Thursday, January 21, 2010

ಕಬ್ಬಿನಲ್ಲಿ ಕುಂಬಳಕಾಯಿ ಶಿವರಾಮೇಗೌಡ

'ಎಲ್ಲರೂ ಕಬ್ಬಿನಲ್ಲಿ ಅಂತರ ಬೆಳೆಗಳನ್ನು ಮೊದಲ ಮೂರು ತಿಂಗಳ ಒಳಗೇ ಬೆಳೀಬೇಕು ಅಂತಾರೆ. ಆಮೇಲೆ ಯಾಕೆ ಬೆಳೀಬಾರದು ಅಂತ ಆಲೋಚನೆ ಮಾಡಿದೆ. ಮೂರು ತಿಂಗಳು ಕಳೆದ ಮೇಲೆ, ದೊಡ್ಡ ಮುರಿ ಮಾಡಿದ ಜಮೀನಿನ ತೆವರೀಲಿ ಕುಂಬಳಕಾಯಿ ಬೀಜ ಮಾಡಿದೆ. ಅದು ಬೆಳೆದು ಕಬ್ಬಿಗೇ ಹಬ್ಬಿತು. ನಾನೇ ಅಚ್ಚರಿಪಡುವಂತೆ ನನಗೆ ಮೂರರಿಂದ ನಾಲ್ಕು ಟನ್ ಕುಂಬಳಕಾಯಿ ಸಿಕ್ತು. ಆ ಸರಿ ನನಗೆ ಹತ್ತು ಸಾವಿರ ರೂಪಾಯಿ ಕುಂಬಳಕಾಯಿಯಿಂದ ಸಿಕ್ತು. ಅದು ನಾನು ಆ ವರುಷ ಕಬ್ಬಿನ ಬೇಸಾಯಕ್ಕೆ ಮಾಡಿದ ವೆಚ್ಹ .ನನಗೆ ಪುಕ್ಕಟೆಯಾಗಿ ಕಬ್ಬು ಬೆಳೆದಂತಾಯ್ತು. ಯಾಕೆ ಎಲ್ಲ ರೈತರೂ ನನ್ನ ವಿಧಾನವನ್ನೇ ಅನುಸರಿಸಬಾರದು ಸಾರ್ ಅಂತ ಶಿವರಾಮೇಗೌಡರು ಮಾತನಾಡ್ತಿದ್ರೆ, ಇವರು ರೈತನಾ? ಅಥವಾ ವಿಜ್ಞಾನಿಯಾ? ಅನ್ನುವ ಅನುಮಾನ ಮೂಡುತ್ತೆ. ಕೃಷಿ ವಿಜ್ಞಾನಿಗಳು ಮಾಡಬೇಕಾದ ಸಂಶೋಧನೆಯನ್ನು ರೈತನಾಗಿ ಶಿವರಾಮೇಗೌಡ ಮಾಡಿದ್ದಾರೆ. ಹಾಗಾಗಿ ಬಾನುಲಿ ಕೃಷಿಕರ ಬಳಗದ ವತಿಯಿಂದ ಕೆ.ಸಿ. ಶಿವರಾಮೇಗೌಡರನ್ನು ನಾವು ಪ್ರೀತಿಯಿಂದ ಕಬ್ಬಿನಲ್ಲಿ ಕುಂಬಳಕಾಯಿ ಶಿವರಾಮೇಗೌಡ ಅಂತ ನಾಮಕರಣ ಮಾಡಿದ್ದೇವೆ. ಕುಂಬಳಕಾಯಿ ಗೌಡರೇ ಅಂದರೆ ಬಾಯ್ತುಂಬಾ ನಗುವ ಗೌಡರು, ಜೇಬಿನಲ್ಲಿ ಸದಾ ಇಟ್ಟಿರುವ ಕುಂಬಳಕಾಯಿ ಬಿತ್ತನೆ ಬೀಜವನ್ನು ನೀಡ್ತಾರೆ. ಈಗಾಗಲೇ ಮೈಸೂರು, ಮಂಡ್ಯ, ಹಾಸನ, ರಾಮನಗರ, ಚಾಮರಾಜನಗರ, ತುಮಕೂರು, ಕರ್ನಾಟಕದ ನಾನಾ ಜಿಲ್ಲೆಗಳಿಗೆ ತಂತ್ರಜ್ಞಾನವನ್ನು, ಬಿತ್ತನೆ ಬೀಜವನ್ನು ಗೌಡರು ಹಂಚಿದ್ದಾರೆ. ಗೌಡರು ಈಗ ಮಂಡ್ಯದ ಜಿಲ್ಲಾ ಕ್ಥಷಿ ತರಬೇತಿ ಶಾಲೆಗೆ ಅವಧಿ ಉಪನ್ಯಾಸಕರು. ಕೃಷಿ ತರಬೇತಿಗೆಂದು ಬರುವ ರೈತರಿಗೆ ತಮ್ಮ ಜಮೀನಿನಲ್ಲಿಯೇ ನಿಂತು ಕೃಷಿ ಪಾಠ ಹೇಳುತ್ತಾರೆ. ಕೃಷಿ ಇಲಾಖೆಗೆ ಭೇಟಿ ನೀಡುವ ದೇಶ, ವಿದೇಶಗಳ ಅತಿಥಿಗಳೂ ಸಹ ಶಿವರಾಮೇಗೌಡರ ಸಾಧನೆ ನೋಡಿ, ಕೇಳಿ ಬೆರಗಾಗಿದ್ದಾರೆ.
ಶಿವರಾಮೇಗೌಡರಿಗೆ ಈಗ ತಮ್ಮದೇ ಸಂಶೋಧನೆಯನ್ನು ವಿಸ್ತರಿಸುವ ಆಸೆ ಬಂದಿದೆ. ಇದೀಗ ಕಬ್ಬಿನಲ್ಲಿ ಅಂತರಬೆಳೆಯಾಗಿ ಬೂದಕುಂಬಳಕಾಯಿ ಬೆಳೆದು ಯಶಸ್ವಿಯಾಗಿದ್ದಾರೆ. ಮುಂದೆ ಕಲ್ಲಂಗಡಿ, ಸೌತೆ, ಹೀರೆ ಈ ರೀತಿ ಇತರೇ ಬಳ್ಳಿ ಜಾತಿಯ ಬೆಳೆ ಬೆಳೆಯುವ ಇರಾದೆ ಇದೆ. ಎಲ್ಲ ಪ್ರಯೋಗದಲ್ಲೂ ಯಶಸ್ವಿಯಾಗುವ ದೃಢ ವಿಶ್ವಾಸ ಇದೆ.
ಮೂರು ತಿಂಗಳ ನಂತರ ಬೆಳೆಯುವ ಅಂತರ ಬೆಳೆಗಳು ಕಬ್ಬಿಗೆ ಯಾವುದೇ ಹಾನಿ ಕೊಡುವುದಿಲ್ಲ. ಆರಂಭದಲ್ಲಿ ಕಬ್ಬಿಗೆ ಹಬ್ಬಿ ಬೆಳೆಯುವ ಬೆಳೆಗಳು, ಕಾಯಿ ಭಾರವಾದಂತೆ ನಿಧಾನವಾಗಿ ನೆಲಕ್ಕೆ ಸರಿಯುತ್ತೆ. ಮೇಲೆ ಕಬ್ಬು ಭರ್ಜರಿಯಾಗಿ ಬೆಳೆದಿದ್ದೆ, ಕೆಳಗಡೆ ದೊಡ್ಡ ದೊಡ್ಡ ಕುಂಬಳಕಾಯಿ ನಗುನಗುತ್ತಿರುತ್ತೆ. ಶಿವರಾಮೇಗೌಡರು ಹೇಳುವಂತೆ ಆರಂಭದ ಮೂರು ತಿಂಗಳಲ್ಲಿ ಬೀನ್ಸ್, ಬೆಂಡೆ, ಮೂಲಂಗಿ, ಮೆಣಸು ಬೆಳೆ ಬೆಳೆದು ನಂತರ ದೊಡ್ಡ ಮುರಿ ಆದಮೇಲೆ ಕುಂಬಳ ಬಿತ್ತನೆಯನ್ನು ತೆವರಿ ಮೇಲೆ ಬಿತ್ತಿದರೆ ಆಯ್ತು. ಕಬ್ಬಿನ ಜೊತೆಜೊತೆಯಲ್ಲಿ ಐದಾರು ಉಪಬೆಳೆ ಬೆಳೆಯಬಹುದು. ಮತ್ತೊಂದು ಪ್ರಮುಖವಾದ ವಿಚಾರ ಏನೆಂದರೆ ಶಿವರಾಮೇಗೌಡರ ವಿಧಾನದಲ್ಲಿ ಕಬ್ಬಿನ ಸಾಲಿನ ನಡುವಿನ ಅಂತಹ ಹೆಚ್ಚಿಸುವ ಅಗತ್ಯವಿಲ್ಲ. ಕಬ್ಬನ್ನು ಮಾಮೂಲಿ ಮೂರು ಅಡಿ ಸಾಲಿನಲ್ಲಿ ಬೆಳೆದಿದ್ರೂ, ಕುಂಬಳಕಾಯಿ ಬೆಳೀಬಹುದು. ಐದು ಅಡಿ ಅಂತರದ ಸಾಲಿನಲ್ಲಿ ಕಬ್ಬು ಬೆಳೆದ್ರೆ ಅನುಕೂಲ ಅಷ್ಟೆ.
ಕೆ.ಸಿ. ಶಿವರಾಮೇಗೌಡರು ಮಂಡ್ಯ ತಾಲ್ಲೂಕು ಕೀಲಾರ ಗ್ರಾಮದವರು. ಚನ್ನೇಗೌಡ, ಸಾಕಮ್ಮನವರ ಸುಪುತ್ರರು. ಬಿಎಸ್ಸಿ ಪದವೀಧರರು. ಪ್ರಗತಿಪರ ಕೃಷಿ ಚಿಂತಕರು. ಶ್ರೀ ಪದ್ದತಿಯಲ್ಲಿ ಭತ್ತ, ಸಮಗ್ರ ಪೋಶಕಾಂಶಗಳ ನಿರ್ವಹಣೆಯಲ್ಲಿ ಕಬ್ಬು, ಹಸಿರೆಲೆ ಗೊಬ್ಬರದ ಬಳಕೆ ಹೀಗೆ ಹತ್ತು ಹಲವು ಪ್ರಯೋಗಗಳನ್ನು ಗೌಡರು ಮಾಡಿದ್ದಾರೆ.
ಶಿವರಾಮೇಗೌಡರ ಸಾಧನೆ ಗುರುತಿಸಿ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ. ಮಂಡ್ಯದ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ, 2006ರ ದಸರಾ ಫಲಪುಷ್ಪ ಪ್ರದರ್ಶನ ಪ್ರಶಸ್ತಿ, ಕೃಷಿ ವಿಶ್ವವಿದ್ಯಾಲಯದ 'ಶ್ರೇಷ್ಠ ಕೃಷಿಕರ ಪ್ರಶಸ್ತಿ' ಉದಾಹರಿಸಲು ಯೋಗ್ಯವಾದವು. ಶಿವರಾಮೇಗೌಡರಿಂದ ಕುಂಬಳ ಬಿತ್ತನೆ ಬೀಜ ಪಡೆದು ತಮ್ಮ ಕಬ್ಬಿನಲ್ಲಿ ಕುಂಬಳಕಾಯಿ ಬೆಳೆದ ಮದ್ದೂರು ತಾಲ್ಲೂಕು ಸಬ್ಬನಹಳ್ಳಿಯ ನಾಗರಾಜು ಮಂಡ್ಯದಲ್ಲಿ ಬಹುಮಾನ ಗಳಿಸಿದ್ದು ಶಿವರಾಮೇಗೌಡರಿಗೆ ಸಂತಸ ತಂದ ವಿಶೇಷ. ಆಕಾಶವಾಣಿಯ ನೇರ ಫೋನ್ಇನ್ ಕಾರ್ಯಕ್ರಮದಲ್ಲಿ ಸಹಾ ಶಿವರಾಮೇಗೌಡರದೊಂದು ಕಾಲ್ ಇದ್ದೇ ಇರುತ್ತೆ. ನಾಲ್ಕು ವರುಷಗಳಿಂದ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾವಿರಾರು ಕೃಷಿಕರಿಗೆ ಕುಂಬಳಕಾಯಿ ಬಿತ್ತನೆ ಹಂಚಿ, ಶಾಲೆಯ ಮಾಸ್ತರಂತೆ ಪಾಠ ಹೇಳುವ ಗೌಡರದ್ದು ಅನುಕರಣೀಯ ಸಾಧನೆ. ಪತ್ನಿ, ಮೂರು ಮಕ್ಕಳೊಂದಿಗೆ ಸಂತೃಪ್ತ ಬದುಕು ಕಟ್ಟಿರುವ ಶಿವರಾಮೇಗೌಡರು ಇತರೇ ಕೃಷಿಕರಿಗೆ ಒಂದು ಆದರ್ಶ.
ಕೇಶವಮೂರ್ತಿ .ಎನ್

No comments:

Post a Comment