Thursday, January 21, 2010

ಗ್ರಾಮೀಣ ಪ್ರದೇಶಕ್ಕೆ ಕೃಷಿ ತಂತ್ರಜ್ಞಾನ
ಕೃಷಿ ವಿಜ್ಞಾನ ಕೇಂದ್ರದ ಸಾಧನೆ

ಕೃಷಿಯಲ್ಲಿನ ಆಧುನಿಕ ತಂತ್ರಜ್ಞಾನವನ್ನು ಗ್ರಾಮಾಂತರ ಪ್ರದೇಶಗಳಿಗೆ ಕೊಂಡೊಯ್ಯಲು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ನವದೆಹಲಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಜಿಲ್ಲೆಗೊಂದು ಕೃಷಿ ವಿಜ್ಞಾನ ಕೇಂದ್ರವೆಂಬಂತೆ ಕೃಷಿ ಉತ್ಪಾದನೆಯ ಹೆಚ್ಚಳ ಹಾಗೂ ರೈತರ ಸಾಮಾಜಿಕ ಆರ್ಥಿಕ ಮಟ್ಟವನ್ನು ಸುಧಾರಿಸುವ ಹಿತದೃಷ್ಠಿಯಿಂದ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ ಫಾರಂನಲ್ಲಿ 2004ರ ಮೇ ತಿಂಗಳಿನಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ಪ್ರಾರಂಭಿಸಿತು. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಆಡಳಿತದ ವ್ಯಾಪ್ತಿಯಲ್ಲಿ ಬರುವ ಚಾಮರಾಜನಗರ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರವು ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಈ ಕೃಷಿ ವಿಜ್ಞಾನ ಕೇಂದ್ರವು ತನ್ನ ವ್ಯಾಪ್ತಿಗೆ ಬರುವ ನಾಲ್ಕು ತಾಲ್ಲೂಕುಗಳಾದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಕೇಂದ್ರದ ವ್ಯಾಪ್ತಿಯಲ್ಲಿ ರಾಗಿ, ಜೋಳ, ಮುಸುಕಿನ ಜೋಳ, ಭತ್ತ, ಸೂರ್ಯಕಾಂತಿ, ಶೇಂಗಾ, ಕಬ್ಬು, ಬಾಳೆ, ತೆಂಗು, ಅರಿಶಿನ ಮತ್ತು ಇತರೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.
ಕೇಂದ್ರದ ವೈಶಿಷ್ಟತೆ:
ಚಾಮರಾಜನಗರ ಜಿಲ್ಲೆಯ ಆಶಾಕಿರಣವಾದ ಈ ಕೇಂದ್ರವು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿವೆ. ಕೃಷಿಕರು ಕ್ಷೇತ್ರ ಮಟ್ಟದಲ್ಲಿ ಸುಧಾರಿತ ಕೃಷಿ ತಂತ್ರಜ್ಞಾನವವನ್ನು ಅಳವಡಿಸುವಾಗ ಎದುರಿಸುವ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಪರಿಹಾರೋಪಾಯಗಳನ್ನು ಸೂಚಿಸುವ ಹಾಗೂ ಈ ಪರಿಹಾರಗಳನ್ನು ಅಳವಡಿಸುವಂತೆ ಮನವರಿಕೆ ಮಾಡುವುದು ಕೇಂದ್ರದ ಚಟುವಟಿಕೆಗಳಲ್ಲೊಂದಾಗಿದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯನುಭವ್ತರಬೇತಿಯ ಮುಖ್ಯ ಉದ್ದೇಶ. ಕೇಂದ್ರದಲ್ಲಿ ಬೇಸಾಯಶಾಸ್ತ್ರ, ತೋಟಗಾರಿಕೆ, ಸಸ್ಯ ಸಂರಕ್ಷಣೆ, ಗೃಹ ವಿಜ್ಞಾನ, ಪಶುವೈದ್ಯಕೀಯ ಮತ್ತು ರೇಷ್ಮೆ ಕೃಷಿತಜ್ಞರಿರುತ್ತಾರೆ. ಈ ವಿಜ್ಞಾನಿಗಳೆ ತರಬೇತುದಾರರಾಗಿರುವದರಿಂದ ಕೃಷಿಯಲ್ಲಿ ಆವಿಷ್ಕಾರಗೊಂಡಿರುವ ನವೀನ / ಸಂಶೋಧನೆಯ ತಾಂತ್ರಿಕತೆಯ ಫಲ ರೈತರನ್ನು ನೇರವಾಗಿ ತಲುಪುತ್ತದೆ ಮತ್ತು ವಿಜ್ಞಾನಿಗಳಿಂದ ತಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ತಕ್ಷಣ ಪಡೆಯುವರು. ಇಲ್ಲಿ ನಡೆಸುವ ತರಬೇತಿ ಕಾರ್ಯಚಾತುರ್ಯತೆಗಳನ್ನು ಕಲಿಸುವ ಹಾಗೂ ಸಮಸ್ಯೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಹೊಂದುವಂತಹ ಪ್ರವೃತ್ತಿಯನ್ನು ಬೆಳೆಸುವುದಾಗಿದೆ.
ಕೃಷಿ ವಿಜ್ಞಾನ ಕೇಂದ್ರದ ಧ್ಯೇಯೋದ್ದೇಶಗಳು:
ಸುಸ್ಥಿರ ಭೂಬಳಕೆ ವ್ಯವಸ್ಥೆಗೆ ಸೂಕ್ತ ತಂತ್ರಜ್ಞಾನವನ್ನು ಗುರುತಿಸಲು ರೈತರ ತಾಕುಗಳಲ್ಲಿ ತಂತ್ರಜ್ಞಾನ ಮರುಪರಿಶೀಲನೆ ನಡೆಸುವುದು.
ಕೃಷಿ ಸಂಶೋಧನೆಯ ತಂತ್ರಜ್ಞಾನಗಳ ಬಗ್ಗೆ ವಿಸ್ತರಣ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
ಅಧಿಕ ಉತ್ಪಾದನೆಗೆ ಮತ್ತು ಸ್ವ ಉದ್ಯೋಗಾವಕಾಶಗಳಿಗಾಗಿ ಕಾರ್ಯದಿಂದ ಕಲಿಕೆಯ ಬಗ್ಗೆ ಒತ್ತು ನೀಡಿ ರೈತರಿಗೆ ಹಾಗೂ ಗ್ರಾಮೀಣ ಯುವಕರಿಗೆ ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
ಉತ್ಪನ್ನ ಮಾಹಿತಿ ಪಡೆಯಲು ಹಾಗೂ ರೈತರ ಅಭಿಪ್ರಾಯ ತಿಳಿಯಲು ವಿವಿಧ ಬೆಳೆಗಳಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದು.
ತಂತ್ರಜ್ಞಾನ ಮರುಪರಿಶೀಲನೆ:
ರೈತರು ಅನುಸರಿಸುತ್ತಿರುವ ಕೃಷಿ ಪದ್ದತಿಯಲ್ಲಿರುವ ಅಂದರೆ ಬೆಳೆ ಪದ್ದತಿ, ಪೋಷಕಾಂಶಗಳ ನಿರ್ವಹಣೆ, ಕೀಟ ಮತ್ತು ರೋಗ ನಿರ್ವಹಣೆ, ಕಳೆ ನಿರ್ವಹಣೆ ಹಾಗೂ ಇತರೆ ಸಮಸ್ಯೆಗಳನ್ನು ಗುಣಾತ್ಮಕವಾಗಿ ಪರಿಶೀಲಿಸಿ ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ತಂತ್ರಜ್ಞಾನವನ್ನು ರೈತರಿಗೆ ಒದಗಿಸಬಹುದಾಗಿದೆ. ಕೃಷಿ ವಿಜ್ಞಾನ ಕೇಂದ್ರದ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಬೆಳೆಗಳ ಬಗ್ಗೆ ತಂತ್ರಜ್ಞಾನದ ನವೀಕರಣೆಗಾಗಿ ಕ್ಷೇತ್ರ ಸಂಶೋಧನೆಗೊಳ್ಳುವುದು.
ಅಭಿವೃದ್ಧಿ ಇಲಾಖೆಗಳ ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿ:
ಗ್ರಾಮೀಣ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಭಿವೃದ್ಧಿ ಇಲಾಖೆಗಳ ವಿಸ್ತರಣಾ ಕಾರ್ಯಕರ್ತರಿಗೆ ಹೊಸ ತಂತ್ರಜ್ಞಾನ ಮತ್ತು ಕೌಶಲ್ಯತೆಗಳ ಬಗ್ಗೆ ತರಬೇತಿ ನೀಡುವುದು.
ವೃತ್ತಿಪರ ತರಬೇತಿ ಕಾರ್ಯಕ್ರಮ:
ರೈತರು, ರೈತ ಮಹಿಳೆಯರು ಮತ್ತು ಗ್ರಾಮೀಣ ಯುವಕರಿಗೆ ಹೊಸ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಲು ಬೇಕಾಗುವ ಜ್ಞಾನ ಮತ್ತು ಕೌಶಲ್ಯಗಳ ಬಗ್ಗೆ ತರಬೇತಿ ನೀಡಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು.
ಮುಂಚೂಣಿ ಪ್ರಾತ್ಯಕ್ಷಿಕೆಗಳು:
ಪ್ರಮುಖವಾದ ಏಕದಳ ಮತ್ತು ದ್ವಿದಳ ಧಾನ್ಯಗಳೂ ಮತ್ತು ಎಣ್ಣೆಕಾಳು ಬೆಳೆಗಳಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ ಉತ್ಪಾದನಾ ಅಂಕಿಅಂಶಗಳ ವಿವರಗಳನ್ನು ಪಡೆಯುವುದರ ಜೊತೆಗೆ ರೈತರಿಗೆ ಮತ್ತು ವಿಸ್ತರಣಾ ಕಾರ್ಯಕರ್ತರಿಗೆ ಹೊಸ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡುವುದು. ಇದರ ಮುಖ್ಯ ಉದ್ದೇಶವೆಂದರೆ ವಿವಿಧ ವಾತಾವರಣ ಹಾಗೂ ಬೆಳೆಯ ಪರಿಸ್ಥಿತಿಗನುಗುಣವಾಗಿ ಹೊಸದಾಗಿ ಅಭಿವೃದ್ಧಿಪಡಿಸಿದ ಉತ್ಪಾದನೆ ಮತ್ತು ಸಸ್ಯ ಸಂರಕ್ಷಣೆ ತಾಂತ್ರಿಕತೆ ಹಾಗೂ ಅವುಗಳ ನಿರ್ವಹಣೆ ಬಗ್ಗೆ ರೈತರ ಹೊಲ, ಗದ್ದೆ - ತೋಟಗಳಲ್ಲಿ ಪ್ರಾತ್ಯಕ್ಷಿಕೆ ಏರ್ಪಡಿಸುವುದು.
ಕೇಂದ್ರದಲ್ಲಿರುವ ಸವಲತ್ತುಗಳು: ರೇಷ್ಮೆ ಸಾಕಾಣಿಕೆ ಘಟಕ, ಎರೆಹುಳು ತಯಾರಿಕ ಘಟಕ, ಹೈನುಗಾರಿಕೆ ಘಟಕ, ಕುರಿ ಸಾಕಾಣಿಕೆ ಘಟಕಗಳು ಇವೆ.
ಗ್ರಾಮ ಸಂಪನ್ಮೂಲ ಕೇಂದ್ರ:
ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಯ ಪ್ರಗತಿಗಳು ಗ್ರಾಮೀಣ ಜನರ ನೆರವಿಗೆ ಬಂದಾಗ ಮಾತ್ರ ಅವರ ಜೀವನ ಮಟ್ಟದಲ್ಲಿ ಸುಧಾರಣೆ ಕಾಣುವ ಮೂಲಕ ರಾಷ್ಟ್ರದ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಅಂತರಿಕ್ಷ ಸಹಾಯದಿಂದ ಗ್ರಾಮಮಟ್ಟದಲ್ಲಿ ಗ್ರಾಮ ಸಂಪನ್ಮೂಲ ಕೇಂದ್ರಗಳನ್ನು ಪ್ರಾರಂಭಿಸುವ ಪ್ರಯತ್ನಕ್ಕೆ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಇಸ್ರೋ ಮುಂದಾಗಿದೆ.
ಈ ಯೋಜನೆಯಲ್ಲಿ ಹಳ್ಳಿಗಳ ಮಟ್ಟದಲ್ಲಿ ಗ್ರಾಮ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಿ ಉಪಗ್ರಹ ಸಂಪರ್ಕ ಕಲ್ಪಿಸುವ ಮೂಲಕ ವೀಡಿಯೋ ಸಂವಾದ ಕಾರ್ಯಕ್ರಮಗಳನ್ನು ನಡೆಸಿ ಕೃಷಿಕರಿಗೆ ಅತಿ ಕಡಿಮೆ ಸಮಯದಲ್ಲಿ ಯಶಸ್ವಿಯಾಗಿ ಮಾಹಿತಿ ಪೂರೈಸಬಹುದಾಗಿದೆ.
ಬಾನುಲಿ ಕೃಷಿ ಬೆಳಗು:
ಕೇಂದ್ರದ ಸಹಯೋಗದಲ್ಲಿ ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ಏರ್ಪಡಿಸಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ಪಡೆದರು. 14.9.2009ರಂದು ನಡೆದ ಕಾರ್ಯಕ್ರಮದಲ್ಲಿ ಸಮಗ್ರ ಪೀಡೆ ನಿರ್ವಹಣೆ ಕುರಿತು ತರಬೇತಿ ನೀಡಲಾಯಿತು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀ ಶಿವಮಲ್ಲು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶ್ರೀ ಗಿರೀಶ್, ಕೇಂದ್ರ ರೇಷ್ಮೆ ಮಂಡಳಿ ಜಂಟಿ ನಿರ್ದೇಶಕ ಚಂದ್ರಶೇಖರ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಆಕಾಶವಾಣಿ ನಿಲಯ ನಿರ್ದೇಶಕಿ ಶ್ರೀಮತಿ ವಿಜಯಾಹರನ್, ಕಾರ್ಯಕ್ರಮ ನಿರ್ವಾಹಕ ಶ್ರೀ ಕೇಶವಮೂರ್ತಿ ಸೇರಿದಂತೆ ಹಲವು ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ರೈತರಿಗೆ ಉಪಯುಕ್ತ ಮಾಹಿತಿ ಒದಗಿಸಿದರು.





















No comments:

Post a Comment