Monday, August 3, 2009

ಸ್ವಾವಲಂಬನೆಯತ್ತ ಹೆಜ್ಜೆ
ಎನ್.ಎಂ.ಎಸ್ - 2 ಭತ್ತದ ತಳಿ
ಎಂ.ಕೆ. ಶಂಕರ್ ಗುರು
ಕೃಷಿಕರು, ಮಾಡ್ರಳ್ಳಿ ಗ್ರಾಮ,
ಟಿ.ನರಸೀಪುರ ತಾ:
ಮೈಸೂರು ಜಿಲ್ಲೆ.
ಮೊಬೈಲ್ ಸಂಖ್ಯೆ: 9900658921

ಸುಮಾರು 40 ವರ್ಷಗಳ ಕಾಲ ಕೃಷಿ ಭೂಮಿಯ ಒಡನಾಟ ಹಾಗೂ ಹಿರಿಯ ಕೃಷಿಕರನ್ನು ನೆನಪಿಸಿಕೊಳ್ಳಲು ಇಚ್ಚಿಸುತ್ತೇನೆ.
ನಾನು ಭತ್ತದ ತಳಿಯನ್ನು ಅಭಿವೃದ್ಧಿ ಪಡಿಸಲು ನಮ್ಮ ಪರಂಪರೆಯ ಕೃಷಿ ಪದ್ಧತಿಯೇ ಕಾರಣ. ನನ್ನ ಬಾಲ್ಯಜೀವನದ ಕಾಲದಿಂದ ದವಸದಾನ್ಯಗಳ ಬೆಳೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದದ್ದು. ಹಸಿರುಕ್ರಾಂತಿ ಹೆಸರಲ್ಲಿ ಕೃಷಿ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ ತಳಿಗಳಿಗೆ ಹೆಚ್ಚಿನ ಗೌರವಕೊಟ್ಟು ನಾನು ಸಹ ಅವುಗಳಿಗೆ ಹೊಂದಿಕೊಂಡಿರುವ ನಡುವೆ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿದ್ದ ಪ್ರೋಫೆಸರ್ ಎಂ.ಡಿ. ನಂಜುಂಡಸ್ವಾಮಿಗಳವರ ವಿದೇಶಿ ಪ್ರವಾಸದ ಅನುಭವಗಳನ್ನು ಅವರು ನಮಗೆಲ್ಲಾ ಮನದಟ್ಟು ಮಾಡಿದ ಮೇಲೆ, ನಾನು ಮೂಲತಹ ಸಾವಯವ ಕೃಷಿಕ ಹಾಗೂ ನಾಟಿತಳಿಗಳ ಬಗ್ಗೆ ಹೆಚ್ಚಿನ ಒಲವು ಇದ್ದಕಾರಣ ಅವರು ತಿಳಿಸಿದ ಮಾರ್ಗದರ್ಶನವು ನನಗೆ ಹೆಚ್ಚಿನ ಸಹಕಾರಿಯಾಯಿತು. ಅವರಿಗೂ ಸಹ ನಾನು ರಾಷ್ಟ್ರ ರೈತ ಕುಟುಂಬಗಳ ಪರವಾಗಿ ಋಣಿಯಾಗಿರುತ್ತೇನೆ.
ನಮ್ಮ ಪರಿಸರದಲ್ಲಿ ಮರಗಿಡ ಪ್ರಾಣಿ ಪಕ್ಷಿ ಇವುಗಳನೆಲ್ಲ ಗಮನಿಸಿದಾಗ ವಿಭಿನ್ನವಾದ ರೀತಿಯಲ್ಲಿ ಕಂಡುಬರುವುದನ್ನು ನಾನು ಗಮನಿಸುತ್ತ ಬಂದಿದ್ದೆ. ಅಲ್ಲದೇ ಬಿತ್ತನೆ ಬೀಜಗಳನ್ನು ವಿನಿಮಯ ಮಾಡುವ ಆಯ್ದ ಕೃಷಿ ಕುಟುಂಬಗಳು ಪ್ರತಿಗ್ರಾಮದಲ್ಲು ಹಿಂದಿನ ಕಾಲದಿಂದಲೂ ಸಂಪ್ರದಾಯ ಬದ್ಧವಾಗಿ ಗುರುತಿಸಿಕೊಂಡಿವೆ. ಅವರು ಸಹ ತಳಿ ಅಭಿವೃದ್ಧಿಯನ್ನು ಮುಂದುವರಿಸುತ್ತ ಬಂದವರು.
ನನ್ನ ಬಾಲ್ಯದಿಂದಲೂ ಭತ್ತದ ಒಡನಾಟ, ನಮ್ಮ ಊರಿನಲ್ಲಿ ಎಲ್ಲಾ ಭತ್ತಬೆಳೆಯುವ ಜಮೀನುಗಳೇ. ನಾನು ನಮ್ಮ ಜಮೀನಿನ ಸುತ್ತ ಮುತ್ತ ಸುತ್ತಾಡುವಾಗ ಒಂದೊಂದು ಜಮೀನಿನಲ್ಲಿ ಒಂದೊಂದು ರೀತಿಯ, ವಿಭಿನ್ನವಾದ ಭತ್ತದ ಗಿಡಗಳನ್ನು ಆಯ್ಕೆ ಮಾಡಿ ಏಕೆ ತಳಿಅಭಿವೃದ್ಧಿ ಪಡಿಸಬಾರದು ಎಂದು ಯೋಚನೆ ಮಾಡಿದೆ. ಸಂದರ್ಭದಲ್ಲಿ ನಮ್ಮ ಪಕ್ಕದ ಜಮೀನಿನ ಭತ್ತದ ಬೆಳೆ ಮಧ್ಯೆ ನಾಲ್ಕು ಭತ್ತದಗಿಡಗಳಿಗೆ ಬಣ್ಣದ ದಾರದಿಂದ ಗುರುತು ಮಾಡಿ ಬೆಳೆ ಬಲಿತನಂತರ ಕೊಯ್ಲು ಮಾಡಿ ಭತ್ತದ ಕಾಳುಗಳನ್ನು ನಾಲ್ಕು ಚೀಲಗಳಲ್ಲಿ ಒಂದೊಂದು ಜಾತಿಯನ್ನು ಬೇರೆ ಬೇರೆ ಸಂಗ್ರಹಿಸಿದೆ. ಕೊಯ್ಲು ಮಾಡಿದ ಏಳನೇ ತಿಂಗಳಲ್ಲಿ (ಜುಲೈ 15) ನಂತರ ಬೇರೆ ಬೇರೆ ವಿಭಾಗಮಾಡಿ ಒಟ್ಟು (ನರ್ಸರಿ) ಸಸಿ ಬಂದನಂತರ ಒಂದು, ಎರಡು, ಮೂರು, ನಾಲ್ಕು ಎಂದು ಸಂಖ್ಯೆಕೊಟ್ಟು ವಿಭಾಗಮಾಡಿ ನಾಟಿ ಮಾಡಿದೆ. ನವೆಂಬರ್ ತಿಂಗಳ ಮಧ್ಯದಲ್ಲಿ (15 ತಾರೀಖು) ಕೊಯ್ಲಿಗೆ ಬಂದ ಹೆಚ್ಚಿನ ಪ್ರಮಾಣದ ಭತ್ತದ ಬೀಜಗಳನ್ನು ಸಂಗ್ರಹಮಾಡಿ, ಇದೇ ರೀತಿ ಆರೇಳು ವರ್ಷಗಳ ಕಾಲ ಅದರ ಗುಣಮಟ್ಟವನ್ನು ಗಮನಿಸುತ್ತ ಬಂದೆ. ಸಂಖ್ಯೆ ಒಂದು, ಮೂರು ಮತ್ತು ನಾಲ್ಕನೇ ಸಂಖ್ಯೆಯ ತಳಿಗಳ ಗುಣಧರ್ಮ ಒಪ್ಪಿಗೆಯಾಗದ ಕಾರಣ ಅವುಗಳನ್ನು ದೂರ ಮಾಡಿ ಸಂಖ್ಯೆ ಎರಡನ್ನು ಆಯ್ಕೆ ಮಾಡಿ ಬೆಳೆಯುತ್ತ ಬಂದಿದ್ದೇನೆ. ತದನಂತರ ಅಭಿವೃದ್ಧಿ ಪಡಿಸಿದ ಭತ್ತದ ತಳಿಗೆ, ನಾಮಾಂಕಿತವನ್ನೇಕೆ ಕೊಡಬಾರದು ಎಂದು ಅಭಿಪ್ರಾಯಪಟ್ಟೆ. ತಳಿ ಅಭಿವೃದ್ಧಿಗೆ ಸಹಕರಿಸಿದ ನಮ್ಮ ಶ್ರೀಮತಿ ನಿರ್ಮಲ , ನಮ್ಮ ತಾಲ್ಲೂಕು ಕೇಂದ್ರ ನರಸೀಪುರ (ಎನ್) ಮಾಡ್ರಳ್ಳಿ ನನ್ನ ಹುಟ್ಟೂರು (ಎಂ) ಮಾಡ್ರಳ್ಳಿ ಕೆಂಪಣ್ಣ, ಶಂಕರ್ ಗುರು ನನ್ನ ಹೆಸರು (ಎಸ್). ಉಳಿದ ತಳಿಸಂಖ್ಯೆ (ಎರಡು) ಎನ್. ಎಂಬ ಅಕ್ಷರವು ಎರಡು ನಾಮಾಂಕಿತವನ್ನು ಸೂಚಿಸುತ್ತದೆ. ಆದ್ದರಿಂದ ಅಭಿವೃದ್ಧಿ ಪಡಿಸಿದ ತಳಿಗೆ ಎನ್.ಎಂ.ಸಿ.-.2 (ಎರಡು) ಎಂದು ನಾಮಕರಣವನ್ನು ನನ್ನ ಸ್ವಇಚ್ಛೆಯಿಂದ ಮಾಡಿರುತ್ತೇನೆ. ಭತ್ತದ ಬೀಜಗಳನ್ನು ರಾಜ್ಯದಲ್ಲಿ ಇರುವ ಹಲವಾರು ಸಂಘ ಸಂಸ್ಥೆಗಳ ಮುಖಾಂತರ ರೈತರ ಜಮೀನುಗಳಲ್ಲಿ ಬೆಳೆಯುವಂತೆ ಬೀಜಗಳನ್ನು ತಲುಪಿಸಿರುತ್ತೇನೆ. ಬೆಳದ ರೈತರು ತಮ್ಮ ಅಭಿಪ್ರಾಯಗಳನ್ನು ಆಕಾಶವಾಣಿ ಮತ್ತು ಪತ್ರಗಳ ಮೂಲಕ ನಮ್ಮೆಲ್ಲರ ಗಮನಕ್ಕೆ ತಂದಿರುತ್ತಾರೆ. ಎರಡು ವರ್ಷಗಳ ಹಿಂದೆ ಎಂದರೆ 13/07/2007 ನಮ್ಮ ಭತ್ತದ ಬೀಜವನ್ನು ವಿ.ಸಿ.ಫಾರಂ ಮಂಡ್ಯದಲ್ಲಿ ಇರುವ ಸಂಶೋಧನಾ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಬೆಳೆಯಲು ಮನವಿ ಮಾಡಿದಾಗ ತಳಿಯ ಪರೀಕ್ಷೆಯನ್ನು ನಮ್ಮ ಸಂಶೋಧನಾ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ಬೆಳೆದು ದೃಢೀಕರಿಸಲು ಐದು ಸಾವಿರದ ಆರುನೂರ ಇಪ್ಪತೈದು ರೂಪಾಯಿಗಳನ್ನು (5625) ನಮ್ಮ ಸ್ವಂತ ಹಣವನ್ನು ಪಾವತಿಮಾಡಿದರೆ ಪ್ರಾಯೋಗಿಕವಾಗಿ ಬೆಳೆದು ವರದಿ ಸಲ್ಲಿಸುತ್ತೇವೆ ಎಂದು ಪತ್ರವನ್ನು ನನಗೆ ಬರೆದರು. ತದನಂತರ ನಾನು ವಿಸ್ತರಣಾ ನಿರ್ದೇಶಕರು ಕೃಷಿ ವಿಶ್ವವಿದ್ಯಾಲಯ ಇವರ ವಿಳಾಸಕ್ಕೆ ಮೇಲ್ಕಂಡ ಮೊಬಲಗಿನ ಹಣವನ್ನು ಡಿಡಿ ಮುಖಾಂತರ ಕಳುಹಿಸಿ ಎರಡು ಕೆ.ಜಿ. ಭತ್ತದ ಬೀಜವನ್ನು ವಿ.ಸಿ.ಫಾರಂ ಮಂಡ್ಯದಲ್ಲಿ ಇರುವ ಭತ್ತದತಳಿ ಅಭಿವೃದ್ಧಿ ವಿಜ್ಞಾನಿಗಳ ಕೈಗೆ ತಲುಪಿಸಿದೆ. ಅವರು ಪ್ರಾಯೋಗಿಕವಾಗಿ ಬೆಳೆದು ಭತ್ತ ಎನ್.ಎಂ.ಸಿ..2 ತಳಿಯ ವರದಿಯನ್ನು ದಿನಾಂಕ 29/01/2008ರಲ್ಲಿ ನನಗೆ ಪತ್ರ ಮುಖೇನ ತಲುಪಿಸಿರುತ್ತಾರೆ. ವರದಿಯಲ್ಲಿ ನಮ್ಮ ತಳಿಯು ಉತ್ತಮ ಗುಣಧರ್ಮ ಹಾಗೂ ಇಳುವರಿಯನ್ನು ಹೊಂದಿರುತ್ತದೆ ಎಂದು ತಿಳಿಸಿರುತ್ತಾರೆ. ಗಿಡದ ಎತ್ತರ (108) ನೂರೆಂಟು ಸೆಂ .ಮೀ . ಹಾಗೂ ಧಾನ್ಯದ ಇಳುವರಿ ಹೆಕ್ಟೇರಿಗೆ ಏಳುಸಾವಿರದ ಇನ್ನೂರ ತೊಂಭತ್ತೊಂಬತ್ತು ಕೆ.ಜಿ. ಎಂದು ರುಜುವಾತು ಪಡಿಸಿರುತ್ತಾರೆ. ಸುಮಾರು ಒಂದು ಎಕರೆಗೆ ಇಪ್ಪತ್ತ ಒಂಬತ್ತು (29.16 ) ಕ್ವಿಂಟಾಲ್ ಇಳುವರಿ ಬಂದಿರುತ್ತದೆ. ನಾನು ತಿಳಿದ ಮಟ್ಟಿಗೆ ತಳಿಯಲ್ಲಿ ರೋಗಭಾದೆ, ಕಡಿಮೆ ಇದ್ದು ಊಟಕ್ಕೆ ಅಕ್ಕಿ ಯೋಗ್ಯವಾಗಿದ್ದು, ದನಗಳನ್ನು ಸಾಕಲು ಹುಲ್ಲು ಉತ್ತಮವಾಗಿರುತ್ತದೆ ಎಂದು ನನ್ನ ಅನುಭವದಿಂದ ಹೇಳುತ್ತೇನೆ.
ನೆಚ್ಚಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿರವರನ್ನ ನೆನಪಿಸಿಕೊಳ್ಳುತ್ತಾ ನನ್ನ ಲೇಖನವನ್ನ ಮುಕ್ತಾಯಗೊಳಿಸುತ್ತೇನೆ.











No comments:

Post a Comment