶವಾಣಿ ಎಂಬುದನ್ನು ಮನಗಂಡ ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯ 2001ರಲ್ಲಿ ಆಕಾಶವಾಣಿಯ ಹಲವು ಕೇಂದ್ರಗಳಿಗೆ ಕೃಷಿ ಪ್ರಸಾರಕ್ಕಾಗಿಯೇ ವಿಶೇಷ ಧನಸಹಾಯ ನೀಡಿತು. ಕಿಸಾನ್ವಾಣಿ - ಕೃಷಿರಂಗ ಹೆಸರಿನಲ್ಲಿ ಆರಂಭವಾದ ಕೃಷಿ ಕಾರ್ಯಕ್ರಮಗಳು ರೈತರು ಸುಸ್ಥಿರ ಕೃಷಿಯತ್ತ ದೃಢಹೆಜ್ಜೆಗಳನ್ನು ಇಡಲು ಪ್ರೇರೇಪಣೆ ನೀಡಿದವು.
ಮೈಸೂರು ಆಕಾಶವಾಣಿ ಕೇಂದ್ರ ಇತರೆ ಆಕಾಶವಾಣಿಗಳಿಗಿಂತ ಭಿನ್ನ ಹೆಜ್ಜೆ ತುಳಿದದ್ದೇ ಈ ಹಂತದಲ್ಲಿ. ಇದು ಒಂದು ಹೆಜ್ಜೆ ಮುಂದೆ ಹೋಗಿ ತಾನು ಪ್ರಸಾರ ಮಾಡಿದ ಕೃಷಿ ಕಾರ್ಯಕ್ರಮಗಳ ಪರಿಣಾಮಗಳನ್ನು, ಉಪಯುಕ್ತತೆಯನ್ನು ಅರಿಯುವ ಪ್ರಯತ್ನ ಮಾಡಿತು. ರೇಡಿಯೋ ಕೇಂದ್ರದಿಂದ ಹೊರನಡೆದು ರೈತರ ಹೊಲಗದ್ದೆ ತೋಟಗಳಲ್ಲಿ ಅಡ್ಡಾಡಲು ಆರಂಭಿಸಿತು.
ಕೃಷಿ ವಿಶ್ವವಿದ್ಯಾನಿಲಯ, ಕೃಷಿ ಸಂಶೋಧನಾ ಕೇಂದ್ರಗಳಂತೆ ಕ್ಷೇತ್ರ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ರೈತರಿಗೆ ಮುಖಾಮುಖಿಯಾಗಿ ದ್ವಿಮುಖ ಸಂವಹನ ಆರಂಭಿಸಿತು. ದಿನನಿತ್ಯ ಕೃಷಿ ಕಾರ್ಯಕ್ರಮ ಆಲಿಸುತ್ತಿದ್ದ ರೈತರು, ಪ್ರತಿ ತಿಂಗಳು ಒಂದೆಡೆ ರೈತರ ಜಮೀನಿನಲ್ಲಿಯೇ ಸಭೆ ಸೇರಿ ಕೃಷಿ ವಿಷಯಗಳನ್ನು ಚರ್ಚಿಸುವ ಪರಿಪಾಠ ಆರಂಭವಾಯಿತು. ಇತಂಹ ಸಭೆಗಳಲ್ಲಿ ಕೃಷಿ ತಜ್ಞರು ಹಾಗೂ ಪೂರಕ ಕಸಬುಗಳಿಗೆ ಸಂಬಂಧಿಸಿದ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಇತರೆ ಇಲಾಖೆಗಳ ಸಹಯೋಗವನ್ನು ಪಡೆದುಕೊಳ್ಳಲಾಯಿತು. ಬಾನುಲಿ ಕೃಷಿ ಬೆಳಗು ಎಂಬ ಹೆಸರಿನಲ್ಲಿ ಪ್ರತಿ ತಿಂಗಳು ಕಾರ್ಯಕ್ರಮ ಆಯೋಜನೆಯಾದವು.
ಕಾರ್ಯಕ್ರಮದ ಉಪಯುಕ್ತತೆ ಮನಗಂಡ ರಾಜ್ಯ ವಾರ್ತಾ ಇಲಾಖೆಯು ಬಾನುಲಿ ಕೃಷಿ ಬೆಳಗು ಕಾರ್ಯಕ್ರಮಕ್ಕೆ ಎರಡು ವರ್ಷಗಳಿಗೆ ಪ್ರಾಯೋಜನೆ ನೀಡಿದೆ.
ನಿಯಮಿತವಾಗಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ರೈತರು ಬಾನುಲಿ ಕೃಷಿ ಬಳಗ ಸ್ಥಾಪಿಸಿಕೊಂಡು, ಅತ್ಯುತ್ತಮ ರೈತರಿಗೆ ಬಾನುಲಿ ಕೃಷಿ ಪ್ರಶಸ್ತಿ ಯನ್ನು ನೀಡುವ ಪರಿಪಾಠ ಆರಂಭಿಸಿದರು. ಈ ಎಲ್ಲ ಚಟುವಟಿಕೆಗಳನ್ನು ದಾಖಲಿಸಲು ನೇಗಿಲಯೋಗಿ ಎಂಬ ವಾರ್ತಾ ಪತ್ರವನ್ನು ಆರಂಭಿಸಲಾಯಿತು. ರೈತರ ಯಶೋಗಾಥೆಗಳನ್ನು ಪ್ರಕಟಿಸಲಾಯಿತಲ್ಲದೆ ಬಾನುಲಿ ಕೃಷಿ ಬೆಳಗು ನಡೆದು ಬಂದ ದಾರಿಯನ್ನು ದಾಖಲಿಸಲಾಯಿತು. ಹಲವು ರೈತರೇ ಈ ಪತ್ರಿಕೆಗೆ ಲೇಖನ ಬರೆದು ತಮ್ಮ ಸ್ವಾನುಭವ ವಿವರಿಸಿದರು. ನೇಗಿಲಯೋಗಿಯ ವ್ಯಾಪ್ತಿ ವಿಸ್ತರಿಸಲು ನೇಗಿಲಯೋಗಿ ಬ್ಲಾಗ್ ಸಹ ಆರಂಭಿಸಿ ಇನ್ನೊಂದು ಹೆಜ್ಜೆ ಮುಂದಿರಿಸಿತು.
ಇದೀಗ ಈ ಬಳಗ ಬಾನುಲಿ ಕೃಷಿಕರ ಕಂಪನಿ ಸ್ಥಾಪಿಸುತ್ತಿದೆ. ನೋಂದಣಿ ಪ್ರಕ್ರಿಯೆ ಮುಗಿದಿದ್ದು, ಜನವರಿ 31ರಂದು ಕಂಪನಿಯ ಉದ್ಘಾಟನೆಯೂ ಆಗಲಿದೆ. ರೈತರಿಂದ ಶೇರು ಸಂಗ್ರಹಿಸಿ, ರೈತರ ಉತ್ಪನ್ನಗಳ ಮೌಲ್ಯವರ್ಧನೆಯಾಗುವ ರೀತಿಯಲ್ಲಿ ಕೃಷಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಯೋಜಿಸಿದೆ. ಜೈವಿಕ ಇಂಧನ ತಯಾರಿಸುವ ಮಹತ್ವಾಕಾಂಕ್ಷೆ ಹೊಂದಿದೆ.
ಹಲವು ಸ್ವಾವಲಂಬಿ ಉತ್ಪನ್ನಗಳನ್ನು, ತಳಿಗಳನ್ನು ರೈತರೇ ಸಂಶೋಧಿಸಿದ್ದು, ಇವುಗಳಿಗೆ ಮಾರುಕಟ್ಟೆ ಒದಗಿಸುವುದೂ ಸೇರಿದಂತೆ ಹಲವು ಉದ್ದೇಶಗಳೊಡನೆ ಆರಂಭವಾಗುತ್ತಿರುವ ಈ ಕಂಪನಿ ಯಶಸ್ಸು ಕಾಣಲಿ ಎಂಬುದೇ ಎಲ್ಲರ ಹಾರೈಕೆ. ಇದಕ್ಕೆ ಪ್ರೇರಕವಾಗಿರುವ ಮೈಸೂರು ಆಕಾಶವಾಣಿ ಕೃಷಿರಂಗ ವಿಭಾಗದ ಮುಖ್ಯಸ್ಥ ಶ್ರೀ ಎನ್. ಕೇಶವಮೂರ್ತಿ ಹಾಗೂ ಅವರಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ನಿಲಯ ನಿರ್ದೇಶಕರಾದ ಶ್ರೀಮತಿ ವಿಜಯಾಹರನ್ ಅವರಿಗೆ ಅಭಿನಂದನೆಗಳು.
-ಎ.ಆರ್. ಪ್ರಕಾಶ್
ಉಪನಿರ್ದೇಶಕ
ವಾರ್ತಾ ಇಲಾಖೆ ,ಮೈಸೂರು