Tuesday, August 11, 2009

ಜೀವನ ಧಾರೆ

ಇತ್ತೀಚಿನ ದಿನಗಳಲ್ಲಿ ಕೃಷಿಕ ಜೀವನ ಕಷ್ಟಕರವಾದ್ದರಿಂದ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿವೆ . ಕೂಲಿ, ಆಳಿನ ಸಮಸ್ಯೆ, ರಸಗೊಬ್ಬರ ಸಮಸ್ಯೆ. ಈ ಸಮಸ್ಯೆಗಳನ್ನು ನಿವಾರಿಸಲು ಸುಸ್ಥಿರ ಬೇಸಾಯ ಕ್ರಮಗಳನ್ನು ಅನುಸರಿಸಲು ಮುಂದಾದೆ . ಪಿಯುಸಿ ಮುಗಿಸಿ ಡೈರಿ ಡಿಪ್ಲೊಮಾ, ಬೆಂಗಳೂರಿನ ಹೆಸರುಘಟ್ಟ (ರಾಜ್ಯ ಜಾನುವಾರು ಸಂವರ್ದನ ತರಬೇತಿ ಕೆಂದ್ರ, ಹೆಸರುಘಟ್ಟ) ಇಲ್ಲಿ ತರಬೇತಿ ಪಡೆದೆ. ಮಹಾನಗರದ ಜೀವನ ಬೇಸರಪಡಿಸಿತು. ಮಾಲಿನ್ಯ, ವಸತಿ ಮತ್ತು ನೀರಿನಂತಹ ಮೂಲಭೂತ ಸಮಸ್ಯೆಯಿಂದ ಬಳಲಿದೆನು.
ಏನಾದರೂ ಸುಸ್ಥಿರ ಬೇಸಾಯ ಕ್ರಮಕ್ಕೆ ಆತುರದಲ್ಲಿದ್ದೆ. ಅಷ್ಟರಲ್ಲಿ ಮೈಸೂರು ಆಕಾಶವಾಣಿಯ ಸಾಯಂಕಾಲ ಪ್ರಸಾರವಾಗುತ್ತಿದ್ದ ಕೃಷಿರಂಗ ಕಿಸಾನ್ವಾಣಿ ನನ್ನ ನೆರವಿಗೆ ಬಂತು ಹಾಗೂ ಅನ್ನದಾತ ಮಾಸಿಕ ಪತ್ರಿಕೆ ನನಗೆ ಸಹಕಾರವಾಯಿತು. ಡೈರಿ ಡಿಪ್ಲೊಮಾ ಮುಗಿಸಿದ ನಂತರ ಎರಡು ಮಿಶ್ರತಳಿ ಕರುಗಳನ್ನು ಪಾಲನೆ ಮಾಡಿದೆನು. ಅದು ನನ್ನ ಹೈನು ಉದ್ಯಮಕ್ಕೆ ನಾಂದಿಯಾಯಿತು. ಕೃಷಿ ತ್ಯಾಜ್ಯವನ್ನು (ಭತ್ತ ಮತ್ತು ರಾಗಿ ಹುಲ್ಲು) ಬಳಸಿ ಹೈನು ರಾಸುಗಳಿಗೆ ಆಹಾರ ಪೂರೈಸಿಕೊಂಡು, 10 ಅಡಿ ಅಗಲ 4 ಅಡಿ ಉದ್ದ 1 ಅಡಿ ಆಳವಿರುವ ಕಾಂಕ್ರೀಟ್ ತೊಟ್ಟಿಯನ್ನು ನಿರ್ಮಿಸಿ ಅಜೋಲ ಬೆಳೆಸಿ ತಿಂಡಿಮಿಶ್ರಣದೊಂದಿಗೆ ರಾಸುಗಳಿಗೆ ದಿನಕ್ಕೆ1 ಕೆಜಿಯಂತೆ ಕೊಡುತ್ತಾ ಬಂದೆ. ಶಾರೀರಕ ಪೋಷಣೆ ಮತ್ತು ಹಾಲು ಉತ್ಪಾದನೆ ಸುಧಾರಣೆಗೊಂದಿತು.
ಹೈನು ತ್ಯಾಜ್ಯವನ್ನು ಗೋಬರ್ ಗ್ಯಾಸ್ (ಬಯೋಗ್ಯಾಸ್) ಬಳಸಿ ದಿನನಿತ್ಯದ ಅಡುಗೆಗೆ ಅನಿಲವಾಗಿ ಬಳಸಿ ವಾಯುಮಾಲಿನ್ಯ ಮತ್ತು ಅರಣ್ಯ ನಾಶವನ್ನು ತಪ್ಪಿಸಲು ಕಿರು ಪ್ರಯತ್ನ ಮಾಡಿದೆ.
ಬಯೋಸ್ಲರಿಯನ್ನು 10 ಅಡಿ ಉದ್ದ 8 ಅಡಿ ಅಗಲ 10 ಅಡಿ ಆಳ ಉಳ್ಳ ಭೂಗರ್ಭ ಕಾಂಕ್ರೀಟ್ ಗುಂಡಿಯಲ್ಲಿ ಶೇಖರಿಸಿ ಬಯೋಸ್ಲರಿ ಮೋಟಾರ್ ಅಳವಡಿಸಿ ಪಕ್ಕದಲ್ಲಿ ಇರುವ ಬೋರ್ ವೆಲ್ ಹೊರಭಾಗಕ್ಕೆ ಪೈಪ್ ಮುಖಾಂತರ ಬಯೋಸ್ಲರಿಯನ್ನು ಹೋಗುವಂತೆ ಮಾಡಿದೆ. ನನ್ನ 6 ಎಕರೆ ಜಮೀನು ಒಂದೇಕಡೆ ಇರುವುದರಿಂದ ಜಮೀನಿನ ಉದ್ದಕ್ಕೂ ಪೈಪ್ ಲೈನ್ ಮಾಡಿಸಿದ್ದೇನೆ. ಯಾವ ಬೆಳೆಗೆ ಬಯೋಸ್ಲರಿ ಬೇಕೋ ವಾಲ್ ಮುಖಾಂತರ ಬೋರ್ ವೆಲ್ ನೀರಿನ ಜೊತೆಯಲ್ಲಿ ಹರಿಸುತ್ತೇವೆ.
ಇದನ್ನು 2007 ಜೂನ್ 1ರಿಂದ ಪ್ರಾರಂಭಿಸಿದೆ. ಈಗ ನನ್ನ ಆರು ಎಕರೆ ಜಮೀನು ರಸವತ್ತಾದ ಸಾವಯವಯುಕ್ತ ಮಣ್ಣಾಗಿ ಪರಿವರ್ತನೆಗೊಂಡಿತು.
ನನ್ನ ಮುಂದಿನ ಪೀಳಿಗೆಗೆ ಸಾವಯುಕ್ತ ಭೂಮಿಯನ್ನು ಬಳುವಳಿಯಾಗಿ ಕೊಡಲು ರಾಸಾಯನಿಕ ಮುಕ್ತ ಭೂಮಿಯನ್ನು ಕೊಡಲು ಮನಸ್ಸಂತೋಷವಾಯಿತು. ಭತ್ತದ ಉತ್ಪಾದನೆಯಲ್ಲಿ ಶ್ರೀ ಪದ್ಧತಿಯನ್ನು (ಎಸ್ ಆರ್ ಟಿ) ಅಳವಡಿಸಿ ಕೇವಲ ಒಂದು ಎಕರೆಗೆ 2 ಕೆಜಿ ಬಿತ್ತನೆ ಭತ್ತದ ಬೀಜವನ್ನು ಬಳಸಿ 35 ರಿಂದ 38 ಕ್ವಿಂಟಾಲ್ ಭತ್ತದ ಇಳುವರಿಯನ್ನು ಪಡೆಯುತ್ತಿದ್ದೇನೆ. ಇದಕ್ಕೆ ನಾನೆ ತಯಾರಿಸಿದ ಎರೆಹುಳುವಿನ ಗೊಬ್ಬರವನ್ನು ಉಪಯೋಗಿಸಿದೆ. ದಿನದಿಂದ ದಿನಕ್ಕೆ ಕಬ್ಬಿನ ವ್ಯವಸಾಯದ ಖರ್ಚು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಕಬ್ಬಿನ ಬೆಳೆಗೂ ಶ್ರೀ ಪದ್ದತಿಯನ್ನು ಮಾಡುವ ಹಂಬಲ. ಭತ್ತದ ಶ್ರೀ ಪದ್ದತಿಯನ್ನು ಗುರಿ ಇಟ್ಟುಕೊಂಡು (3 3) ಸಾಲಿನಿಂದ ಸಾಲಿಗೆ 3 ಅಡಿ ಗಿಡದಿಂದ ಗಿಡಕ್ಕೆ ಅಂತರವಿಟ್ಟು ನಾಟಿ ಮಾಡಿದೆ.
ಕಳೆ ನಿರ್ವಹಣೆಗೆ ಮತ್ತು ಬೆಳೆಗಳ ಅಭಿವೃದ್ಧಿಗೆ ಸಹಕಾರಿ ಆಯಿತು. ಈ ಪದ್ದತಿಯಿಂದ ಕೂಲಿ ಆಳುಗಳ ಸಮಸ್ಯೆ ಮತ್ತು ಬಿತ್ತನೆ ಬೀಜ ಸಮಸ್ಯೆ ಕಡಿಮೆಯಾಗಿದೆ. ನಂತರ ತೋಟಗಾರಿಕೆ ಮಾಡಬೇಕೆಂಬ ಹಂಬಲವಿದ್ದರಿಂದ ನನ್ನ ಅಣ್ಣನವರಾದ ಕೆ ಎಸ್ ತೋಂಟದಾರ್ಯಸ್ವಾಮಿ ಅವರ 2 ಎಕರೆ ಜಮೀನಿನಲ್ಲಿ ಅಡಿಕೆ, ತೆಂಗು, ಸಿಲ್ವರ್, ತೇಗ, ಸಪೋಟ, ಮಾವು, ಸೀಬೆ, ಕಿರಳಿ, ನಿಂಬೆ, ಹಲಸು ಇತರ ಹಣ್ಣಿನ ಬೆಲೆಗಳು ಮತ್ತು ಸಾಂಬಾರ್ ಪದಾರ್ಥಗಳಾದ ಮೆಣಸು , ದಾಲ್ಚಿನ್ನಿ, ಚೆಕ್ಕೆ, ಏಲಕ್ಕಿ ಗಿಡಗಳಂತಹ ತೋಟಗಾರಿಕೆ ಮಾಡಿ ಕಣ್ಮನ ತಣಿಸಲು ಮುಂದಾಗಿದ್ದೇವೆ.
ಇದು ನಮ್ಮ ಜೀವನಧಾರೆ ಸುಸ್ಥಿರ ಕೃಷಿ.

ಕವನ:
ಕಲ್ಪವೃಕ್ಷದಡಿ ನನ್ನ ಜೀವನ
ಹೈನು ಇರುವ ವರೆಗೆ ನೆಂಟರ ಇಷ್ಟರ ಸತ್ಕಾರ
ತೆಂಗುಬಾಳೆ ನಡುವೆ ನನ್ನ ಜೀವನ
ತೇಗ,ಹೊನ್ನೆ,ಹೊಂಗೆ,ಬೇವು ಸುತ್ತಲಿರುವ ಸೈನಿಕ
ನೋಡಬನ್ನಿ ನೀವೀಗ, ನಾನೆ ಇದರ ಮಾಲಿಕ
-ಕೆ ಎಸ್ ಮೃತ್ಯೂಂಜಯ ತಂದೆ: ಶಿವನಂಜಪ್ಪ
ಎಸ್ ಐ ಕೋಡಿಹಳ್ಳಿ, ಮಂಡ್ಯ ತಾ:
ಮಂಡ್ಯ ಜಿಲ್ಲೆ, ಕೊರಗೋಡು ಹೋ: ಕೆ ಗೌಡಗೆರೆ ಅಂಚೆ.


ರಾಮಯ್ಯನವರ ಕೃಷಿ ಸಾಹಸ

ಕೋಟಿ ವಿದ್ಯೆಗಳಲ್ಲಿ ಮೇಟಿ
ವಿದ್ಯೆಯೇ ಮೇಲು, ಮೇಟಿಯಿಂ ರಾಟೆ
ನಡೆದುದಲ್ಲದೆ ದೇಶದಾಟವೇ ಕೆಡಗು
-ಸರ್ವಜ್ಞ



ರಾಮಯ್ಯ
ನವರ ಜಮೀನಿನಲ್ಲಿನಡೆದಕಾರ್ಯಕ್ರಮ. ಶ್ರೀ ರಾಮಯ್ಯ ಸ್ವಾಗತಿಸುತ್ತಿದ್ದಾರೆ.

ರೈತರ ಬದುಕು ಕಷ್ಟಕರವೆಂಬ ಭಾವನೆ ರೈತಾಪಿಗಳಲ್ಲಿ ದಟ್ಟವಾಗಿದೆ. ಆದರೆ ಅಲ್ಲೊಬ್ಬ ಇಲ್ಲೊಬ್ಬ ಕೃಷಿಕರು ತಮ್ಮ ಕೃಷಿ ಬಾಳು ಹಸನುಗೊಳಿಸುವ ಸಾಹಸ ಮಾಡುತ್ತಿದ್ದರೆ ಹೆಚ್ಚಿನ ಖರ್ಚಿಲ್ಲದೆ ಕೃಷಿ ಬದುಕು ಹಸನುಮಾಡಿಕೊಳ್ಳುವಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆ ಶ್ಯಾನುಬೋಗನ ಹಳ್ಳಿಯ ರಾಮಯ್ಯನವರ ಜಮೀನು ಯಶಸ್ವಿ ಹಾದಿಯಲ್ಲಿದೆ ಎಂದರೆ ತಪ್ಪಾಗಲಾರದು.
ಶ್ರೀ ರಾಮಯ್ಯನವರ ಪತ್ನಿ ಶ್ರೀಮತಿ ಸುಶೀಲ, ಒಂದು ಗಂಡು ಎರಡು ಹೆಣ್ಣು ಮಕ್ಕಳ ಕುಟುಂಬ. ಕೃಷಿ ಜಿಲ್ಲೆಯಲ್ಲಿ ಬದುಕುತ್ತಿರುವುದರಿಂದ ತಾವೂ ಕೃಷಿಗೆ ತೊಡಗಬೇಕೆಂಬುದು ಕುಟುಂಬದ ಬಯಕೆ. ಬಯಕೆ ಈಡೇರಿಕೆಗೆ ಸಂಬಂಧಿಕರಿಂದಲೇ ಮೂರೆಕರೆ ಜಮೀನು ಕೊಂಡರು.
ಮೊದಲ ಯತ್ನದಲ್ಲಿ ಜೇನು ಸಾಕುವ ಕನಸು ಕಂಡರು. ಪ್ರಯತ್ನ ಅನುಭವದ ಕೊರತೆಯಿಂದ ಕೈಗೂಡಲಿಲ್ಲ. ಆದರೆ ಅನುಭವ ಗಳಿಸಲು ಬಾನುಲಿ ಕೃಷಿ ಬೆಳಕು ಕಾರ್ಯಕ್ರಮಕ್ಕೆ ಎಳೆದು ತಂದಿತು. ಇಲ್ಲಿ ಬೇರೆಬೇರೆ ರೈತರಿಂದ ಅನುಭವದ ಹಂಚಿಕೆ ನಡೆಯಿತು. ಇದನ್ನು ಆಧಾರ ಮಾಡಿಕೊಂಡ ಶ್ರೀ ರಾಮಯ್ಯನವರ ಕುಟುಂಬ ಕೃಷಿಗೆ ಪಾದಾರ್ಪಣೆ ಮಾಡಿತು. ತಿಪಟೂರು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಯಶಸ್ಸಿನ ಹಾದಿಯಲ್ಲಿದ್ದ ರೈತರೊಡನೆ ಸಂಪರ್ಕಪಡೆದರು. ಇದೀಗ ಯಶಸ್ಸಿನತ್ತ ಇವರೇ ಹೆಜ್ಜೆ ಹಾಕುತ್ತಿದ್ದಾರೆ.
ಶ್ರೀ ರಾಮಯ್ಯನವರ ಜಮೀನು ಬೆಣಚು ಕಲ್ಲಿನಿಂದ ಕೂಡಿದ ಅಪ್ಟೇನು ಫಲವತ್ತಲ್ಲದ ಗುಡ್ಡಗಾಡು ಭೂಮಿ. ಈ ಭೂಮಿಯಲ್ಲಿ ಈ ಹಿಂದೆ ಜೋಳ, ರಾಗಿ, ಹುರುಳಿ ಇತ್ಯಾದಿಬೆಳೆಗಳನ್ನು ಮಳೆ ಆಶ್ರಯದಲ್ಲಿ ಬೆಳೆಯುತ್ತಿದ್ದರು. ಆದರೆ ಆಕಾಶಕ್ಕೆ ನೆಟ್ಟ ಕಣ್ಣುಗಳು ಉತ್ತಮ ಫಸಲನ್ನು ಕಾಣದಾಯಿತು. ನಿಯಮಿತವಲ್ಲದ ಮುಂಗಾರು ಮಳೆ ನಂಬಿ ಪೂರ್ಣ ಫಲ ದೊರಕದಾಯಿತು.
ಎರಡು ವರ್ಷದ ಹಿಂದೆ ಕೊಳವೆ ಬಾವಿ ಕೊರೆಸಿ ಎಕರೆಗೆ 20 ಗಾಡಿ ಕೊಟ್ಟಿಗೆ ಗೊಬ್ಬರ, ಗೋಡು ಮಣ್ಣು ಹಾಕಿದನಂತರ ಬೆಳೆ ಕೈಸೇರುವ ಹಂತಕ್ಕೆ ಬಂದಿತು. ನಂತರ ಶ್ರೀ ರಾಮಯ್ಯನವರು ತಮ್ಮ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ನಿರ್ಧರಿಸಿದರು. ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ 135 ಸಪೋಟ ಗಿಡ ಹಾಕಿದರು. ಪ್ರತಿ ಗಿಡಕ್ಕೆ 30 ಅಡಿ ಅಂತರವಿದ್ದು ಆರೈಕೆ ಮಾಡುತ್ತಿದ್ದಾರೆ. 30 ಅಡಿ ಅಂತರದ ಜಾಗದಲ್ಲಿ ಮಧ್ಯೆ ನುಗ್ಗೆ ಗಿಡಗಳನ್ನು ಹಾಕಿದರೆ ಕಳೆದ ವರ್ಷ ಅವರೆ, ತೊಗರಿ ಬೆಳೆ ಇದ್ದಿತು. ಅರ್ಧ ಎಕರೆ ಜಮೀನಿನಲ್ಲಿ 10 ಗುಂಟೆಯಲ್ಲಿ ಮೊಣಸಿನಕಾಯಿ ಹಾಗೂ 10 ಗುಂಟೆಯಲ್ಲಿರಾಗಿ ಹಾಕಿದರು. ಈಗ ಅದೇ ಜಾಗದಲ್ಲಿ ಎಳ್ಳು ಮತ್ತು ತೊಗರಿ ಹಾಕಿದ್ದಾರೆ. ಅವರೆ ಬಿತ್ತನೆಯನ್ನು ಪವರ್ ಟಿಲ್ಲರ್ ಮೂಲಕ ಉಳಿಮೆಯಲ್ಲಿ ಭೂಮಿಗೆ ಸೇರಿಸಿದ್ದಾರೆ. ಅರ್ಧ ಎಕರೆ ಪ್ರದೇಶದಲ್ಲಿ ಪಪ್ಪಾಯ ಮತ್ತು ನುಗ್ಗೆ ಹಾಕಿದ್ದು ಇದೀಗ ಅಲಸಂದೆ ಹಾಕುವ ಯತ್ನದಲ್ಲಿದ್ದಾರೆ.
ಒಂದು ಎಕರೆಯಲ್ಲಿ ಬಾಳೆ ಬೆಳೆ ಹಾಕಿದ್ದರು. ಅದು ಕಾಯಿಲೆಗೆ ಒಳಗಾಯಿತು. ಅದರಲ್ಲಿ ಮುಕ್ಕಾಲು ಎಕರೆ ಬಾಳೆ ತೆಗೆದು ಕಬ್ಬಿನ ಕೃಷಿಗೆ ತೊಡಗುತ್ತಿದ್ದಾರೆ. ಇದಕ್ಕಾಗಿ 6 ಗಾಡಿ ಕೊಟ್ಟಿಗೆ ಗೊಬ್ಬರ ಕೊಂಡಿದ್ದಾರೆ. ಬದುವಿನ ಪಕ್ಕ ಈರುಳ್ಳಿ , ಮೆಣಸಿನಕಾಯಿ ಹಾಕಲು ತೀರ್ಮಾನಿಸಿದ್ದಾರೆ.
ಇವರ ಬಳಿ ಪವರ್ ಟಿಲ್ಲರ್ ಇದ್ದು ಅದರ ಮೂಲಕ ಉಳುಮೆ ಮಾಡುತ್ತಿದ್ದಾರೆ. ಸಾವಯವ ಗೊಬ್ಬರಕ್ಕಾಗಿ ರಸಸಾರ ಗೊಬ್ಬರದ ಗುಂಡಿ (ಬಯೊಡೈಜೆಸ್ಟರ್) ಮಾಡಿದ್ದಾರೆ. ಸುಮಾರು 20 ಅಡಿ ಉದ್ದ 10 ಅಡಿ ಅಗಲ ಹಾಗೂ 6 ಅಡಿ ಆಳ ಹೊಂದಿದೆ. ಅದರಲ್ಲಿ ಕೃಷಿಯಿಂದ ಬರುವ ಅನಗತ್ಯ ಕೊಳಕನ್ನು ತುಂಬಿ, ಮಣ್ಣು ನೀರು ಹರಿಸಿ ಸಾವಯವ ಗೊಬ್ಬರ ಮಾಡಿ ಭೂಮಿಗೆ ಉಣಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇವರ ನೆರವಿಗೆ ಬಂದ ತೋಟಗಾರಿಕೆ ಇಲಾಖೆ ಮೂವತ್ತು ಸಾವಿರ ರೂಪಾಯಿಗಳ ಸಹಾಯ ಧನವನ್ನು ನೀಡಿದೆ. ಈಗ ಅವರ ಆದ್ಯತಾ ಆಸೆ ಜೇನು ಸಾಕಾಣಿಕೆಗೂ ಮತ್ತೆ ಕೈ ಹಾಕುವ ಯೋಜನೆಯೂ ಇವರಿಗಿದೆ.
ಇವರು ತಮ್ಮ ಯಶಸ್ಸಿನ ಫಲವನ್ನು ಬಾನುಲಿ ಕೃಷಿ ಬೆಳಗು' ಕಾರ್ಯಕ್ರಮಕ್ಕೆ ನೀಡುತ್ತಾರೆ. ಇವರ ಕೃಷಿ ವೈಫಲ್ಯದ ಬದುಕಿಗೆ ಅಂತ್ಯ ಹಾಡಿದ್ದಾರೆ ಹಾಗೂ ರೈತರು ಪರಸ್ಪರ ಕಲೆತು ತಜ್ಞರ ಜೊತೆಗೂಡಿ ಅನುಭವ ಪಡೆದಿದ್ದು, ಈಗ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಿಂದ ಸಾಧ್ಯವಾಯಿತು ಎಂಬುದು ಶ್ರೀಮತಿ ಸುಶೀಲ ಎಸ್ ಡಿ ರಾಮಯ್ಯನವರ ಪೂರ್ಣ ನಂಬಿಕೆ.
ಇದೀಗ ಜೂನ್ 29ರ ಸೋಮವಾರ ರಾಮಯ್ಯನವರ ಜಮೀನಿನಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯ ಕ್ರಮ ನಡೆದಿದೆ . ಅಂದು ಆಸಕ್ತ ರೈತರು ತಜ್ಞರು ಸೇರಿ ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿ ಕೊಂಡಿದ್ದಾರೆ . ಮಂಡ್ಯ ಸಮೀಪ ಶಾನುಬೋಗನ ಹಳ್ಳಿಯಲ್ಲಿ ಬಸವನಗುಡಿ ಕೆರೆಪಕ್ಕ ಇವರ ಜಮೀನಿದೆ. ಶಾನುಬೋಗನಹಳ್ಳಿಗೆ ಮಂಡ್ಯದಿಂದ ಹೊರಟು ಬಸರಾಳು ಹೇಮಾವತಿ ಕ್ವಾರ್ಟಸ್ ಬಳಿ ಇಳಿದು ವಡ್ಡರಹಳ್ಳಿ ರಸ್ತೆಯಲ್ಲಿ 1.5 ಕಿಲೋ ಮೀಟರ್ ದೂರದಲ್ಲಿದೆ. ಆಸಕ್ತ ಕೃಷಿಕರು ಭೇಟಿ ನೀಡಬಹುದಾಗಿದೆ ಎಂದು ಬಾನುಲಿ ಕೃಷಿ ಬಳಗ ಹೇಳುತ್ತದೆ. ರಾಮಯ್ಯನವರ ದೂರವಾಣಿ ಸಂಖ್ಯೆ 9663372277

Thursday, August 6, 2009

ಕಂಪನಿ ಸ್ಥಾಪನೆಯತ್ತ ಮಹತ್ವದ ಹೆಜ್ಜೆ
ಕಳೆದ
ಮೂರು ವರ್ಷಗಳಲ್ಲಿ ಪ್ರತಿ ತಿಂಗಳು ತಪ್ಪದೆ ಕಾರ್ಯಕ್ರಮ ಏರ್ಪಡಿಸುತ್ತಾ ರೈತರಿಗೆ ಮಾರ್ಗದರ್ಶನ ನೀಡುತ್ತಾ ಬಂದಿರುವ ಬಾನುಲಿ ಕೃಷಿ ಬೆಳಗು ತಂಡವು ಇಂದು( ೬-೮-೦೯ ) ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ . ಬಾನುಲಿ ಕೃಷಿಕರ ಬಳಗದ ಮುಂದಾಳತ್ವದಲ್ಲಿ ಕಂಪನಿ ಒಂದನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ . ಮಂಡ್ಯದ ವಿಬ್ ಸೆಟಿ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಆಕಾಶವಾಣಿಯ ಎನ್.ಕೇಶವ ಮೂರ್ತಿ ,ವಾರ್ತಾ ಇಲಾಖೆಯ ಎ ಆರ್ ಪ್ರಕಾಶ್ ವಿಬ್ ಸೆಟಿ ಯ ಬಾಲಸುಬ್ರಮಣಿಯನ್ ಬಾನುಲಿ ಕೃಷಿಕರ ಬಳಗದ ಅಧ್ಯಕ್ಷ ಬಿ .ವೀರಭದ್ರಯ್ಯ ಸೇರಿ ದಂತೆ ಹಲವು ಬಳಗದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು .ಭದ್ರಾವತಿ ಯಿಂದ ಬಂದಿದ್ದ ಕೆ .ವಿ .ನಾರಾಯಣ್ ,ಬೆಂಗಳೂರಿಂದ ಬಂದಿದ್ದ ಕಂಪನಿ ಸೆಕ್ರೆಟರಿ ಸಲಹೆಗಾರ ಶಶಿಧರ್ ಜಿ.ಎಸ್. ಅವರು ಕಂಪನಿ ರಚಿಸುವ ನಿಯಮಗಳ ಕುರಿತು ಉಪಯುಕ್ತ ಸಲಹೆ ನೀಡಿದರು .

Monday, August 3, 2009

ನಮ್ಮ ಕೃಷಿ ನಮಗೆ ಹೆಮ್ಮೆ

ನಮ್ಮ ಕೃಷಿ ಬತ್ತುವುದಿಲ್ಲ
ನಮ್ಮ ಕೃಷಿ ಒಣಗುವುದಿಲ್ಲ
ನಮ್ಮ ಕೃಷಿ ಬಾಡುವುದಿಲ್ಲ
ನಮ್ಮ ಕೃಷಿಕರು ಕೊರಗುವುದಿಲ್ಲ
ನಮ್ಮ ಕೃಷಿ ಸಂಪತ್ತು ಕರಗುವುದಿಲ್ಲ
ನಮ್ಮ ಕೃಷಿ ಜೀವನ ನಿಲ್ಲುವುದಿಲ್ಲ
ನಮ್ಮ ಬಾನುಲಿ ಕೃಷಿ ಬೆಳಗು ನಿರಂತರವಾಗಿರಲಿ
- ಅನುಷ ವಿನಯ್






















ಸ್ವಾವಲಂಬನೆಯತ್ತ ಹೆಜ್ಜೆ
ಎನ್.ಎಂ.ಎಸ್ - 2 ಭತ್ತದ ತಳಿ
ಎಂ.ಕೆ. ಶಂಕರ್ ಗುರು
ಕೃಷಿಕರು, ಮಾಡ್ರಳ್ಳಿ ಗ್ರಾಮ,
ಟಿ.ನರಸೀಪುರ ತಾ:
ಮೈಸೂರು ಜಿಲ್ಲೆ.
ಮೊಬೈಲ್ ಸಂಖ್ಯೆ: 9900658921

ಸುಮಾರು 40 ವರ್ಷಗಳ ಕಾಲ ಕೃಷಿ ಭೂಮಿಯ ಒಡನಾಟ ಹಾಗೂ ಹಿರಿಯ ಕೃಷಿಕರನ್ನು ನೆನಪಿಸಿಕೊಳ್ಳಲು ಇಚ್ಚಿಸುತ್ತೇನೆ.
ನಾನು ಭತ್ತದ ತಳಿಯನ್ನು ಅಭಿವೃದ್ಧಿ ಪಡಿಸಲು ನಮ್ಮ ಪರಂಪರೆಯ ಕೃಷಿ ಪದ್ಧತಿಯೇ ಕಾರಣ. ನನ್ನ ಬಾಲ್ಯಜೀವನದ ಕಾಲದಿಂದ ದವಸದಾನ್ಯಗಳ ಬೆಳೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದದ್ದು. ಹಸಿರುಕ್ರಾಂತಿ ಹೆಸರಲ್ಲಿ ಕೃಷಿ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ ತಳಿಗಳಿಗೆ ಹೆಚ್ಚಿನ ಗೌರವಕೊಟ್ಟು ನಾನು ಸಹ ಅವುಗಳಿಗೆ ಹೊಂದಿಕೊಂಡಿರುವ ನಡುವೆ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿದ್ದ ಪ್ರೋಫೆಸರ್ ಎಂ.ಡಿ. ನಂಜುಂಡಸ್ವಾಮಿಗಳವರ ವಿದೇಶಿ ಪ್ರವಾಸದ ಅನುಭವಗಳನ್ನು ಅವರು ನಮಗೆಲ್ಲಾ ಮನದಟ್ಟು ಮಾಡಿದ ಮೇಲೆ, ನಾನು ಮೂಲತಹ ಸಾವಯವ ಕೃಷಿಕ ಹಾಗೂ ನಾಟಿತಳಿಗಳ ಬಗ್ಗೆ ಹೆಚ್ಚಿನ ಒಲವು ಇದ್ದಕಾರಣ ಅವರು ತಿಳಿಸಿದ ಮಾರ್ಗದರ್ಶನವು ನನಗೆ ಹೆಚ್ಚಿನ ಸಹಕಾರಿಯಾಯಿತು. ಅವರಿಗೂ ಸಹ ನಾನು ರಾಷ್ಟ್ರ ರೈತ ಕುಟುಂಬಗಳ ಪರವಾಗಿ ಋಣಿಯಾಗಿರುತ್ತೇನೆ.
ನಮ್ಮ ಪರಿಸರದಲ್ಲಿ ಮರಗಿಡ ಪ್ರಾಣಿ ಪಕ್ಷಿ ಇವುಗಳನೆಲ್ಲ ಗಮನಿಸಿದಾಗ ವಿಭಿನ್ನವಾದ ರೀತಿಯಲ್ಲಿ ಕಂಡುಬರುವುದನ್ನು ನಾನು ಗಮನಿಸುತ್ತ ಬಂದಿದ್ದೆ. ಅಲ್ಲದೇ ಬಿತ್ತನೆ ಬೀಜಗಳನ್ನು ವಿನಿಮಯ ಮಾಡುವ ಆಯ್ದ ಕೃಷಿ ಕುಟುಂಬಗಳು ಪ್ರತಿಗ್ರಾಮದಲ್ಲು ಹಿಂದಿನ ಕಾಲದಿಂದಲೂ ಸಂಪ್ರದಾಯ ಬದ್ಧವಾಗಿ ಗುರುತಿಸಿಕೊಂಡಿವೆ. ಅವರು ಸಹ ತಳಿ ಅಭಿವೃದ್ಧಿಯನ್ನು ಮುಂದುವರಿಸುತ್ತ ಬಂದವರು.
ನನ್ನ ಬಾಲ್ಯದಿಂದಲೂ ಭತ್ತದ ಒಡನಾಟ, ನಮ್ಮ ಊರಿನಲ್ಲಿ ಎಲ್ಲಾ ಭತ್ತಬೆಳೆಯುವ ಜಮೀನುಗಳೇ. ನಾನು ನಮ್ಮ ಜಮೀನಿನ ಸುತ್ತ ಮುತ್ತ ಸುತ್ತಾಡುವಾಗ ಒಂದೊಂದು ಜಮೀನಿನಲ್ಲಿ ಒಂದೊಂದು ರೀತಿಯ, ವಿಭಿನ್ನವಾದ ಭತ್ತದ ಗಿಡಗಳನ್ನು ಆಯ್ಕೆ ಮಾಡಿ ಏಕೆ ತಳಿಅಭಿವೃದ್ಧಿ ಪಡಿಸಬಾರದು ಎಂದು ಯೋಚನೆ ಮಾಡಿದೆ. ಸಂದರ್ಭದಲ್ಲಿ ನಮ್ಮ ಪಕ್ಕದ ಜಮೀನಿನ ಭತ್ತದ ಬೆಳೆ ಮಧ್ಯೆ ನಾಲ್ಕು ಭತ್ತದಗಿಡಗಳಿಗೆ ಬಣ್ಣದ ದಾರದಿಂದ ಗುರುತು ಮಾಡಿ ಬೆಳೆ ಬಲಿತನಂತರ ಕೊಯ್ಲು ಮಾಡಿ ಭತ್ತದ ಕಾಳುಗಳನ್ನು ನಾಲ್ಕು ಚೀಲಗಳಲ್ಲಿ ಒಂದೊಂದು ಜಾತಿಯನ್ನು ಬೇರೆ ಬೇರೆ ಸಂಗ್ರಹಿಸಿದೆ. ಕೊಯ್ಲು ಮಾಡಿದ ಏಳನೇ ತಿಂಗಳಲ್ಲಿ (ಜುಲೈ 15) ನಂತರ ಬೇರೆ ಬೇರೆ ವಿಭಾಗಮಾಡಿ ಒಟ್ಟು (ನರ್ಸರಿ) ಸಸಿ ಬಂದನಂತರ ಒಂದು, ಎರಡು, ಮೂರು, ನಾಲ್ಕು ಎಂದು ಸಂಖ್ಯೆಕೊಟ್ಟು ವಿಭಾಗಮಾಡಿ ನಾಟಿ ಮಾಡಿದೆ. ನವೆಂಬರ್ ತಿಂಗಳ ಮಧ್ಯದಲ್ಲಿ (15 ತಾರೀಖು) ಕೊಯ್ಲಿಗೆ ಬಂದ ಹೆಚ್ಚಿನ ಪ್ರಮಾಣದ ಭತ್ತದ ಬೀಜಗಳನ್ನು ಸಂಗ್ರಹಮಾಡಿ, ಇದೇ ರೀತಿ ಆರೇಳು ವರ್ಷಗಳ ಕಾಲ ಅದರ ಗುಣಮಟ್ಟವನ್ನು ಗಮನಿಸುತ್ತ ಬಂದೆ. ಸಂಖ್ಯೆ ಒಂದು, ಮೂರು ಮತ್ತು ನಾಲ್ಕನೇ ಸಂಖ್ಯೆಯ ತಳಿಗಳ ಗುಣಧರ್ಮ ಒಪ್ಪಿಗೆಯಾಗದ ಕಾರಣ ಅವುಗಳನ್ನು ದೂರ ಮಾಡಿ ಸಂಖ್ಯೆ ಎರಡನ್ನು ಆಯ್ಕೆ ಮಾಡಿ ಬೆಳೆಯುತ್ತ ಬಂದಿದ್ದೇನೆ. ತದನಂತರ ಅಭಿವೃದ್ಧಿ ಪಡಿಸಿದ ಭತ್ತದ ತಳಿಗೆ, ನಾಮಾಂಕಿತವನ್ನೇಕೆ ಕೊಡಬಾರದು ಎಂದು ಅಭಿಪ್ರಾಯಪಟ್ಟೆ. ತಳಿ ಅಭಿವೃದ್ಧಿಗೆ ಸಹಕರಿಸಿದ ನಮ್ಮ ಶ್ರೀಮತಿ ನಿರ್ಮಲ , ನಮ್ಮ ತಾಲ್ಲೂಕು ಕೇಂದ್ರ ನರಸೀಪುರ (ಎನ್) ಮಾಡ್ರಳ್ಳಿ ನನ್ನ ಹುಟ್ಟೂರು (ಎಂ) ಮಾಡ್ರಳ್ಳಿ ಕೆಂಪಣ್ಣ, ಶಂಕರ್ ಗುರು ನನ್ನ ಹೆಸರು (ಎಸ್). ಉಳಿದ ತಳಿಸಂಖ್ಯೆ (ಎರಡು) ಎನ್. ಎಂಬ ಅಕ್ಷರವು ಎರಡು ನಾಮಾಂಕಿತವನ್ನು ಸೂಚಿಸುತ್ತದೆ. ಆದ್ದರಿಂದ ಅಭಿವೃದ್ಧಿ ಪಡಿಸಿದ ತಳಿಗೆ ಎನ್.ಎಂ.ಸಿ.-.2 (ಎರಡು) ಎಂದು ನಾಮಕರಣವನ್ನು ನನ್ನ ಸ್ವಇಚ್ಛೆಯಿಂದ ಮಾಡಿರುತ್ತೇನೆ. ಭತ್ತದ ಬೀಜಗಳನ್ನು ರಾಜ್ಯದಲ್ಲಿ ಇರುವ ಹಲವಾರು ಸಂಘ ಸಂಸ್ಥೆಗಳ ಮುಖಾಂತರ ರೈತರ ಜಮೀನುಗಳಲ್ಲಿ ಬೆಳೆಯುವಂತೆ ಬೀಜಗಳನ್ನು ತಲುಪಿಸಿರುತ್ತೇನೆ. ಬೆಳದ ರೈತರು ತಮ್ಮ ಅಭಿಪ್ರಾಯಗಳನ್ನು ಆಕಾಶವಾಣಿ ಮತ್ತು ಪತ್ರಗಳ ಮೂಲಕ ನಮ್ಮೆಲ್ಲರ ಗಮನಕ್ಕೆ ತಂದಿರುತ್ತಾರೆ. ಎರಡು ವರ್ಷಗಳ ಹಿಂದೆ ಎಂದರೆ 13/07/2007 ನಮ್ಮ ಭತ್ತದ ಬೀಜವನ್ನು ವಿ.ಸಿ.ಫಾರಂ ಮಂಡ್ಯದಲ್ಲಿ ಇರುವ ಸಂಶೋಧನಾ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಬೆಳೆಯಲು ಮನವಿ ಮಾಡಿದಾಗ ತಳಿಯ ಪರೀಕ್ಷೆಯನ್ನು ನಮ್ಮ ಸಂಶೋಧನಾ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಬೆಳೆದು ದೃಢೀಕರಿಸಲು ಐದು ಸಾವಿರದ ಆರುನೂರ ಇಪ್ಪತೈದು ರೂಪಾಯಿಗಳನ್ನು (5625) ನಮ್ಮ ಸ್ವಂತ ಹಣವನ್ನು ಪಾವತಿಮಾಡಿದರೆ ಪ್ರಾಯೋಗಿಕವಾಗಿ ಬೆಳೆದು ವರದಿ ಸಲ್ಲಿಸುತ್ತೇವೆ ಎಂದು ಪತ್ರವನ್ನು ನನಗೆ ಬರೆದರು. ತದನಂತರ ನಾನು ವಿಸ್ತರಣಾ ನಿರ್ದೇಶಕರು ಕೃಷಿ ವಿಶ್ವವಿದ್ಯಾಲಯ ಇವರ ವಿಳಾಸಕ್ಕೆ ಮೇಲ್ಕಂಡ ಮೊಬಲಗಿನ ಹಣವನ್ನು ಡಿಡಿ ಮುಖಾಂತರ ಕಳುಹಿಸಿ ಎರಡು ಕೆ.ಜಿ. ಭತ್ತದ ಬೀಜವನ್ನು ವಿ.ಸಿ.ಫಾರಂ ಮಂಡ್ಯದಲ್ಲಿ ಇರುವ ಭತ್ತದತಳಿ ಅಭಿವೃದ್ಧಿ ವಿಜ್ಞಾನಿಗಳ ಕೈಗೆ ತಲುಪಿಸಿದೆ. ಅವರು ಪ್ರಾಯೋಗಿಕವಾಗಿ ಬೆಳೆದು ಭತ್ತ ಎನ್.ಎಂ.ಸಿ..2 ತಳಿಯ ವರದಿಯನ್ನು ದಿನಾಂಕ 29/01/2008ರಲ್ಲಿ ನನಗೆ ಪತ್ರ ಮುಖೇನ ತಲುಪಿಸಿರುತ್ತಾರೆ. ವರದಿಯಲ್ಲಿ ನಮ್ಮ ತಳಿಯು ಉತ್ತಮ ಗುಣಧರ್ಮ ಹಾಗೂ ಇಳುವರಿಯನ್ನು ಹೊಂದಿರುತ್ತದೆ ಎಂದು ತಿಳಿಸಿರುತ್ತಾರೆ. ಗಿಡದ ಎತ್ತರ (108) ನೂರೆಂಟು ಸೆಂ .ಮೀ . ಹಾಗೂ ಧಾನ್ಯದ ಇಳುವರಿ ಹೆಕ್ಟೇರಿಗೆ ಏಳುಸಾವಿರದ ಇನ್ನೂರ ತೊಂಭತ್ತೊಂಬತ್ತು ಕೆ.ಜಿ. ಎಂದು ರುಜುವಾತು ಪಡಿಸಿರುತ್ತಾರೆ. ಸುಮಾರು ಒಂದು ಎಕರೆಗೆ ಇಪ್ಪತ್ತ ಒಂಬತ್ತು (29.16 ) ಕ್ವಿಂಟಾಲ್ ಇಳುವರಿ ಬಂದಿರುತ್ತದೆ. ನಾನು ತಿಳಿದ ಮಟ್ಟಿಗೆ ತಳಿಯಲ್ಲಿ ರೋಗಭಾದೆ, ಕಡಿಮೆ ಇದ್ದು ಊಟಕ್ಕೆ ಅಕ್ಕಿ ಯೋಗ್ಯವಾಗಿದ್ದು, ದನಗಳನ್ನು ಸಾಕಲು ಹುಲ್ಲು ಉತ್ತಮವಾಗಿರುತ್ತದೆ ಎಂದು ನನ್ನ ಅನುಭವದಿಂದ ಹೇಳುತ್ತೇನೆ.
ನೆಚ್ಚಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿರವರನ್ನ ನೆನಪಿಸಿಕೊಳ್ಳುತ್ತಾ ನನ್ನ ಲೇಖನವನ್ನ ಮುಕ್ತಾಯಗೊಳಿಸುತ್ತೇನೆ.












ನಿರುದ್ಯೋಗ ನಿವಾರಣೆಗೆ ಆಸರೆ
ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ

ಮಂಡ್ಯ ಜಿಲ್ಲೆಯಲ್ಲಿ ನಿರುದ್ಯೋಗವನ್ನು ನಿವಾರಣೆ ಮಾಡಿ. ಜಿಲ್ಲೆಯ ಯುವಕ-ಯುವತಿಯರಿಗೆ ಉದ್ಯೋಗ ಸೃಷ್ಟಿ ಮಾಡುವ ದಿಸೆಯಲ್ಲಿ, ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ತರಬೇತಿ ನೀಡುತ್ತಿದೆ. ಜಿಲ್ಲೆಯಲ್ಲಿರುವ ರೈತರ ಸ್ವಾವಲಂಬನೆ ಬದುಕಿಗಾಗಿ, ಪ್ರತಿ ತಿಂಗಳು ರೈತರ ಜಮೀನಿನಲ್ಲಿ ನಡೆಯುವ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಲ್ಲೂ ಭಾಗವಹಿಸುತ್ತಾ ಇದೆ. 2006-07 ಇಸ್ವಿಯಲ್ಲಿ, ತರಬೇತಿ ಸಂಸ್ಥೆಯಲ್ಲೇ, 6 ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
2008-09 ಇಸ್ವಿಯಲಿ, 3 ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

'ಜೈವಿಕ ಇಂಧನ ಬೆಳೆಗಳ' ಕುರಿತು 3 ದಿನಗಳ ತರಬೇತಿ, 26.06.2008 ರಿಂದ 28.06.2008 ರವರೆಗೆ.'ಸುಸ್ಥಿರ ಬದುಕಿಗಾಗಿ ಸಮಗ್ರ ಕೃಷಿ' ಬಗ್ಗೆ 5 ದಿನಗಳ ತರಬೇತಿ, 16.12.2008 ರಿಂದ 20.12.2008 ರವರೆಗೆ. 3 ದಿನಗಳ ಎಮೆರ್ಜೆನ್ಸಿ ಲೈಟ್ ತಯಾರಿಕೆ ತರಬೇತಿ, 05.03.2009 ರಿಂದ 07.03.2009 ರವರೆಗೆ ಏರ್ಪಡಿಸಲಾಗಿದೆ.

ಆಕಾಶವಾಣಿ, ಮೈಸೂರು, ಕೃಷಿ ಇಲಾಖೆ, ಮಂಡ್ಯ ಹಾಗೂ ವಿಕಸನ ಸಂಸ್ಥೆ, ಮಂಡ್ಯ ಇವರ ಸಹಯೋಗದೊಂದಿಗೆ, ನಡೆಯುತ್ತಿರುವ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಲ್ಲಿ ರೈತರಿಗೆ ಅವಶ್ಯಕತೆಯಿರುವ ಎಲ್ಲಾ ಕೃಷಿ ತರಬೇತಿಗಳನ್ನು, ಎರ್ಪಡಿಸುವಲ್ಲಿ ಯಶಸ್ವಿಯಾಗಿದೆ. 2009-10ನೇ ಸಾಲಿನಲ್ಲಿ ಪ್ರತಿ ತಿಂಗಳಿಗೆ, ಒಂದು ಕೃಷಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಉದ್ದೇಶವಿದೆ.

ಸಂಸ್ಥೆಯ ದೂರವಾಣಿ ಸಂಖ್ಯೆ: (08232) 231497, 231293

-ಎಸ್. ಬಾಲಸುಬ್ರಮಣಿಯನ್,
ನಿರ್ದೇಶಕರು
ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ,
ಮಂಡ್ಯ.









ಸ್ವಾವಲಂಬಿ ಕೃಷಿ ಬದುಕಿನ ಶಕ್ತಿ
ಶಕ್ತಿ ಬಯೋಡೀಸಲ್ (ಜೈವಿಕ ಇಂಧನ)

ಇತ್ತೀಚಿನ ದಿನಗಳಲ್ಲಿ ವಿಶ್ವದ ಜನಸಂಖ್ಯೆ ಏರುತ್ತಲೆ ಇದೆ. ಜೊತೆಗೆ ವಿವಿಧ ರೀತಿಯ ವಾಹನಗಳ ಸಂಖ್ಯೆಯು ಕೂಡ ಜಾಸ್ತಿಯಾಗುತ್ತಿದೆ. ಕಾರಣದಿಂದ ಪ್ರತಿ ದಿನವು ವಿಶ್ವದ ಇಂಧನ ಬೇಡಿಕೆ ಗಣನೀಯವಾಗಿ ಏರುತ್ತಿದೆ. ಅಂಕಿ ಅಂಶಗಳ ಪ್ರಕಾರ ಭೂಗರ್ಭದಲ್ಲಿ ಸಿಗುವ ಇಂಧನ ಮೂಲಗಳು ಇನ್ನು ಕೆಲವೇ (20-30ವರ್ಷ) ವರ್ಷಗಳಲ್ಲಿ ಬರಿದಾಗಿ ಹೋಗುವ ಮುನ್ಸೂಚನೆ ಇದೆ. ಅಂತಹ ಸಮಯದಲ್ಲಿ ಇಂಧನ ಸಮಸ್ಯೆಯೆಂಬುದು ಎಲ್ಲರನ್ನು ದೊಡ್ಡ ಭೂತವಾಗಿ ಕಾಡಬಹುದು.
ಮೇಲಿನ ಎಲ್ಲಾ ಕಾರಣಗಳನ್ನು ಗಮನಿಸಿದರೆ, ಈಗ ಬಳಸುತ್ತಿರುವ ಸಾಂಪ್ರದಾಯಿಕ ಇಂಧನಗಳ ಜೊತೆಗೆ ನವಿಕರಿಸಬಹುದಾದ ಜೈವಿಕ ಇಂಧನವನ್ನ ಉತ್ಪಾದಿಸಿ ಉಪಯೋಗಿಸಿದರೆ ಮುಂದೆ ಕಾಡುವ ಒಂದು ದೊಡ್ಡ ಭೂತವನ್ನು ಸುಲಭವಾಗಿ ಎದುರಿಸಬಹುದು.
ಈಗ ಅಭಿವೃದ್ಧಿಶೀಲವಾಗಿರುವ ಭಾರತ ಮುಂದಿನ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ ಸಾಧ್ಯವಾದಷ್ಟು ಇಂಧನವನ್ನು ಅಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ ತನ್ನಲ್ಲಿಯೇ, ಅವಶ್ಯಕವಾದ ಬದಲಿ ಇಂಧನ ಉತ್ಪತ್ತಿ ಮಾಡಬೇಕು. ಹೇರಳವಾದ ನಿಸರ್ಗ ಸಂಪತ್ತು ನಮ್ಮಲ್ಲಿಯೆ ಇದೆ. ಆದುದರಿಂದ ಬದಲಿ ಇಂಧನ ಮೂಲಗಳನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಪ್ರಾಕೃತಿಕವಾಗಿ ದೊರೆಯುವ ಸಸ್ಯಮೂಲಗಳಿಂದ ಜೈವಿಕ ಇಂಧನ ಉತ್ಪಾದನೆ ಹಾಗೂ ಪ್ರಕೃತಿಯ ಸಹಜತೆಯನ್ನು ಸುಸ್ಥಿರ ಸ್ಥಿತಿಗೆ ತರುವುದು ಅವಶ್ಯಕವಾಗಿದೆ. ಸಸ್ಯ ಮೂಲಗಳನ್ನು ಕೃಷಿಕರು ತಮ್ಮ ಜಮೀನಿನ ಬದುಗಳಲ್ಲಿ, ಹಿತ್ತಲು, ಸಾಮೂಹಿಕ ಸ್ಥಳಗಳು ಹಾಗೂ ಬಂಜರು ಭೂಮಿಯಲ್ಲಿ ಬೆಳೆಯಬಹುದಾಗಿದೆ.
ಪ್ರಮುಖವಾಗಿ ಹೊಂಗೆ, ಬೇವು, ಹಿಪ್ಟೆ, ಸಿಬರೂಬಗ್ಲಾಕ, ಜಟ್ರೋಪ ಇನ್ನಿತರ ಹಲವಾರು ಸಸ್ಯಗಳ ಮೂಲಕ ಬಯೋಡೀಸಲ್ (ಜೈವಿಕ ಇಂಧನ) ಉತ್ಪಾದನೆ ಮಾಡಬಹುದಾಗಿದೆ. ಜೋಳ, ಕಬ್ಬು, ಬೀಟ್ರೂಟ್, ಮುಸುಕಿನ ಜೋಳಗಳಂತ ಬೆಳೆಗಳು ಮತ್ತು ಕೊಳೆತ ಉಪಯೋಗಕ್ಕೆ ಬಾರದ ಹಣ್ಣು ತರಕಾರಿಗಳನ್ನು ಇಥೆನಾಲ್ ಉತ್ಪಾದನೆಗಾಗಿ ಬಳಸಬಹುದಾಗಿದೆ. ಬಯೋಡೀಸಲ್ಅನ್ನು ರೈತರು ತಮ್ಮ ಮನೆಯಲ್ಲಿಯೇ ತಯಾರು ಮಾಡಿಕೊಳ್ಳಬಹುದು. ಕಾಲಕ್ಕೆ ತಕ್ಕಂತೆ ದೊರೆಯುವ ಬೀಜಗಳನ್ನು ಶೇಖರಣೆ ಮಾಡಿಕೊಂಡು, ಅವುಗಳನ್ನು ಪುಟ್ಟ ವಾಕ್ವಾಫೆಲ್ಲಿರ್-(ಗಾಣ) ಯಂತ್ರದ ಮುಖಾಂತರ ಎಣ್ಣೆ ತೆಗೆಯಬೇಕು. ಒಂದು ಲೀಟರ್ ಹೊಂಗೆ ಎಣ್ಣೆಗೆ 100-150 ಎಮ್ಎಲ್ ಇಥಿನಾಲ್ ಮತ್ತು 10-15 ಗ್ರಾಂ ಸೋಡಿಯಂ ಹೈಡ್ರಾಕ್ಸೈಡ್ ಅನ್ನು ಬೆರೆಸಿ ಚೆನ್ನಾಗಿ ಕಲಕಿ ಒಂದು ದಿವಸ ಹಾಗೆ ಇಡಬೇಕು. ಮೇಲ್ಬಾಗದಲ್ಲಿ ಬಯೋಡೀಸಲ್ ಶೇಖರಗೊಂಡರೆ, ತಳಭಾಗದಲ್ಲಿ ಗ್ಲಿಸರೀನ್ ಉಪಉತ್ಪನ್ನ ಶೇಖರಗೊಳ್ಳುತ್ತದೆ. ಗ್ಲಿಸರಿನ್ ಅನ್ನು ಬೇರ್ಪಡಿಸಿದರೆ, ಬಳಸಲು ಯೋಗ್ಯವಾದ ಬಯೋಡೀಸಲ್ ದೊರೆಯುತ್ತದೆ.
ಬಯೋಡೀಸಲ್ ಪ್ರಯೋಜನಗಳು:-
* ಪರಿಸರ ಸ್ನೇಹಿ ಜೈವಿಕ ಇಂಧನ
* ಎಣ್ಣೆ ಅಂಶ ಚೆನ್ನಾಗಿ ಇರುವುದರಿಂದ, ವಾಹನಗಳು ಸುಲಭವಾಗಿ ತಿರುಗುವುದರಿಂದ, ಅವುಗಳ ಆಯಸ್ಸು ಹೆಚ್ಚುತ್ತದೆ.
* ಎಣ್ಣೆ ಬೇರ್ಪಡಿಸಿದ ನಂತರ ದೊರೆಯುವ ಮಡ್ಡಿ (ಹಿಂಡಿ) ಉತ್ತಮ ಸಾವಯವ ಗೊಬ್ಬರವಾಗುತ್ತದೆ.
* ಎಲ್ಲದಕ್ಕಿಂತ ಹೆಚ್ಚಾಗಿ ಖರ್ಚಿಲ್ಲದೆ ಸ್ವಂತ ಬಳಕೆಗೆ ಅವಶ್ಯಕವಾದ ಡೀಸಲ್ಅನ್ನು ತಯಾರು ಮಾಡಿಕೊಳ್ಳಬಹುದು.

ಅರ್ಥಿಕ ಲೆಕ್ಕಾಚಾರ:-
ಒಂದು ಲೀಟರ್ ಹೊಂಗೆ ಎಣ್ಣೆ ಉತ್ಪಾದನೆ ಮಾಡಲು 3.5 ಕೆ.ಜಿ. ಹೊಂಗೆ ಬೀಜಬೇಕಾದರೆ, 100ಎಮ್ಎಲ್ ಇಥೆನಾಲ್, 15 ಗ್ರಾಂ ಸೋಡಿಯಂ ಹೈಡ್ರಾಕ್ಸೈಡ್ ಬೇಕು.
ಖರ್ಚು :-
3.5 ಕೆ.ಜಿ. ಹೊಂಗೆ ಬೀಜದ ಬೆಲೆ 35 ರೂ. (10 ರೂ./ಕೆ.ಜಿ)
ಎಥಿನಾಲ್, ಸೋಡಿಯಂ ಹೈಡ್ರಾಕ್ಸೈಡ್, ಪ್ರೋಸಸಿಂಗ್ ಖರ್ಚು 08 ರೂ.
ಒಟ್ಟು 43 ರೂ.

ಆದಾಯ:-
1 ಲೀಟರ್ ಬಯೋಡಿಸಲ್ 40 ರೂ.
2.5 ಕೆ.ಜಿ. ಹೊಂಗೆ ಇಂಡಿ 15 ರೂ.
200 ಎಂಎಲ್ ಗ್ಲಿಸರೀನ್ 6 ರೂ.
ಒಟ್ಟು 61 ರೂ.
ಮೂಲಕ ಲೆಕ್ಕಾಚಾರದ ಅಂಕಿಅಂಶಗಳನ್ನು ಗಮನಿಸಿದರೆ, ಬಯೋಡೀಸಲ್ ಉತ್ಪಾದನೆ ಲಾಭದಾಯಕ ಮತ್ತು ಸ್ವಾವಲಂಬಿ ವಿಧಾನವಾಗಿದೆ. ಬೇಗಬೇಗ ಬದಲಾಗುತ್ತಿರುವ ಕಾಲದಲ್ಲಿ ಕೃಷಿಕರು ಇತರ ವರ್ಗಗಳಂತೆ ಸಮನಾಗಿ ಜೀವನ ನಡೆಸಬೇಕು ಎಂದುಕೊಂಡರೆ, ಹಿಂದಿನ ಹಿರಿಯರ ಅನುಭವದೊಂದಿಗೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯು ಸಹ ಉದ್ಯಮ ಎಂದು ಪರಿಗಣಿಸಿ, ಮುನ್ನೆಡೆಯಬೇಕು.
-ಹರ್ಷ.ಡಿ.ಎನ್.
ಡಿಂಕ, ಪಾಂಡವಪುರ ತಾಲ್ಲೋಕು.ಫೋನ್ 9945051194










ಬಾನುಲಿ ಕೃಷಿ ಬೆಳಗು ಬೆಳೆದು ಬಂದ ದಾರಿ

ಮೈಸೂರು ಆಕಾಶವಾಣಿ ಕೃಷಿ ರಂಗ ವಿಭಾಗವೂ ಪ್ರತಿ ದಿನ ಬೆಳಿಗ್ಗೆ 6.35 ಮತ್ತು ಸಾಯಂಕಾಲ 6.50ಕ್ಕೆ ರೈತರಿಗಾಗಿ ಸಲಹೆ ಮತ್ತು ಕೃಷಿ ವಿಜ್ಞಾನಿಗಳನ್ನ ಕಾಲಕಾಲಕ್ಕೆ ಸಂದರ್ಶನ ಮಾಡಿ ಪ್ರತಿ ತಿಂಗಳು ಪ್ರತಿ ವಾರವು ಕಾರ್ಯಕ್ರಮಗಳನ್ನು ನೀಡುತ್ತಿದೆ . ನಾನು ಹಾಗು ನಮ್ಮಂತ ರೈತರುಗಳು ಅವುಗಳನ್ನ ಅನುಸರಿಸಿ (ಕೃಷಿಕರು) ಬೆಸಾಯವನ್ನು ಮಾಡುತ್ತಿದ್ದೇವೆ .
ಇದನ್ನ
ಅನುಸರಿಸಿ ವಿ.ಸಿ.ಫಾರಂನಲ್ಲಿ ೯/೫/೦೬ ಕ್ಕೆ ಮೊದಲ ಕಾರ್ಯಕ್ರಮ ನಡೆಯಿತು. ಮಂಡ್ಯದ ವಿಜಯ ಬ್ಯಾಂಕ್ ಸ್ವ ಉದ್ಯೋಗ ಸಂಸ್ಥೆ ಕೈ ಜೋಡಿಸಿ, 6 ಕಾರ್ಯಕ್ರಮಗಳು ಸಂಸ್ಥೆಯ ಅಡಿಯಲ್ಲಿ ಇನ್ನು 6 ಕಾರ್ಯಕ್ರಮಗಳು ವಿ.ಸಿ.ಫಾರಂನಲ್ಲಿ ನಡೆಯುವಂತೆ ತೀರ್ಮಾನವಾಗಿ ಕಾರ್ಯಕ್ರಮಕ್ಕೆ, ಒಂದು ಹೆಸರು ಕೊಟ್ಟರು. ಅದು ಬಾನುಲಿ ಕೃಷಿ ಮಾಹಿತಿ ಧಾರಣಾ ಶಕ್ತಿ ವೃದ್ಧಿ ಕಾರ್ಯಕ್ರಮ ಎಂದು ನಾಮಕರಣವಾಯಿತು. ಕಾರ್ಯಕ್ರಮಗಳಲ್ಲಿ ಪ್ರತಿ ತಿಂಗಳು ಎರಡು ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತಿತ್ತು.
ಕಾರ್ಯಕ್ರಮದಲ್ಲಿ ಹಿಂದಿನ ತಿಂಗಳು ಆಕಾಶವಾಣಿ 100.6 ಮೈಸೂರಿನಲ್ಲಿ ಬಿತ್ತರಗೊಂಡ ಕೃಷಿ ಕಾರ್ಯಕ್ರಮಗಳ ಬಗ್ಗೆ ಒಂದು ಕಿರು ಪರೀಕ್ಷೆಯನ್ನು ನಡೆಸಿ ಅದರಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಮೊದಲ ಮೂವರಿಗೆ ರೇಡಿಯೋಗಳನ್ನ ನೀಡಿ ಪ್ರಶಸ್ತಿ ಪತ್ರಗಳನ್ನು ನೀಡುತ್ತಿದ್ದರು. ಇದರ ಜೊತೆಗೆ ಭಾಗವಹಿಸಿದ ರೈತರಿಗೆ ಕೃಷಿಯಲ್ಲಿ ಇತ್ತೀಚಿನ ತಾಂತ್ರಿಕತೆಗಳ ಬಗ್ಗೆ ಮಾಹಿತಿಗಳನ್ನ ನೀಡಲಾಯಿತು. ಭತ್ತದ ಬೇಸಾಯ, ಕಬ್ಬಿನ ಬೇಸಾಯ, ರಾಗಿ ಬೇಸಾಯ, ಮೇವಿನ ಬೆಳೆಗಳು, ಔಷಧಿ ಮತ್ತು ಸುಗಂದ ದ್ರವ್ಯ ಸಸ್ಯಗಳು, ಒಂಟಿ ಎತ್ತಿನ ನೇಗಿಲು, ಒಂಟಿ ಕಣ್ಣಿನ ಕಬ್ಬಿನ ಬೇಸಾಯ, ಜೇನು ಕೃಷಿ, ಅಸ್ತ್ರವಲೆ, ಅಣಬೆ ಬೇಸಾಯ, ಮೌಲ್ಯವರ್ದಿತ ರಾಗಿ ಮತ್ತು ಮುಸುಕಿನ ಜೋಳದ ಉತ್ಪನ್ನಗಳ ಬಗ್ಗೆ ತರಬೇತಿಯನ್ನ ನೀಡಲಾಗಿತ್ತು.
ಹನ್ನೆರಡು ತಿಂಗಳು ನಿರಂತರವಾಗಿ ಜರುಗಿದ ಕಾರ್ಯಕ್ರಮದ ಸವಿನೆನಪಿಗಾಗಿ ರೈತರೇ ಹೊರ ತಂದ ಕೃಷಿ ವಿಜಯವಾಣಿ ಸ್ಮರಣ ಸಂಚಿಕೆ ಬಿಡುಗಡೆಯಾಯಿತು. ಅದು ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರ ಸಾಧನೆಗಳ ಬಗ್ಗೆ ಕಿರುಪರಿಚಯವನ್ನ ಒಳಗೊಂಡಿತ್ತು.
ಕಾರ್ಯಕ್ರಮ ಮುಗಿದ ನಂತರ ಇದು ಮುಂದೆ ನಡೆಯಬೇಕೆ ಬೇಡವೆ ಎಂದು ತರ್ಕ ಮಾಡಲಾಗಿ ಮುಂದಿನ ವರ್ಷದಿಂದ ರೈತರ ತಾಕಿನಲ್ಲಿ ನಡೆಯಬೇಕು ಎಂದು ಎಲ್ಲಾ ರೈತರು ಒಕ್ಕೊರಲಿನಿಂದ ನಿರ್ಣಯ ತೆಗೆದುಕೊಂಡರು. ಅದಕ್ಕೆ ಆಗಮಿಸಿದ ಮಂಡ್ಯ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಮತ್ತು ಆಕಾಶವಾಣಿಯ ಮೈಸೂರು, ನಿರ್ದೇಶಕರು ಮತ್ತು ವಿಜಯ ಬ್ಯಾಂಕ್ ಸ್ವ ಉದ್ಯೋಗ ಸಂಸ್ಥೆ ಮಂಡ್ಯ, ಹಾಗೂ ವಿ.ಸಿ.ಫಾರಂ, ಅಧಿಕಾರಿಗಳು ಇದನ್ನ ಒಪ್ಪಿದರು.
ಆದರೆ ಮಂಡ್ಯದಲ್ಲಿ ನಡೆಯುವ ರೈತರ ತಾಕಿನಲ್ಲಿ ಇತರ ರೈತರಿಗೆ ಮಾದರಿಯಾಗುವಂತೆ ಕಾರ್ಯಕ್ರಮದಲ್ಲಿ ಇರಬೇಕು ಎಂದು ಮತ್ತು ಕಾರ್ಯಕ್ರಮದಲ್ಲಿ ನುರಿತ ವಿಜ್ಞಾನಿಗಳು ಮತ್ತು ಪ್ರಗತಿ ಪರ ರೈತರನ್ನು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಕರೆದು ಮಾಹಿತಿಗಳನ್ನ ಕೊಡುವಂತೆ ತೀರ್ಮಾನವಾಗಿ ಕಾರ್ಯಕ್ರಮಕ್ಕೆ ಬಾನುಲಿ ಕೃಷಿ ಬೆಳಗು ಎಂದು ನಾಮಕರಣ ಮಾಡಲಾಯಿತು.
ಕಾರ್ಯಕ್ರಮವು ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಯುವಂತೆ ಎಲ್ಲಾ ಅಧಿಕಾರಿಗಳು ಮತ್ತು ರೈತರು ತೀರ್ಮಾನವಾಗಿ 24.06.2007ರಿಂದ ಪ್ರಾರಂಭಗೊಂಡು ಎರಡು ವರ್ಷ 26.04.2009ಕ್ಕೆ ಮುಗಿಯಿತು. ಇದರ ಮಧ್ಯೆ ಅಕ್ಟೋಬರ್ ನಲ್ಲಿ ಮೂರು ದಿನಗಳ ಪ್ರವಾಸವನ್ನ ರೈತರು ಕೈಗೊಂಡರು. ಮೇ ತಿಂಗಳಿನಲ್ಲಿ ಕೇರಳದ ವೈನಾಡಿಗೆ ಮೂರು ದಿನಗಳ ಪ್ರವಾಸ ಕೈಗೊಂಡು ಎಲ್ಲಾ ಕಾರ್ಯಕ್ರಮಗಳು ಬಹಳ ಚೆನ್ನಾಗಿ ನಡೆದುಕೊಂಡು ಬಂದಿತು. ಹಾಗೂ ಜೂನ್ ತಿಂಗಳು 2009- 17ನೇ ತಾರೀಕು ರಾಜ್ಯ ಮಟ್ಟದ ಕಾರ್ಯಕ್ರಮವನ್ನು ನಡೆಸಲಾಯಿತು. . ಎಲ್ಲಾ ರೈತರು ಬಹಳ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. .

-ಕುಂಬಳಕಾಯಿ ಕೆ.ಸಿ.ಶಿವರಾಮೇಗೌಡ,
ಕೀಲಾರ
ಹಾಗೂ
ಭಾಸ್ಕರ್ ತರಣಿಮಂಟಿ
ಗುಂಡ್ಲುಪೇಟೆ ತಾ||,
ಮೈಸೂರು ಜಿಲ್ಲೆ. ಫೋನ್ 9945616044






ಪರಿಸರ ಸ್ನೇಹಿ ಗಿಡಮೂಲಿಕೆಗಳ ಸೊಳ್ಳೆ ನಿವಾರಕ ಅಗರಬತ್ತಿ
ಬಸವ
ಈಗ ಲಭ್ಯವಿರುವ ನಾಗರಿಕ ಸಮಾಜದ ಸೊಳ್ಳೆ ಬತ್ತಿಗಳು ಲಿಕ್ವಿಡ್ ವೆಪರೈಸರ್ ಗಳು ಹಾಗೂ ರೆಪಲೆಂಟ್ಗಳನ್ನು ಬಳಸುವ ಜನರು ಇದರಿಂದ ಉತ್ಪತ್ತಿಯಾಗುವ ವಿಷವನ್ನು ಸೇವಿಸಿ ಅಲ್ಸರ್, ಶ್ವಾಶಕೋಶದ ಕ್ಯಾನ್ಸರ್, ನೆಗಡಿ, ಅಲರ್ಜಿ ಹೀಗೆ ಹಲವಾರು ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಸೊಳ್ಳೆ ಬತ್ತಿಯಲ್ಲಿ ಲಿತ್ರೀನ್ ಎಂಬ ವಿಷಕಾರಿಕ ರಸಾಯನಿಕ ದ್ರವವನ್ನು ಸೇರಿಸಿರುವುದರಿಂದ ಸೊಳ್ಳೆಗಳು ತಾತ್ಕಾಲಿಕವಾಗಿ ಮೂರ್ಛೆ ಹೋಗುವಂತೆ ಮಾಡುತ್ತದೆ ಅಷ್ಟೆ ವಿನಹ ಸಂಪೂರ್ಣವಾಗಿ ಕೊಲ್ಲಲಾರದು. ವಿಷಕಾರಿ ಅನಿಲವನ್ನು ಮಾನವ ಜನಾಂಗ ದಿನನಿತ್ಯ ಸೇವಿಸುವುದರಿಂದ ಮೇಲೆ ಹೇಳಿರುವ ಕಾಯಿಲೆಗಳಿಗೆ ತುತ್ತಾಗಿ ಬಳಲುವುದಲ್ಲದೆ ತನ್ನ ಹಣವನ್ನು ಔಷಧಿಗಳು ಹಾಗೂ ವೈದ್ಯರುಗಳಿಗೆ ಕಳೆದುಕೊಂಡು ತನ್ನ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುತ್ತಾನೆ.
ಸ್ಥಳೀಯ ತಂತ್ತಜ್ಞಾನ ಬಳಸಿಕೊಂಡು ಆರೋಗ್ಯಕ್ಕೆ ಅನುಕೂಲವಾಗುವಂತೆ ಮನೆ ಪರಿಸರವನ್ನು ಸುವ್ವಾಸನೆ ಭರಿತವಾಗಿಸುವ ಪರಿಸರಸ್ನೇಹಿ ಗಿಡ ಮೂಲಿಕೆಗಳ ಸೊಳ್ಳೆ ನಿವಾರಕ ಬೆರಣಿ ವಿಚಾರವನ್ನು ಶಿವಮೊಗ್ಗದ ರಾಮಚಂದ್ರಪುರದ ಮಠದ ವಸ್ತು ಪ್ರದರ್ಶನದಲ್ಲಿ ನೋಡಿ ಪ್ರೇರಣೆಗೊಂಡ ನಾನು ವಿವಿಧ ಬಗೆಯ ಮರಗಿಡಗಳ ಎಲೆಯನ್ನು ಬಳಸಿ ಸಗಣಿ ಮತ್ತು ಗೋಮೂತ್ರದೊಂದಿಗೆ ಬೆರೆಸಿ ಸೊಳ್ಳೆ ಬತ್ತಿಯನ್ನು ತಯಾರು ಮಾಡಿ ಉರಿಸಿದಾಗ ಒಳ್ಳೆಯ ಫಲಿತಾಂಶ ದೊರೆಯಿತು.
ಒಂದು ವರ್ಷ ಹಿಂದೆಯೇ ಮೇಲುಕೋಟೆಯ ಸಿಂಗಾಪುರದಲ್ಲಿ ನಡೆದ ಬಾನುಲಿ ಕೃಷಿ ಬೆಳಗು ಹಾಗೂ ಸಾವಯವ ಗ್ರಾಮ ಕಾರ್ಯಕ್ರಮದಲ್ಲಿ ಬಾನುಲಿ ಕೋಗಿಲೆ ಎಂಬ ಬಿರುದು ಪಡೆದ ಎನ್.ಕೇಶವಮೂರ್ತಿ ಮತ್ತು ಏಳು ಜಿಲ್ಲೆಯ ರೈತರುಗಳು ಸೇರಿ ಐದು ಸ್ವಾವಲಂಬಿ ಉತ್ಪನ್ನಗಳನ್ನು ಮುಂದಿನ ವರ್ಷದ ಬಾನುಲಿ ಕೃಷಿಕರ ಸಮಾವೇಶದಲ್ಲಿ ಬಿಡುಗಡೆ ಮಾಡಬೇಕೆಂದು ತೀರ್ಮಾನಿಸಿದೆವು . ಸ್ಥಳೀಯ ತಂತ್ರಜ್ಞಾನವನ್ನು ಬಂಡವಾಳವಾಗಿ ಬಳಸಿ ರೈತರ ಸ್ವಾವಲಂಬಿ ಉತ್ಪನ್ನವಾಗಿ ಬಿಡುಗಡೆ ಮಾಡಬಹುದು ಎಂದು ಚರ್ಚೆಯಲ್ಲಿ ಮಂಡಿಸಿದೆ. ಇದಕ್ಕೆ ಧ್ವನಿ ಸೇರಿಸಿದ ಬಾನುಲಿ ಕೃಷಿ ಬಳಗದವರಾದ ಪಿರಿಯಾಪಟ್ಟಣದ ಬೂದಿತಿಟ್ಟು ಗ್ರಾಮದ ನಿವಾಸಿ ಬಿ.ಆರ್.ವೆಂಕಟೇಶ್, ರೀತಿಯ ಬೆರಣಿಯನ್ನು ಕೊಟ್ಟಿಗೆಯಲ್ಲಿ ಸೊಳ್ಳೆ ನಿವಾರಿಸಲು ಬಳಸುತ್ತಿರುವ ವಿಚಾರವನ್ನು ಮಂಡಿಸಿದರು.
ತಂತ್ರಜ್ಞಾನವನ್ನು ಕಾರ್ಯರೂಪಕ್ಕೆ ತರುವುದೆಂದು ನಿರ್ಧರಿಸಿ ಚರ್ಚೆಯಲ್ಲಿ ತೀರ್ಮಾನ ತೆಗೆದುಕೊಂಡು ರೈತರ ಉತ್ಪನ್ನವಾಗಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು .
ದಿನದಿಂದ ನಾನು ಇದರ ಪ್ರಯೋಗವನ್ನು ಪುನರಾವರ್ತನೆ ಮಾಡಿ ಎಲೆಗಳ ಮಿಶ್ರಣವನ್ನು ಬೆರಣಿ ಆಕಾರದಿಂದ ಅಗರಬತ್ತಿ ರೂಪಕ್ಕೆ ತರಲಾಯಿತು. ಸಗಣಿ ಮತ್ತು ಗೋಮೂತ್ರವನ್ನು ಕಚ್ಚಾವಸ್ತುವಾಗಿ ಬಳಸಿರುವುದರಿಂದ ಬಸವ ಪರಿಸರ ಸ್ನೇಹಿ ಗಿಡಮೂಲಿಕೆಗಳ ಸೊಳ್ಳೆ ನಿವಾರಣೆ ಅಗರಬತ್ತಿಯೆಂದು ಹೆಸರಿಡಲಾಯಿತು.
ಇದನ್ನು ಕೃಷಿಕಲ್ಪ (ಕೃಷಿಕರ ಮಂತ್ರ) ತಯಾರಕರು ಹಾಗೂ ಮಾರಾಟಗಾರರು ನಾಮಾಂಕಿತದಿಂದ ದಿನಾಂಕ 17.06.2009ನೇ ಬುಧವಾರ ಬಾನುಲಿ ಕೃಷಿ ಬೆಳಗು ಹಾಗೂ ಬಾನುಲಿ ಕೃಷಿಕರ ರಾಜ್ಯ ಮಟ್ಟದ ಸಮಾವೇಶದಲ್ಲಿ ಲೋಕಾರ್ಪಣೆಯಾಗಿದೆ.
ಬೇಕಾಗುವ ಕಚ್ಚಾ ವಸ್ತುಗಳು: ಸಗಣಿ, ಗೋಮೂತ್ರ, ಗಂಧ, ಬೇವು, ತುಳಸಿ, ಲಕ್ಕಿ, ಮತ್ತು, ಬಿಲ್ವ ಎಲೆಗಳು, ಹರಿಸಿನದ ಪುಡಿ, ಹಸುವಿನ ತುಪ್ಪ, ಇದ್ದಲಿನ ಪುಡಿ ಹಾಗೂ ಬಿದಿರು ಕಡ್ಡಿಗಳು, ಜಿಗಟುಪುಡಿ.
ತಯಾರಿಸುವ ವಿಧಾನ: ಮೇಲೆ ಹೇಳಿರುವ ಎಲ್ಲಾ ರೀತಿಯ ಎಲೆಗಳನ್ನು ಬೇರೆ ಬೇರೆಯಾಗಿ ಶೇಖರಿಸಿ ನೆರಳಿನಲ್ಲಿ ಒಳಗಿಸಿ ಹಿಟ್ಟಿನ ರೂಪದಲ್ಲಿ ಪುಡಿ ಮಾಡಿಕೊಳ್ಳುವುದು. ಇದಕ್ಕೆ ಇದ್ದಲಿನ ಪುಡಿ ಮತ್ತು ಜಿಗಟು ಪಡಿ ಮಿಶ್ರಣವನ್ನು ತಯಾರು ಮಾಡಿಕೊಳ್ಳುವುದು. ನಂತರ ಮಿಶ್ರಣವನ್ನು ಕಾಯಿಸಿ ಆರಿಸಿದ ಹಸುವಿನ ತುಪ್ಪದೊಂದಿಗೆ ಬೆರೆಸಿ ಹಸಿ ಸಗಣಿಯೊಂದಿಗೆ ಕಲಸಿಕೊಳ್ಳುವುದು. ಹಿಟ್ಟಿನ ಹದಕ್ಕೆ ತಕ್ಕಂತೆ ಗೋಮೂತ್ರವನ್ನು ಬಳಸಿಕೊಳ್ಳುವುದು. ಹಿಟ್ಟನ್ನು ನೆನೆಯಲು ಇಡುವುದು. ಹದವಾಗಿ ನೆನೆದ ನಂತರ ಅಗರ ಬತ್ತಿ ಮಾಡುವ ರೀತಿಯಲ್ಲಿ ಬಿದರಿನ ಕಡ್ಡಿಗೆ ತೀಡುವುದು. ಇದಕ್ಕೆ ಅರಿಸಿನಪುಡಿಯನ್ನು ಬಣ್ಣವಾಗಿ ಬಳಸುವುದು. ರೀತಿ ತಯಾರಾದ ಬತ್ತಿಗಳನ್ನು ನೆರಳಿನಲ್ಲಿ ಒಣಗಿಸಿಕೊಳ್ಳುವುದು.
ಉಪಯೋಗಗಳು: ಬೇವು, ಬಿಲ್ವ, ಲಕ್ಕಿ, ಗಂಧ, ತುಳಸಿ ಔಷಧ ಹಾಗೂ ಸುವಾಸನೆ ಗುಣಗಳನ್ನು ಹೊಂದಿರುತ್ತವೆ.
ಅರಿಸಿನ ಬಣ್ಣವಾಗಿ ಉಪಯೋಗವಾಗುತ್ತದೆ ಹಾಗೂ ಔಷಧಿ ಗುಣ ಹೊಂದಿರುತ್ತದೆ.
ತುಪ್ಪ ಮತ್ತು ಇದ್ದಲಪುಡಿ ಬತ್ತಿ ಉರಿಯಲು ಸಹಾಯ ಮಾಡುತ್ತವೆ.
ಸಗಣಿ ಮತ್ತು ಗೋಮೂತ್ರ ಔಷದಿ ಗುಣಗಳನ್ನು ಹೊಂದಿದ್ದು ಪ್ರಯೋಜನಕಾರಿಯಾದ ಅನಿಲವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತವೆ.
-ಕೆ. ವೆಂಕಟೇಶ್, ಎಂ.ಎಸ್ಸಿ (ಬಾಟನಿ),
ಪ್ರಗತಿಪರ ರೈತ, ಜಿ.ಬಿ. ಸರಗೂರು,
ಹಂಪಾಪುರ ಹೋಬಳಿ, ಹೆಚ್ ಡಿ ಕೋಟೆ ತಾಲ್ಲೂಕು,
ಮೈಸೂರು ಜಿಲ್ಲೆ.ಫೋನ್ 9945290334



ಕೊಬ್ಬು ಕರಗಿಸುವ ತಾಜಾ ತೆಂಗಿನ ಎಣ್ಣೆ
ಕಲ್ಪವೃಕ್ಷ

ಜಿ. ಅನುಷ ವಿನಯ್
ಹೊನ್ನಗಿರಿ ಫಾರಂ, ಚಾಮನಹಳ್ಳಿ
ಮದ್ದೂರು ತಾಲ್ಲೂಕು
ಮಂಡ್ಯ ಜಿಲ್ಲೆ ಮೊಬೈಲ್ - 9449785914

ನನ್ನ ಹೆಸರು ಅನುಷ ವಿನಯ್. ನನ್ನ ಪತಿಯವರು ಮಾಡುತ್ತಿರುವ ತೋಟಗಾರಿಕೆ ಮತ್ತು ವ್ಯವಸಾಯದಲ್ಲಿ ನಾನು ಸಹ ಭಾಗಿಯಾಗಿ ಅವರ ಜೊತೆ ಜೊತೆಯಲ್ಲಿ ಇದ್ದು ಸಹಕರಿಸುತ್ತಿದ್ದೇನೆ. ನನಗೂ ತೋಟಗಾರಿಕೆಯಲ್ಲಿ ತುಂಬಾ ಆಸಕ್ತಿ ಇದೆ. ನಾನು ನನ್ನ ಪತಿಯವರು ರೇಡಿಯೋ ಕೇಳುಗರು. ಇದರಲ್ಲಿ ಮೈಸೂರು ಆಕಾಶವಾಣಿ ಕೃಷಿರಂಗ ಕಾರ್ಯಕ್ರಮ ದಿನ ಬೆಳಿಗ್ಗೆ ಸಂಜೆ ಬರುತ್ತದೆ. ಇದು ಅತ್ಯುತ್ತಮವಾದ ಕಾರ್ಯಕ್ರಮ. ರೈತರಿಗೋಸ್ಕರ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮವನ್ನು ವೆಬ್ ಸೆಟಿ ಯಲ್ಲಿ ಹಮ್ಮಿಕೊಂಡಿದ್ದಾರೆ ಎಂದು ತಿಳಿದು, ನಾನು ನನ್ನ ಪತಿ 2 ವರ್ಷದ ಹಿಂದೆ ಅಲ್ಲಿಗೆ ಭೇಟಿ ಕೊಟ್ಟಿದ್ದೆವು. ಅಂದಿನಿಂದ ನಾವು ನಿರಂತರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ.
ಮೈಸೂರು ಆಕಾಶವಾಣಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಲ್ಲಿ ವಿಜಯಾ ಬ್ಯಾಂಕ್, ವಿಕಸನ, ವಿ.ಸಿ. ಫಾರಂ ಇನ್ನಿತರ ಸಂಸ್ಥೆ ಭಾಗಿಯಾಗಿರುತ್ತವೆ. ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಲ್ಲಿ ಕೃಷಿ ಬಗ್ಗೆ, ಮಾರ್ಕೆಟಿಂಗ್ ಬಗ್ಗೆ ಸ್ವಾವಲಂಬನೆಯಾಗಲು ಮಾಡಿಕೊಳ್ಳುವ ಪದಾರ್ಥಗಳ ಪ್ರಾತ್ಯಕ್ಷತೆ ಮತ್ತು ಮಾಹಿತಿಯನ್ನು ಸಂಸ್ಥೆಯವರು ಒದಗಿಸುತ್ತಿದ್ದಾರೆ. ನಾವು, ಮೈಸೂರು ಆಕಾಶವಾಣಿಯ ಬಾನುಲಿ ಕೃಷಿ ಬೆಳಗು ತಂಡದವರು, ವಿಜಯಾ ಬ್ಯಾಂಕ್, ವಿಕಸನ ಸಂಸ್ಥೆಯವರು ಎಲ್ಲರೂ ಸಹ ಪ್ರವಾಸಕ್ಕೆ ಹೋಗಿದ್ದೆವು . ಪ್ರವಾಸದಲ್ಲಿ ತುಮಕೂರಿಗೆ ಹೋಗಿದ್ದೆವು . ಅಲ್ಲಿ ಶಿರಸಿ ಎಂಬ ಊರಿನ ಹತ್ತಿರ ಇರುವ ಅನಿತ ನೀಲಕಂಠ ಮೂರ್ತಿ ವಾದೇಕರ್ ಫಾರಂಗೆ ಹೋಗಿದ್ದೆವು. ಅಲ್ಲಿ ನಮಗೆ ಸ್ವಾವಲಂಬನೆಯಾಗಿ ಬದುಕಲು ನಮ್ಮಲ್ಲಿ ಸಿಗುವ ಪದಾರ್ಥಗಳನ್ನು ಉಪಯೋಗಿಸಿ ದಿನನಿತ್ಯ ಬಳಸುವ ಪದಾರ್ಥಗಳನ್ನು ಅವರು ಮಾಡಿ ತೋರಿಸಿಕೊಟ್ಟರು.
ಅವರು ನಮಗೆ ಅದರ ಬಗ್ಗೆ ಮಾಹಿತಿಯನ್ನು ಕೊಟ್ಟರು ಮತ್ತು ಅವರು ಇದನ್ನು ಮಾರ್ಕೆಟಿಂಗ್ ಸಹ ಮಾಡುತ್ತಿದ್ದಾರೆ. ನಂತರ ನಮ್ಮ ವೆಬ್ಸಿಟಿಯಲ್ಲಿ ವಿಜಯಾ ಬ್ಯಾಂಕ್ನವರು ಸುಸ್ಥಿರ ಸ್ವಾವಲಂಬನೆ ಬದುಕಿಗಾಗಿ ಅಗತ್ಯ ವಸ್ತುಗಳನ್ನು ನಾವೇ ತಯಾರಿಸಿಕೊಳ್ಳುವ ಬಗ್ಗೆ 5 ದಿನದ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಾವು ಅದರಲ್ಲಿ ಭಾಗವಹಿಸಿದ್ದೇವೆ. ಅದರಲ್ಲಿ ನೀಲಕಂಠಮೂತರ್ಿಯವರ ಕಾರ್ಯಕ್ರಮ ಒಂದು ದಿನ ಇತ್ತು. ಅವರು ಸೋಪು, ಕೊಬ್ಬರಿ ಎಣ್ಣೆ, ನೋವಿನ ಎಣ್ಣೆ, ಹುತ್ತದ ಮಣ್ಣಿನ ಸೋಪನ್ನು ತಯಾರಿಸುವುದನ್ನು ಪ್ರಾತ್ಯಕ್ಷತೆಯಲ್ಲಿ ತೋರಿಸಿಕೊಟ್ಟರು. ಇದರಲ್ಲಿ ನಾನು ತಾಜಾ ತೆಂಗಿನ ಎಣ್ಣೆಯ ಬಗ್ಗೆ ತುಂಬಾ ಆಕರ್ಷಿತ ಳಾದೆ. ಏಕೆಂದರೆ ನಮ್ಮಲ್ಲಿ ತೆಂಗಿನ ತೋಟ ಇರುವುದರಿಂದ ಎಣ್ಣೆ ಮಾಡುವುದು ಸುಲಭ ಎನಿಸಿತು. ಆದರೆ ನೀಲಕಂಠ ಮೂರ್ತಿ ಅವರು ಅವರ ತೋಟದಲ್ಲಿ ಅವರೇ ಮಾಡಿಸಿರುವ ಯಂತ್ರದಲ್ಲಿ ಎಣ್ಣೆ ತೆಗೆದು ತೋರಿಸಿದ್ದರು. ನಮ್ಮಲ್ಲಿ ಯಂತ್ರ ಇಲ್ಲದಿರುವ ಕಾರಣ ನನ್ನ ಪತಿಯವರು ನನಗೆ ಶಾವಿಗೆ ಹೊರಳಲ್ಲಿ ಮಾಡುವ ಯೋಜನೆ ಕೊಟ್ಟರು. ನಾನು ಹಾಗೇ ಮಾಡಿ ಆಯಿಲ್ ತೆಗೆದು ಅಡುಗೆಗೆ ಬಳಸಿದೆ. ಚೆನ್ನಾಗಿದೆ ಅನ್ನಿಸಿದೆ. ಇದನ್ನು ತಿಂಡಿಗೆ ಬಳಸಬಹುದು. ಹಾಗೇಯೇ ಇದನ್ನು ಬಾಡಿ ಆಯಿಲ್ ಆಗಿಯೂ ಬಳಸಬಹುದು. ಇದರಿಂದ ಚರ್ಮ ಹೊಳಪಾಗುತ್ತದೆ ಹಾಗೂ ಕೂದಲಿಗೆ ಸಹ ಬಳಸಬಹುದು.
ಇದು ಗಟ್ಟಿಯಾದಾಗ ಚಪಾತಿ, ರೊಟ್ಟಿಗೆ ಬೆಣ್ಣೆಯ ತರಹ ಉಪಯೋಗಿಸಬಹುದು. ಇದು ರುಚಿಕರವಾದ ಎಣ್ಣೆ. ಯಾವುದೇ ಕೊಬ್ಬಿನ ಅಂಶ ಇಲ್ಲ. ಇದನ್ನು ಮಕ್ಕಳಿಂದ ವಯೋವೃದ್ದರೂ ಉಪಯೋಗಿಸಬಹುದು. ಪೌಷ್ಠಿಕವಾದ ಆಯಿಲ್ ಇದು. ಇದು ಅತ್ಯುತ್ತಮವಾದ ಗುಣಮಟ್ಟದ ಎಣ್ಣೆ. ತಾಯಿ ಎದೆ ಹಾಲಿನಲ್ಲಿ ಲೋರಿಕ್ ಆಸಿಡ್ ಎಂಬ ಅತ್ಯುತ್ತಮಾದ ಪೌಷ್ಠಿಕತೆ ಇರುವ ಗುಣಮಟ್ಟದ ಅಂಶ ಅಡಗಿದೆ. ಇದು ತುಂಬಾ ಅತ್ಯುತ್ತಮವಾದುದು. ಇದನ್ನು ತಾಯಿ ಎದೆ ಹಾಲಿನಲ್ಲಿ ಬಿಟ್ಟರೆ ಲೋರಿಕ್ ಆಸಿಡ್ ಎಂಬ ಅಂಶವು ತಾಜಾ ತೆಂಗಿನ ಎಣ್ಣೆಯಲ್ಲಿ ಮಾತ್ರ ಇದೆ.
ಇದನ್ನು ಮಾಡುವ ವಿಧಾನ: ಬಲಿತಿರುವ ಕಾಯನ್ನು ತುರಿದು ಕೆಂಪಗೆ ಹುರಿದು ಶಾವಿಗೆ ಹೊರಳಿಗೆ ಹಾಕಿ ತಿರುಗಿಸಿದರೆ ಎಣ್ಣೆ ಬರುತ್ತದೆ. ಎಣ್ಣೆ ಸೋಸಿ ಬಾಟಲಿನಲ್ಲಿ ಶೇಖರಿಸಿ ಇಟ್ಟುಕೊಳ್ಳಿ. ಇದರ ಮಿಕ್ಕಿದ ತೆಂಗಿನ ಪುಡಿಯನ್ನು ಬಿಸ್ಕೆಟ್, ಮಿಠಾಯಿ, ಅಡುಗೆಗೂ ಸಹ ಉಪಯೋಗಿಸಬಹುದು. ಮತ್ತೆ ಕೃಷಿಕರು ಹಸುವಿಗೆ ಹಿಂಡಿಯ ತರಹ ತಿನ್ನಲಿಕ್ಕೆ ಕೊಡಬಹುದು.
ನಾವು ಕೇಳಿ ತಿಳಿದುದೇನೆಂದರೆ ಬಿಪಿ, ಸಕ್ಕರೆ ಕಾಯಿಲೆ ಇರುವವರು ದಿನನಿತ್ಯ ತಾಜಾ ತೆಂಗಿನ ಎಣ್ಣೆಯನ್ನು 20 ಎಂ.ಎಲ್.ನಂತೆ ಸೇವಿಸಿದರೆ ಕಾಲಕ್ರಮೇಣ ಬಿಪಿ, ಸಕ್ಕರೆ ಕಾಯಿಲೆ ತಹಬದಿಗೆ ಬರುತ್ತದೆ. ಇದರಲ್ಲಿ ಯಾವುದೇ ಕೊಬ್ಬಿನ ಅಂಶ ಇಲ್ಲ. ಪಾಶ್ಚಾತ್ಯರು ಹೇಳುವಂತೆ ಇದರಲ್ಲಿ ಕೊಬ್ಬಿನ ಅಂಶ ಇದ್ದಿದ್ದರೆ ನೂರಾರು ವರ್ಷದಿಂದ ಮಂಗಳೂರು ಮತ್ತು ಕೇರಳದವರು ಕೊಬ್ಬಿನ ಅಂಶದ ಕಾಯಿಲೆಯಿಂದ ನರಳಬೇಕಾಗಿತ್ತು. ತಾಜಾ ಕೊಬ್ಬರಿ ಎಣ್ಣೆಯು ಕೊಬ್ಬಿನ ಅಂಶ ಕಡಿಮೆ ಮಾಡುತ್ತದೆ. ಇದರ ಬಳಕೆಯಿಂದ ಮಾನವನ ಶರೀರದಲ್ಲಿ ಯಾವುದೇ ರೀತಿಯ ಕೊಬ್ಬಿನ ಅಂಶ ಹೆಚ್ಚುವುದಿಲ್ಲ. ಬದಲಿಗೆ ಅವರ ಆರೋಗ್ಯ ಉತ್ತಮವಾಗುತ್ತಿದೆ. ಯಾವುದೇ ತಪ್ಪು ಕಲ್ಪನೆ ಇಲ್ಲದೆ ಇದನ್ನು ನಿರಂತರವಾಗಿ ಉಪಯೋಗಿಸಿ ನಮ್ಮಲ್ಲಿ ಸಿಗುವ ಅತ್ಯುತ್ತಮ ತೆಂಗಿನ ಎಣ್ಣೆಯನ್ನು ಬಳಸಿ ನಿಮ್ಮ ಆರೋಗ್ಯ ಉತ್ತಮಪಡಿಸಿಕೊಳ್ಳಿ.
ಮೈಸೂರು ಆಕಾಶವಾಣಿಯವರಿಗೆ, ವಿಜಯಾ ಬ್ಯಾಂಕ್ ಹಾಗೂ ವಿಕಸನದವರಿಗೆ ನಮ್ಮ ಧನ್ಯವಾದಗಳು.
ಇಂತಿ
ಜಿ. ಅನುಷ ವಿನಯ್

Saturday, August 1, 2009


ತಾಜಾ ತೆಂಗಿನೆಣ್ಣೆಯ ಮೈಸೋಪು ಸುಗ್ಗಿ

ವಿನಯ್ ಕುಮಾರ್
ಬಿನ್ ರಾಮೇಗೌಡ
ಹೊನ್ನಗಿರಿ ಫಾರಂ, ಚಾಮನಹಳ್ಳಿ
ಮದ್ದೂರು ತಾಲ್ಲೂಕು
ಮಂಡ್ಯ ಜಿಲ್ಲೆ
ಮೊಬೈಲ್ - 9449785914

ನನ್ನ ಹೆಸರು ವಿನಯ್ ಕುಮಾರ್. ನಾನು ಶಶಿರೇಖಾ ರಾಮೇಗೌಡರ ಪುತ್ರ. ನಾನು ತೆಂಗಿನ ತೋಟ, ಮಾವಿನ ತೋಟ ಮಾಡಿದ್ದೇನೆ. ನಾನು, ನನ್ನ ಪತ್ನಿ ರೇಡಿಯೋ ಕೇಳುಗರು. ಅದರಲ್ಲಿ ಮೈಸೂರು ಆಕಾಶವಾಣಿಯ ಕೃಷಿ ರಂಗ ಕಾರ್ಯಕ್ರಮವನ್ನು ನಿರಂತರವಾಗಿ ಕೇಳುತ್ತಿದ್ದೇವೆ. ಮೈಸೂರು ಆಕಾಶವಾಣಿಯವರು ಬಾನುಲಿ ಕೃಷಿ ಬೆಳಗು ಕಾರ್ಯಕ್ರಮವನ್ನು ವೆಬ್ ಸೆಟಿ ವಿಜಯ್ ಬ್ಯಾಂಕಿನಲ್ಲಿ ನಡೆಸುತ್ತಿರುವುದು ತಿಳಿದು ನಾನು ಮತ್ತು ನನ್ನ ಪತ್ನಿ ಭಾಗವಹಿಸಿದೆವು. 2 ವರ್ಷದಿಂದ ನಿರಂತರವಾಗಿ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇವೆ. ಈ ಮೈಸೂರು ಆಕಾಶವಾಣಿಗೆ ವಿಕಸನ,ವೆಬ್ ಸೆಟಿ ವಿ.ಸಿ. ಫಾರಂ ಸಂಸ್ಥೆಯವರು ಸಹಕಾರ ನೀಡುತ್ತಿದ್ದಾರೆ. ಈ ಎಲ್ಲಾ ಸಂಸ್ಥೆ ಸೇರಿ ರೈತರಿಗೋಸ್ಕರ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮವನ್ನು ವರ್ಷದ ಪ್ರತಿ ತಿಂಗಳೂ ಕೊನೆಯ ಭಾನುವಾರ ಆಸಕ್ತ ರೈತರ ಜಮೀನಿನಲ್ಲಿ ಹಮ್ಮಿಕೊಳ್ಳುತ್ತಿದ್ದಾರೆ . ಇಲ್ಲಿ ನಮಗೆ ಕೃಷಿ, ತೋಟಗಾರಿಕೆ, ಮಾರ್ಕೆಟಿಂಗ್, ಕೃಷಿಯ ಉಪಕರಣದ ಬಗ್ಗೆ ಎಲ್ಲಾ ಮಾಧ್ಯಮದ ಬಗ್ಗೆಯೂ ತಿಳಿದವರಿಂದ ಮಾಹಿತಿಯನ್ನು ಒದಗಿಸುತ್ತಿದ್ದಾರೆ ಹಾಗೂ ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಸುಸ್ಥಿರ, ಸ್ವಾವಲಂಬನೆ ಬದುಕಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ನಮ್ಮ ಬಾನುಲಿ ಕೃಷಿ ಬೆಳಗು ತಂಡವನ್ನು ಮೈಸೂರು ಆಕಾಶವಾಣಿಯವರು ಪ್ರವಾಸ ಕರೆದುಕೊಂಡು ಹೋಗಿದ್ದರು. ಪ್ರವಾಸದಲ್ಲಿ ತುಮಕೂರು ಜಿಲ್ಲೆಯ ಶಿರಸಿ ರಸ್ತೆಯಲ್ಲಿರುವ ಅನಿತ ನೀಲಕಂಠ ಮೂರ್ತಿ ವಾದೇಕರ್ ಫಾರಂಗೆ ಭೇಟಿ ಕೊಟ್ಟೆವು. ಅಲ್ಲಿ ನಮಗೆ ಸ್ವಾವಲಂಬನೆಯ ಸುಸ್ಥಿರ ಬದುಕಿಗಾಗಿ ನಮ್ಮಲ್ಲಿಯೇ ಸಿಗುವ ಪದಾರ್ಥಗಳನ್ನು ಉಪಯೋಗಿಸಿ ದಿನನಿತ್ಯ ಬಳಸುವ ಮೈ ಸೋಪು ಪುಡಿ, ಹರ್ಬಲ್ ಸೋಪು ಹೀಗೆ ಹಲವಾರು ಪದಾರ್ಥಗಳ ಬಗ್ಗೆ ಅನಿತ ನೀಲಕಂಠಮೂರ್ತಿ ಅವರು ತಿಳಿಸಿಕೊಟ್ಟರು. ಇಂತಹ ವಸ್ತುಗಳನ್ನು ಅವರೇ ಮಾಡಿಕೊಂಡು ಬಳಸುತ್ತಿದ್ದಾರೆ ಮತ್ತು ಮಾರ್ಕೆಟಿಂಗ್ ಕೂಡಾ ಮಾಡುತ್ತಿದ್ದಾರೆ. ನಮಗೆ ಅಲ್ಲಿ ಹಲವಾರು ಮಾಹಿತಿಗಳು ದೊರಕಿದವು.
ನಂತರ ವೆಬ್ ಸೆಟಿ ಸುಸ್ಥಿರ ಬದುಕಿಗಾಗಿ ಸ್ವಾವಲಂಬನೆಯಿಂದ ನಾವು ದಿನನಿತ್ಯ ಬಳಸುವಂತಹ ಹಲವು ಪದಾರ್ಥಗಳನ್ನು ಮಾಡುವ ಬಗ್ಗೆ 5 ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅದರಲ್ಲಿ ನೀಲಕಂಠಮೂರ್ತಿ ಒಂದು ದಿನ ನಡೆಸಿದರು. ನಾವು ಅಲ್ಲಿ ಭಾಗವಹಿಸಿದೆವು. ಅವರು ನಮಗೆ ಮೈಸೋಪು, ನೋವಿನ ಎಣ್ಣೆ, ಹರ್ಬಲ್ ಸೋಪು, ತಾಜಾ ತೆಂಗಿನ ಎಣ್ಣೆ ಇವುಗಳನ್ನು ಮಾಡಿ ತೋರಿಸಿದರು ಮತ್ತೆ ಮಾಹಿತಿಗಳನ್ನು ಕೊಟ್ಟರು. ಅದರಲ್ಲಿ ನಾನು ಮೈ ಸೋಪು ಮತ್ತು ತಾಜಾ ತೆಂಗಿನ ಎಣ್ಣೆ ಬಗ್ಗೆ ತುಂಬಾ ಆಸಕ್ತಿ ಹೊಂದಿದೆ. ನಾನು ಏಕೆ ಇದನ್ನು ಮಾಡಬಾರದು ಎಂದು? ಏಕೆಂದರೆ ನಮಗೆ ತೆಂಗಿನ ತೋಟ ಇರುವುದರಿಂದ ಸೋಪಿಗೆ ಬೇಕಾದ ಕೊಬ್ಬರಿ ಎಣ್ಣೆ ನಮ್ಮ ತೋಟದ ಕೊಬ್ಬರಿಯಿಂದ ತಯಾರು ಮಾಡಿಕೊಳ್ಳಬಹುದು. ನಾನು ತಡಮಾಡದೇ ಅವರು ಹೇಳಿಕೊಟ್ಟ ಮಾದರಿಯಲ್ಲೇ ಸೋಪನ್ನು ತಯಾರಿಸಿದೆ . ಇದಕ್ಕೆ ಮುಖ್ಯವಾಗಿ ತೆಂಗಿನ ಎಣ್ಣೆಯನ್ನು ಮಾತ್ರ ಬಳಸಿದ್ದೇನೆ. ಈ ಸೋಪನ್ನು ತಯಾರಿಸಿ ಉಪಯೋಗಿಸಿದೆವು. ಯಾವುದೇ ಅಡ್ಡ ಪರಿಣಾಮ ಆಗಲಿಲ್ಲ. ಬೇರೆ ಸೋಪಿಗಿಂತಲೂ ನೊರೆ ಬರುತ್ತದೆ. ಇದು ಆಯಿಲಿ ಆಗಿರುವುದರಿಂದ ಚರ್ಮ ಹೊಳೆಯುತ್ತದೆ. ಇದು ಬೇರೆ ಸೋಪಿಗಿಂತಲೂ ತುಂಬಾ ಚೆನ್ನಾಗಿದೆ ಮತ್ತು ಮನೆಯವರು ಉಪಯೋಗಿಸುತ್ತಾರೆ ಹಾಗೂ ನಮ್ಮ ಸ್ನೇಹಿತರಿಗೂ ಸಹ ಕೊಟ್ಟಿದ್ದೆವು. ಅವರು ಸಹ ತುಂಬಾ ಚೆನ್ನಾಗಿದೆ, ನಮಗೆ ಯಾವಾಗಲೂ ಇದನ್ನು ಕೊಡಿ ಎಂದು ಹೇಳುತ್ತಿದ್ದಾರೆ. ಹಾಗೆಯೇ ವಿಜಯ ಬ್ಯಾಂಕ್ , ಮೈಸೂರು ಆಕಾಶವಾಣಿ, ವಿಕಸನ, ವಿ.ಸಿ. ಫಾರಂ ಸಂಸ್ಥೆಯ ಅಧಿಕಾರಿಗಳು ಸಹ ಉಪಯೋಗಿಸಿ ತುಂಬಾ ಚೆನ್ನಾಗಿದೆ ಎಂದು ಹೇಳಿರುತ್ತಾರೆ. ನಮ್ಮ ಬಾನುಲಿ ಕೃಷಿ ಬೆಳಗು ತಂಡದವರು ಉಪಯೋಗಿಸಿದ್ದಾರೆ. ಎಲ್ಲರೂ ಇದನ್ನು ತುಂಬಾ ಇಷ್ಟಪಟ್ಟು ನಮಗೆ ಪ್ರತಿ ತಿಂಗಳು ಸೋಪನ್ನು ತಂದುಕೊಡಿ ಎಂದು ಹೇಳುತ್ತಿದ್ದಾರೆ. ಇದನ್ನು ಮಕ್ಕಳಿಗೂ ಸಹ ಉಪಯೋಗಿಸಿದೆವು. ಯಾವುದೇ ತರಹ ಹಾನಿಯಾಗಲಿಲ್ಲ. ಪ್ರಖ್ಯಾತ ಕಂಪನಿಯ ಬೇಬಿ ಸೋಪು ತರಹವೇ ಇದೆ. ನಾವು 8 ತಿಂಗಳಿನಿಂದ ಬಳಸುತ್ತಿದ್ದೇವೆ, ಈಗಂತೂ ನಾವು ಬೇರೆ ಸೋಪನ್ನು ತರುವುದಿಲ್ಲ. ನಮಗೆ ಇದನ್ನು ಬಳಸಿದೆ ಮೇಲೆ ಯಾವುದೇ ಸೋಪು ಬೇಡ ಅನಿಸುತ್ತಿದೆ. ಈ ಸೋಪು ನಮಗೆ ತುಂಬಾ ಖುಷಿ ಕೊಟ್ಟಿದೆ. ಆಹ್ಲಾದಕರವಾಗಿದೆ. ಸ್ಯಾಂಡಲ್ ಜಾಸ್ಮೀನ್ ಸುಗಂಧ ದ್ರವ್ಯವನ್ನು ಉಪಯೋಗಿಸಿದ್ದೇವೆ. ಇದು ಪ್ಯೂರ್ ಕೋಕ್ನೆಟ್ ಆಯಿಲ್ ಸೋಪು. ಬೇರೆ ಯಾವ ರಾಸಾಯನಿಕವನ್ನು ಉಪಯೋಗಿಸಿಲ್ಲ. ಇದಕ್ಕೆ ಅವರು ಹೇಳಿಕೊಟ್ಟಿರುವ ಪ್ರಕಾರ ತುಳಸಿ ರಸ, ಬೇವಿನ ರಸ, ಅಲೋವೆರ, ಅರಿಶಿನ, ಸುಗಂಧ ದ್ರವ್ಯ ಹಾಕಿ ಮಾಡಬಹುದು. ನಾನು ಇದೇ ಮಾದರಿ ಬಳಸಿ ಬೇವಿನ ಎಣ್ಣೆಯನ್ನು ಬಳಸಿ ಹಸಿವಿಗೆ ಸೋಪು ತಯಾರಿಸಿದ್ದೇನೆ. ಇದನ್ನು ನಮ್ಮ ಹಸುವಿಗೆ ಬಳಸುತ್ತಿದ್ದೇವೆ. ಈ ಸೋಪಿನಲ್ಲಿ ಗಾಯ ವಾಸಿ ಮಾಡುವ ಅಂಶವಿದೆ. ಇದು ರೋಗ ನಿರೋಧಕ ಸೋಪು. ಹಾಗೆಯೇ ಇದರ ವಾಸನೆಗೆ ಸೊಳ್ಳೆ ಹಸುವಿನ ಹತ್ತಿರ ಅಷ್ಟು ಬರುವುದಿಲ್ಲ - ನಿರಂತರವಾಗಿ ಬಳಸಿದರೆ.
ಈಗ ನಮ್ಮ ಸ್ವಾವಲಂಬನೆ ಬದುಕಿಗಾಗಿ ಹಾಗೂ ಸುಸ್ಥಿರ ಬದುಕಿಗಾಗಿ ಮತ್ತು ನಮ್ಮ ಆರೋಗ್ಯಕ್ಕಾಗಿ ಏನೆಲ್ಲಾ ಬೇಕೋ ಅದನ್ನು ಮೈಸೂರು ಆಕಾಶವಾಣಿಯವರು, ವೆಬ್ಸಿಟಿಯವರು, ವಿಕಸನ ಸಂಸ್ಥೆಯವರು ನಮಗೆ ತೋರಿಸಿ ಮಾಹಿತಿಗಳನ್ನು ಈ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಲ್ಲಿ ಸವಿಸ್ತಾರವಾಗಿ ನಮಗೆ ತಿಳಿಸುತ್ತಿದ್ದಾರೆ. ನಾವೆಲ್ಲಾ ಆಭಾರಿಯಾಗಿರೋಣ. ಈ ಸಂಸ್ಥೆಗೆ ಹಾಗೂ ಇದು ನಮ್ಮ ಕೃಷಿಕರ ಬದುಕಿನಲ್ಲಿ ನಿರಂತರವಾಗಿರಲಿ. ನೀವೆಲ್ಲಾ ಬನ್ನಿ ನಮ್ಮಲ್ಲಿಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಿ ಮತ್ತು ನಾವು ತಯಾರಿಸಿರುವ ಈ ಸೋಪನ್ನು ಕೊಂಡುಕೊಂಡು ಬಳಸಿದ ನಂತರ ನಿಮ್ಮ ಅಭಿಪ್ರಾಯ ಹೇಳಿ. ನಿಮಗೆ ಇದೇ ಸೋಪು ಬೇಕು ಅನ್ನಿಸುವ ಗುಣಮಟ್ಟ ಇದರಲ್ಲಿದೆ. ನೀವು ಕೂಡಾ ಈ ಸೋಪಿಗೆ ಆಕರ್ಷಿತ ರಾಗುತ್ತಿರಾ ಆಕಾಶವಾಣಿಯವರಿಗೆ, ವಿಜಯಾ ಬ್ಯಾಂಕ್ ಹಾಗೂ ವಿಕಸನದವರಿಗೆ ನಮ್ಮ ಧನ್ಯವಾದಗಳು.
ಇಂತಿ
ವಿನಯ್ ಕುಮಾರ್
ನೇಗಿಲಯೋಗಿ ಬಿಡುಗಡೆ
ಬಾನುಲಿ ಕೃಷಿಕರ ರಾಜ್ಯ ಮಟ್ಟದ ಸಮಾವೇಶ ಮಂಡ್ಯದಲ್ಲಿ ನಡೆಯಿತು . ಬಾನುಲಿ ಕೃಷಿಕರು ತಯಾರಿಸಿದ ವಿವಿಧ ಉತ್ಪನ್ನಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಬಾನುಲಿ ಕೃಷಿಕರು ಆಂತರಿಕ ಪ್ರಸಾರಕ್ಕಾಗಿ ರೂಪಿಸಿಕೊಂಡಿರುವ ಪತ್ರಿಕೆ ನೇಗಿಲ ಯೋಗಿ
ಪತ್ರಿಕೆಯನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
ವಾರ್ತಾಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಪತ್ರಿಕೆಯನ್ನು ಬಿಡುಗಡೆ ಮಾಡಿ ಪತ್ರಿಕೆ ರೂಪಿಸುವ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು . ವಾರ್ತಾ ಇಲಾಖೆಯಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದರು.ನೇಗಿಲ ಯೋಗಿ ಪತ್ರಿಕೆ ಯಲ್ಲಿ ರೈತರೇ ಲೇಖನಗಳನ್ನು ಬರೆಯುತ್ತಿದ್ದಾರೆ .ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.