Tuesday, August 11, 2009



ರಾಮಯ್ಯನವರ ಕೃಷಿ ಸಾಹಸ

ಕೋಟಿ ವಿದ್ಯೆಗಳಲ್ಲಿ ಮೇಟಿ
ವಿದ್ಯೆಯೇ ಮೇಲು, ಮೇಟಿಯಿಂ ರಾಟೆ
ನಡೆದುದಲ್ಲದೆ ದೇಶದಾಟವೇ ಕೆಡಗು
-ಸರ್ವಜ್ಞ



ರಾಮಯ್ಯ
ನವರ ಜಮೀನಿನಲ್ಲಿನಡೆದಕಾರ್ಯಕ್ರಮ. ಶ್ರೀ ರಾಮಯ್ಯ ಸ್ವಾಗತಿಸುತ್ತಿದ್ದಾರೆ.

ರೈತರ ಬದುಕು ಕಷ್ಟಕರವೆಂಬ ಭಾವನೆ ರೈತಾಪಿಗಳಲ್ಲಿ ದಟ್ಟವಾಗಿದೆ. ಆದರೆ ಅಲ್ಲೊಬ್ಬ ಇಲ್ಲೊಬ್ಬ ಕೃಷಿಕರು ತಮ್ಮ ಕೃಷಿ ಬಾಳು ಹಸನುಗೊಳಿಸುವ ಸಾಹಸ ಮಾಡುತ್ತಿದ್ದರೆ ಹೆಚ್ಚಿನ ಖರ್ಚಿಲ್ಲದೆ ಕೃಷಿ ಬದುಕು ಹಸನುಮಾಡಿಕೊಳ್ಳುವಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆ ಶ್ಯಾನುಬೋಗನ ಹಳ್ಳಿಯ ರಾಮಯ್ಯನವರ ಜಮೀನು ಯಶಸ್ವಿ ಹಾದಿಯಲ್ಲಿದೆ ಎಂದರೆ ತಪ್ಪಾಗಲಾರದು.
ಶ್ರೀ ರಾಮಯ್ಯನವರ ಪತ್ನಿ ಶ್ರೀಮತಿ ಸುಶೀಲ, ಒಂದು ಗಂಡು ಎರಡು ಹೆಣ್ಣು ಮಕ್ಕಳ ಕುಟುಂಬ. ಕೃಷಿ ಜಿಲ್ಲೆಯಲ್ಲಿ ಬದುಕುತ್ತಿರುವುದರಿಂದ ತಾವೂ ಕೃಷಿಗೆ ತೊಡಗಬೇಕೆಂಬುದು ಕುಟುಂಬದ ಬಯಕೆ. ಬಯಕೆ ಈಡೇರಿಕೆಗೆ ಸಂಬಂಧಿಕರಿಂದಲೇ ಮೂರೆಕರೆ ಜಮೀನು ಕೊಂಡರು.
ಮೊದಲ ಯತ್ನದಲ್ಲಿ ಜೇನು ಸಾಕುವ ಕನಸು ಕಂಡರು. ಪ್ರಯತ್ನ ಅನುಭವದ ಕೊರತೆಯಿಂದ ಕೈಗೂಡಲಿಲ್ಲ. ಆದರೆ ಅನುಭವ ಗಳಿಸಲು ಬಾನುಲಿ ಕೃಷಿ ಬೆಳಕು ಕಾರ್ಯಕ್ರಮಕ್ಕೆ ಎಳೆದು ತಂದಿತು. ಇಲ್ಲಿ ಬೇರೆಬೇರೆ ರೈತರಿಂದ ಅನುಭವದ ಹಂಚಿಕೆ ನಡೆಯಿತು. ಇದನ್ನು ಆಧಾರ ಮಾಡಿಕೊಂಡ ಶ್ರೀ ರಾಮಯ್ಯನವರ ಕುಟುಂಬ ಕೃಷಿಗೆ ಪಾದಾರ್ಪಣೆ ಮಾಡಿತು. ತಿಪಟೂರು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಯಶಸ್ಸಿನ ಹಾದಿಯಲ್ಲಿದ್ದ ರೈತರೊಡನೆ ಸಂಪರ್ಕಪಡೆದರು. ಇದೀಗ ಯಶಸ್ಸಿನತ್ತ ಇವರೇ ಹೆಜ್ಜೆ ಹಾಕುತ್ತಿದ್ದಾರೆ.
ಶ್ರೀ ರಾಮಯ್ಯನವರ ಜಮೀನು ಬೆಣಚು ಕಲ್ಲಿನಿಂದ ಕೂಡಿದ ಅಪ್ಟೇನು ಫಲವತ್ತಲ್ಲದ ಗುಡ್ಡಗಾಡು ಭೂಮಿ. ಈ ಭೂಮಿಯಲ್ಲಿ ಈ ಹಿಂದೆ ಜೋಳ, ರಾಗಿ, ಹುರುಳಿ ಇತ್ಯಾದಿಬೆಳೆಗಳನ್ನು ಮಳೆ ಆಶ್ರಯದಲ್ಲಿ ಬೆಳೆಯುತ್ತಿದ್ದರು. ಆದರೆ ಆಕಾಶಕ್ಕೆ ನೆಟ್ಟ ಕಣ್ಣುಗಳು ಉತ್ತಮ ಫಸಲನ್ನು ಕಾಣದಾಯಿತು. ನಿಯಮಿತವಲ್ಲದ ಮುಂಗಾರು ಮಳೆ ನಂಬಿ ಪೂರ್ಣ ಫಲ ದೊರಕದಾಯಿತು.
ಎರಡು ವರ್ಷದ ಹಿಂದೆ ಕೊಳವೆ ಬಾವಿ ಕೊರೆಸಿ ಎಕರೆಗೆ 20 ಗಾಡಿ ಕೊಟ್ಟಿಗೆ ಗೊಬ್ಬರ, ಗೋಡು ಮಣ್ಣು ಹಾಕಿದನಂತರ ಬೆಳೆ ಕೈಸೇರುವ ಹಂತಕ್ಕೆ ಬಂದಿತು. ನಂತರ ಶ್ರೀ ರಾಮಯ್ಯನವರು ತಮ್ಮ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ನಿರ್ಧರಿಸಿದರು. ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ 135 ಸಪೋಟ ಗಿಡ ಹಾಕಿದರು. ಪ್ರತಿ ಗಿಡಕ್ಕೆ 30 ಅಡಿ ಅಂತರವಿದ್ದು ಆರೈಕೆ ಮಾಡುತ್ತಿದ್ದಾರೆ. 30 ಅಡಿ ಅಂತರದ ಜಾಗದಲ್ಲಿ ಮಧ್ಯೆ ನುಗ್ಗೆ ಗಿಡಗಳನ್ನು ಹಾಕಿದರೆ ಕಳೆದ ವರ್ಷ ಅವರೆ, ತೊಗರಿ ಬೆಳೆ ಇದ್ದಿತು. ಅರ್ಧ ಎಕರೆ ಜಮೀನಿನಲ್ಲಿ 10 ಗುಂಟೆಯಲ್ಲಿ ಮೊಣಸಿನಕಾಯಿ ಹಾಗೂ 10 ಗುಂಟೆಯಲ್ಲಿರಾಗಿ ಹಾಕಿದರು. ಈಗ ಅದೇ ಜಾಗದಲ್ಲಿ ಎಳ್ಳು ಮತ್ತು ತೊಗರಿ ಹಾಕಿದ್ದಾರೆ. ಅವರೆ ಬಿತ್ತನೆಯನ್ನು ಪವರ್ ಟಿಲ್ಲರ್ ಮೂಲಕ ಉಳಿಮೆಯಲ್ಲಿ ಭೂಮಿಗೆ ಸೇರಿಸಿದ್ದಾರೆ. ಅರ್ಧ ಎಕರೆ ಪ್ರದೇಶದಲ್ಲಿ ಪಪ್ಪಾಯ ಮತ್ತು ನುಗ್ಗೆ ಹಾಕಿದ್ದು ಇದೀಗ ಅಲಸಂದೆ ಹಾಕುವ ಯತ್ನದಲ್ಲಿದ್ದಾರೆ.
ಒಂದು ಎಕರೆಯಲ್ಲಿ ಬಾಳೆ ಬೆಳೆ ಹಾಕಿದ್ದರು. ಅದು ಕಾಯಿಲೆಗೆ ಒಳಗಾಯಿತು. ಅದರಲ್ಲಿ ಮುಕ್ಕಾಲು ಎಕರೆ ಬಾಳೆ ತೆಗೆದು ಕಬ್ಬಿನ ಕೃಷಿಗೆ ತೊಡಗುತ್ತಿದ್ದಾರೆ. ಇದಕ್ಕಾಗಿ 6 ಗಾಡಿ ಕೊಟ್ಟಿಗೆ ಗೊಬ್ಬರ ಕೊಂಡಿದ್ದಾರೆ. ಬದುವಿನ ಪಕ್ಕ ಈರುಳ್ಳಿ , ಮೆಣಸಿನಕಾಯಿ ಹಾಕಲು ತೀರ್ಮಾನಿಸಿದ್ದಾರೆ.
ಇವರ ಬಳಿ ಪವರ್ ಟಿಲ್ಲರ್ ಇದ್ದು ಅದರ ಮೂಲಕ ಉಳುಮೆ ಮಾಡುತ್ತಿದ್ದಾರೆ. ಸಾವಯವ ಗೊಬ್ಬರಕ್ಕಾಗಿ ರಸಸಾರ ಗೊಬ್ಬರದ ಗುಂಡಿ (ಬಯೊಡೈಜೆಸ್ಟರ್) ಮಾಡಿದ್ದಾರೆ. ಸುಮಾರು 20 ಅಡಿ ಉದ್ದ 10 ಅಡಿ ಅಗಲ ಹಾಗೂ 6 ಅಡಿ ಆಳ ಹೊಂದಿದೆ. ಅದರಲ್ಲಿ ಕೃಷಿಯಿಂದ ಬರುವ ಅನಗತ್ಯ ಕೊಳಕನ್ನು ತುಂಬಿ, ಮಣ್ಣು ನೀರು ಹರಿಸಿ ಸಾವಯವ ಗೊಬ್ಬರ ಮಾಡಿ ಭೂಮಿಗೆ ಉಣಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇವರ ನೆರವಿಗೆ ಬಂದ ತೋಟಗಾರಿಕೆ ಇಲಾಖೆ ಮೂವತ್ತು ಸಾವಿರ ರೂಪಾಯಿಗಳ ಸಹಾಯ ಧನವನ್ನು ನೀಡಿದೆ. ಈಗ ಅವರ ಆದ್ಯತಾ ಆಸೆ ಜೇನು ಸಾಕಾಣಿಕೆಗೂ ಮತ್ತೆ ಕೈ ಹಾಕುವ ಯೋಜನೆಯೂ ಇವರಿಗಿದೆ.
ಇವರು ತಮ್ಮ ಯಶಸ್ಸಿನ ಫಲವನ್ನು ಬಾನುಲಿ ಕೃಷಿ ಬೆಳಗು' ಕಾರ್ಯಕ್ರಮಕ್ಕೆ ನೀಡುತ್ತಾರೆ. ಇವರ ಕೃಷಿ ವೈಫಲ್ಯದ ಬದುಕಿಗೆ ಅಂತ್ಯ ಹಾಡಿದ್ದಾರೆ ಹಾಗೂ ರೈತರು ಪರಸ್ಪರ ಕಲೆತು ತಜ್ಞರ ಜೊತೆಗೂಡಿ ಅನುಭವ ಪಡೆದಿದ್ದು, ಈಗ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಿಂದ ಸಾಧ್ಯವಾಯಿತು ಎಂಬುದು ಶ್ರೀಮತಿ ಸುಶೀಲ ಎಸ್ ಡಿ ರಾಮಯ್ಯನವರ ಪೂರ್ಣ ನಂಬಿಕೆ.
ಇದೀಗ ಜೂನ್ 29ರ ಸೋಮವಾರ ರಾಮಯ್ಯನವರ ಜಮೀನಿನಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯ ಕ್ರಮ ನಡೆದಿದೆ . ಅಂದು ಆಸಕ್ತ ರೈತರು ತಜ್ಞರು ಸೇರಿ ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿ ಕೊಂಡಿದ್ದಾರೆ . ಮಂಡ್ಯ ಸಮೀಪ ಶಾನುಬೋಗನ ಹಳ್ಳಿಯಲ್ಲಿ ಬಸವನಗುಡಿ ಕೆರೆಪಕ್ಕ ಇವರ ಜಮೀನಿದೆ. ಶಾನುಬೋಗನಹಳ್ಳಿಗೆ ಮಂಡ್ಯದಿಂದ ಹೊರಟು ಬಸರಾಳು ಹೇಮಾವತಿ ಕ್ವಾರ್ಟಸ್ ಬಳಿ ಇಳಿದು ವಡ್ಡರಹಳ್ಳಿ ರಸ್ತೆಯಲ್ಲಿ 1.5 ಕಿಲೋ ಮೀಟರ್ ದೂರದಲ್ಲಿದೆ. ಆಸಕ್ತ ಕೃಷಿಕರು ಭೇಟಿ ನೀಡಬಹುದಾಗಿದೆ ಎಂದು ಬಾನುಲಿ ಕೃಷಿ ಬಳಗ ಹೇಳುತ್ತದೆ. ರಾಮಯ್ಯನವರ ದೂರವಾಣಿ ಸಂಖ್ಯೆ 9663372277

No comments:

Post a Comment