Saturday, January 9, 2010

ನನಸಾದ ಕೃಷಿ ಕನಸು
ಶಿಕ್ಷಣ ಕ್ಷೇತ್ರದಲ್ಲೇ 5 ದಶಕಗಳಿಂದ ತೊಡಗಿಸಿಕೊಂಡಿರುವ ನಮಗೆ ಕೃಷಿಯಲ್ಲಿ ಹೇಗೆ ಆಸಕ್ತಿ ಎಂಬ ಕುತೂಹಲವನ್ನು ಅನೇಕರು ವ್ಯಕ್ತಪಡಿಸಿದ್ದಾರೆ - ಪಡಿಸುತ್ತಿದ್ದಾರೆ. ಇದರ ಹಿನ್ನೆಲೆ ಹೀಗಿದೆ:
60 ವರ್ಷಗಳ ಹಿಂದೆ ನಾನಿನ್ನೂ ಮಿಡ್ಲ್ ಸ್ಕೂಲ್ ಓದುತ್ತಿದ್ದ ಕಾಲ. ನಮ್ಮ ತಾತ (ತಾಯಿ ತಂದೆ) ನವರ ಗದ್ದೆಗಳು ಕೆಸ್ತೂರು - ನಿಡಘಟ್ಟಗಳಲ್ಲಿತ್ತು. ಪ್ರತೀವರ್ಷ ನಮ್ಮ ರೈತರು (ಈಟಿ ಗೌಡ ಮತ್ತು ತಮ್ಮಯ್ಯ) ಗಾಡಿಗಳಲ್ಲಿ ಭತ್ತ ತುಂಬಿಕೊಂಡು ಮೈಸೂರಿನಲ್ಲಿರುವ ಮನೆಗೆ ತರುತ್ತಿದ್ದರು. ಈ ದಿನದ ಹಿನ್ನಾಮುನ್ನಾ ಸಡಗರ ಅವರ್ಣನೀಯ. ಸುಮಾರು 15 ದಿನಗಳ ಮುಂಚೆಯೆ ಪೆಟ್ಟೆ (ಬಿದಿರನ ಚಾಪೆಯ ರೀತಿ) ತರುವುದು - ಅದನ್ನು ಸಗಣಿಯಲ್ಲಿ ಸಾರಿಸಿ ನೆರಳಿನಲ್ಲಿ ಒಣಗಿಸುವುದು, ನಂತರ ಮನೆಯ ಒಂದು ಮೂಲೆಯಲ್ಲಿ ಡ್ರಮ್ಮಿನಾಕಾರದಲ್ಲಿ (ಸುರುಳಿ ಆಕಾರ) ಕಟ್ಟಿ ದಬ್ಬಳ ಮತ್ತು ಸುತ್ತಲಿಯಿಂದ ತೆರೆದ ಅಂಚನ್ನು ಭದ್ರವಾಗಿ ಹೊಲೆಯುವುದು. ತಳಭಾಗಕ್ಕೆ ಸಂದು ಬಿಡದಂತೆ ಕೆಮ್ಮಣ್ಣು ಸಗಣಿಯಿಂದ ಮೆತ್ತಿ ಪೆಟ್ಟೆಯ ಒಳಗೆ ಧೂಪವನ್ನು ಹಾಕುವುದು. ನಂತರ ತಳಕ್ಕೆ ಬೇವಿನ ಸೊಪ್ಪನ್ನು ಹಾಕಿ ಮೇಲೆ ತೆಳುವಾದ ಗೋಣಿಚೀಲ ಹೊದಿಸುವುದು. ಇಷ್ಟಾದರೆ ಭತ್ತ ತುಂಬಿಸಲು ಪೆಟ್ಟೆ ಸಿದ್ಧ. ಸಾಮಾನ್ಯವಾಗಿ ಭತ್ತದ ಗಾಡಿಗಳು ಬೆಳಗಿನ ಜಾವ 5 ರಿಂದ 6 ಗಂಟೆ ಹೊತ್ತಿಗೆ ಬರುತ್ತಿದ್ದವು. ಮನೆಯವರೆಲ್ಲಾ ಬೆಳಿಗ್ಗೆ 4 ಗಂಟೆಗೆ ಎದ್ದು ಸ್ನಾನ ಪೂಜೆಗಳನ್ನು ಮುಗಿಸಿರುತ್ತಿದ್ದೆವು. ನಾವು (ಮಕ್ಕಳು) ಗಾಡಿಗಳನ್ನು ಕಂಡತಕ್ಷಣ ನಮ್ಮ ಸಂಭ್ರಮ ಹೇಳತೀರದು. ದೂರದವರೆಗೆ ಓಡಿ ಗಾಡಿಗಳನ್ನು ಸ್ವಾಗತಿಸಿ, ಜೊತೆಯಲ್ಲಿ ನಡೆದುಬರುತ್ತಿದ್ದೆವು. ಎತ್ತುಗಳನ್ನು ಬಿಚ್ಚಿ ಹುಲ್ಲು ನೀರನ್ನು ಕೊಟ್ಟ ನಂತರ ಈಟಿ ಗೌಡ ಮತ್ತು ತಮ್ಮಯ್ಯ ಒಳಬರುತ್ತಿದ್ದರು. ಮನೆಯ ಮುಂದಿನ ಭಾವಿಯಲ್ಲಿ ನೀರು ಸೇದಿ ಮುಖ ಕೈಕಾಲು ತೊಳೆದುಕೊಳ್ಳುತ್ತಿದ್ದರು. ಅವರಿಗೆ ದೊಡ್ಡ ಲೋಟಗಳಲ್ಲಿ (1/2 ಲೀಟರ್ಗಿಂತ ಹೆಚ್ಚಿರಬಹುದು) ಕಾಫಿ ಕೊಡಲಾಗುತ್ತಿತ್ತು. ಮನೆಯ ಹಿರಿಯರ ಜೊತೆ ಯೋಗಕ್ಷೇಮ ವಿಚಾರ ನಂತರ ಎಲ್ಲರೂ ಸೇರಿ ಪೆಟ್ಟೆಗಳನ್ನು ತುಂಬಿಸುತ್ತಿದ್ದೆವು. ಸುಮಾರು 2-3 ಗಂಟೆಗಳು ಬೇಕಾಗುತ್ತಿತ್ತು. ನಂತರ ನಮ್ಮ ರೈತರು ಸ್ನಾನ ಮಾಡಿ ತಿಂಡಿ (ದಪ್ಪ ದೋಸೆಗಳು ಅವರಿಗೆ ಇಷ್ಟ) ತಿಂದು ಹಜಾರದಲ್ಲಿ 1 ಗಂಟೆ ಮಲಗುತ್ತಿದ್ದರು. ನಂತರ ಎದ್ದು ಎತ್ತುಗಳ ಆರೈಕೆ ಮಾಡಿ ಸುತ್ತಾಡಿಕೊಂಡು ಬರುತ್ತಿದ್ದರು.
ಸುಮಾರು ಮಧ್ಯಾಹ್ನ 1 ಗಂಟೆ ವೇಳೆಗೆ ವಿಶೇಷ ಊಟ ಸಿದ್ಧವಾಗುತ್ತಿತ್ತು. ರೈತರನ್ನು ಮೊದಲು ಊಟಕ್ಕೆ ಕೂರಿಸುತ್ತಿದ್ದರು. ದೊಡ್ಡ ಬಾಳೆ ಎಲೆಗಳು, ಸುತ್ತ ರಂಗೋಲಿ, ಮುಂದೆ ಹಣತೆ ದೀಪಗಳನ್ನು ಹಚ್ಚಿರುತ್ತಿದ್ದರು. ಅಡಿಗೆ ಬಡಿಸಿದ ನಂತರ ದೇವರ ಪೂಜೆ ಮಾಡಿ ತೀರ್ಥ ಕೊಡುತ್ತಿದ್ದರು. ನಮ್ಮ ಅಜ್ಜಿ ತಾತ ಆದಿಯಾಗಿ ಎಲ್ಲರೂ ಅನ್ನದಾತ ಸುಖೀಭವ ಎಂದು ಹೇಳಿಕೊಂಡು ದೀರ್ಘದಂಡ ನಮಸ್ಕಾರ ಮಾಡುತ್ತಿದ್ದೆವು. ಅವರ ಊಟವಾದ ನಂತರ ನಾವುಗಳು (ಚಿಕ್ಕವರು) ರೈತರ ಎಲೆಗಳನ್ನು ಎತ್ತಿ ಸಾರಿಸುತ್ತಿದ್ದೆವು. ಸಾಯಂಕಾಲದ ಹೊತ್ತಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ಕೊಟ್ಟು ಕಳುಹಿಸಿಕೊಡುತ್ತಿದ್ದೆವು. ಬಹುಶ: ಈ ವಿಧಿಗಳು ನನ್ನಲ್ಲಿ ರೈತನಾಗುವ ಆಸೆಗೆ ಪ್ರೇರಿತವಾಗಿರಬೇಕು.
ನನ್ನ ಕಾಲೇಜು ವಿದ್ಯಾಭ್ಯಾಸ ಎಲ್ಲಾ ಮುಗಿಯುವ ವೇಳೆಗೆ ನಮ್ಮ ಅಜ್ಜ ಜಮೀನುಗಳನ್ನೆಲ್ಲಾ ಮಾರಿ ಪೂರ್ಣ ಪಟ್ಟಣವಾಸಿಗಳಾಗಿದ್ದೆವು.
ವರುಷಗಳು ಉರುಳಿದವು. 1970ರಲ್ಲಿ ಕುಮಾರಿ ಶಕುಂತಳರಾವ್ ಅವರ ಜತೆ ವಿವಾಹವಾಯಿತು. ಆಕೆ ಎಂ ಎ ಪದವೀಧರೆ. ಮಹಾರಾಣಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ನಾನು ಹೈಸ್ಕೂಲ್ ಶಿಕ್ಷಖನಾಗಿದ್ದೆ. ಇಬ್ಬರೂ ಕೆಲಸವನ್ನು ಬಿಟ್ಟು ನಮ್ಮ ಸ್ವಂತ ವಿದ್ಯಾಸಂಸ್ಥೆ ಶ್ರೀ ರಾವ್ ಟ್ಯುಟೋರಿಯಲ್ಸ್ ಸ್ಥಾಪಿಸಿದೆವು. ಆಕೆಯ ಶ್ರಮ, ಚೈತನ್ಯ ಆರ್ಥಿಕವಾಗಿ ಸುಧಾರಿಸಿದೆವು. ಆಗ ನನ್ನ ಚಿಕ್ಕಂದಿನ ಆಸೆ - ಜಮೀನು ಕೊಳ್ಳುವುದು ಪುನ: ಗರಿಕೆದರಿತು. ನನ್ನ ಶ್ರೀಮತಿಯವರೂ ಬಾಲ್ಯದಲ್ಲಿ ಹಳ್ಳಿಗಳಲ್ಲಿ ಬೆಳೆದವರು. ಅವರ ತಾಯಿತಂದೆಯ ಕಡೆಯವರು ಕೃಷಿಕರಾಗಿದ್ದವರು. ಆಕೆಗೆ ಕೃಷಿ ವಿಧಾನಗಳು ಚೆನ್ನಾಗಿ ಗೊತ್ತಿತ್ತು. ಇಬ್ಬರ ಆಸೆಯೂ ಅದೇ ಆಗಿತ್ತು.
1980ರಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣದ ಸಮೀಪ ನಾಲ್ಕೂವರೆ ಎಕರೆ ಭೂಮಿ ಕೊಂಡೆವು. ಕೆಲವು ವರ್ಷಗಳ ತನಕ ರೂಢಿಸಲಾಗಲಿಲ್ಲ. ನನ್ನ ಶ್ರೀಮತಿಯವರು ಮೂಲ ಜನತಾಪಕ್ಷದ ಮಹಿಳಾ ವಿಭಾಗದ ಅಧ್ಯಕ್ಷರಾಗಿದ್ದರು. 10 ವರ್ಷಗಳ ಕಾಲ ಮೈಸೂರು ನಗರ ಪಾಲಿಕೆ ಸದಸ್ಯೆ ಆಗಿದ್ದರು. ನಾನು ವಿದ್ಯಾಸಂಸ್ಥೆಯ ಕಡೆಗೆ ಹೆಚ್ಚು ಗಮನ ಸಮಯ ಕೊಡಬೇಕಾಯಿತು.
1990ರಿಂದ ತೀವ್ರಗತಿಯಲ್ಲಿ ಜಮೀನು ಅಭಿವೃದ್ಧಿಪಡಿಸಿದೆವು. ಪ್ರಾರಂಭದಿಂದಲೂ ಪೂರ್ಣ ಸಾವಯವ ಪದ್ದತಿಯನ್ನೇ ಅನುಸರಿಸುತ್ತಾ ಬಂದಿದ್ದೇವೆ. ಕಾರಣ ನಾನು 1960ರಲ್ಲಿ ರೀಡರ್ಸ್ ಡೈಜೆಸ್ಟ್ ಮ್ಯಾಗಜಿನ್ನಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗುವ ಅಪಾಯಗಳು ಎಂಬ ಲೇಖನ. ಈ ವಿಜ್ಞಾನಿ ಲೇಖಕನ ಅಂದಾಜಿನಂತೆ ರಾಸಾಯನಿಕ ಗೊಬ್ಬರಗಳ ಬಳಕೆ ಮುಂದುವರಿದಲ್ಲಿ 100 ವರ್ಷಗಳ ಒಳಗೆ ಭೂಮಿ ಪೂರ್ಣ ಬರಡಾಗುವುದು. ಜೊತೆಗೆ ಸಾವಯವ ಕೃಷಿಯಲ್ಲಿ ಆಗಲೇ ಪಳಗಿದ್ದ ಮಿತ್ರರಾದ ಶ್ರೀ ಎ ಪಿ ಚಂದ್ರಶೇಖರ್ ಮತ್ತು ಶ್ರೀ ರಮೇಶ್ ಕಿಕ್ಕೇರಿಯವರ ಪ್ರೋತ್ಸಾಹ ಬೆಂಬಲ ಸಹಕಾರಿಯಾದವು.
3 ವರ್ಷಗಳ ಹಿಂದೆ ನಮ್ಮ ಜಮೀನು ಮಂಡಕಳ್ಳಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ವಶ ಪಡಿಸಿಕೊಳ್ಳಲಾಯಿತು
. 120 ತೆಂಗಿನ ಮರಗಳು, 20 ಮಾವಿನ ಮರಗಳು ಎಲ್ಲಾ ಬಗೆಯ ಹಣ್ಣಿನ ಮರಗಳು (1-2 ಮಾತ್ರ), 200ಕ್ಕೂ ಹೆಚ್ಚು ತೇಗದ ಮರಗಳು, ಗ್ರಾಮೀಣ ಮಾದರಿ ಮನೆ ಎಲ್ಲಾ ಇದ್ದವು. ಅಂತರ ಬೆಳೆಯಾಗಿ ಬಾಳೆ ಬೆಳೆಯುತ್ತಿದ್ದೆವು. ಆಹಾರ ಧಾನ್ಯಗಳನ್ನು ಬೆಳೆಯುತ್ತಿರಲಿಲ್ಲ.
2006ರ ಮಾರ್ಚ್ ನಲ್ಲಿ ಈಗಿರುವ ನಂಜನಗೂಡು ಸಮೀಪದ ಚಿನ್ನದಗುಡಿಹುಂಡಿ ಜಮೀನನ್ನು ಕೊಂಡುಕೊಂಡೆವು. ಜಮೀನಿನ ವಿಸ್ತೀರ್ಣ 8 ಎಕರೆ. ನಂಜನಗೂಡು - ಚಾಮರಾಜನಗರ ಮುಖ್ಯ ರಸ್ತೆಯ ಪಕ್ಕದಲ್ಲಿ ಚಿನ್ನದಗುಡಿಹುಂಡಿ ರೈಲ್ವೆ ನಿಲ್ದಾಣದ ಎದುರು ಇದೆ. ಕೊಳ್ಳುವಾಗಲೇ ಸುತ್ತಲೂ ಜೀವಂತ ಬೇಲಿ ಮತ್ತು ಕೊಳವೆ ಬಾವಿ ಇತ್ತು. ಸುಮಾರು 300 ಅಡಿಕೆ ಮರಗಳಿತ್ತು. ಅಷ್ಟು ಉತ್ತಮವಾಗಿರಲಿಲ್ಲ. ಅವುಗಳನ್ನು ತೆಗೆದು ಕೃಷಿ ಮತ್ತು ತೋಟಕ್ಕೆ ಭೂಮಿಯನ್ನು ಸಿದ್ಧಪಡಿಸಲಾಯಿತು.
2006 ಡಿಸೆಂಬರ್ ನಮ್ಮ ಕುಟುಂಬಕ್ಕೆ ಉತ್ತಯಂತ ದುಖ:ದ ದಿನ. ಶ್ರೀಮತಿ ಶಕುಂತಲಾರಾವ್ (ನನ್ನ ಸರ್ವಸ್ವ) ಚಿರಶಾಂತಿ ಪಡೆದರು. ಅವರ ಸ್ಮರಣಾರ್ಥ 2 ಪ್ರತಿಷ್ಠಾನಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಒಂದು :ಶಕುಂತಲಾರಾವ್ ಸ್ಮಾರಕ ಕೃಷಿ ಉತ್ಥಾನ ಪ್ರತಿಷ್ಠಾನ.ಟ್ರಸ್ಟಿನ ಮುಖ್ಯ ಉದ್ದೇಶ ನಮ್ಮ ಪೂರ್ವಜರು ಸಾಧಿಸಿದ ಸುಸ್ಥಿರ ವ್ಯವಸಾಯ ಪದ್ದತಿಗಳನ್ನು (ಸಾವಯವ / ನೈಸರ್ಗಿಕ ) ಪುನ: ಜಾರಿಗೆ ತರುವುದು. ಇದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಟ್ರಸ್ಟಿನ ಕಾರ್ಯಕ್ರಮಗಳು (ಪ್ರಾತ್ಯಕ್ಷಿಕೆಗಳೂ ಸೇರಿ) ಸಸ್ಯಶಾಮಲ ತೋಟದಲ್ಲಿ ನಡೆಸಲಾಗುತ್ತಿದೆ. 100 ಜನರು ಕೂಡಬಹುದಾದ ಸಭಾಮಂಟಪ ಕುಡಿಯುವ ನೀರಿನ ಸೌಕರ್ಯವಿದೆ.
ಟ್ರಸ್ಟಿನ ಉದ್ಘಾಟನೆಯನ್ನು ಕರ್ನಾಟಕ ಸಾವಯವ ಕೃಷಿ ಆಯೋಗದ ಅಧ್ಯಕ್ಷರಾದ ಶ್ರೀ ಎ ಎಸ್ ಆನಂದ್ ರವರು 9.11.2008ರಂದು ನೆರವೇರಿಸಿದರು. ಶ್ರೀ ಆರ್ ಬಾಲಸುಬ್ರಹ್ಮಣ್ಯಂ, ಸಂಸ್ಥಾಪಕರು, ವಿವೇಕಾನಂದ ಯೂತ್ ಮೂವ್ ಮೆಂಟ್ ಸರಗೂರು ಮತ್ತು ಶ್ರೀ ವಿಷಕಂಠ, ಜಂಟಿ ಕೃಷಿ ನಿರ್ದೇಶಕ ಅತಿಥಿಗಳಾಗಿ ಆಗಮಿಸಿ ಮಾರ್ಗದರ್ಶನ ಮಾಡಿದರು.
31.5.2009ರಂದು ಆರೋಗ್ಯಕ್ಕೆ ತೃಣ ಧಾನ್ಯಗಳು ಕಾರ್ಯಗಾರ ವನ್ನು ಎನ್ ಐ ಇ ಮೈಸೂರು ಸಭಾಂಗಣದಲ್ಲಿ ಎನ್ ಐ ಇ ಮತ್ತು ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರ ಸಹಕಾರದಿಂದ ನಡೆಸಲಾಯಿತು. ಡಾ: ರಮಾ ಕೆ ನಾಯಕ್, ಡೀನ್, ಕೃಷಿ ವಿಶ್ವವಿದ್ಯಾಲಯ, ಧಾರವಾಡ ನಡೆಸಿಕೊಟ್ಟರು. ಡಾ: ಸಿ ದೊರೆಸ್ವಾಮಿ, ಜಂಟಿ ನಿರ್ದೇಶಕರು , ಕೃಷಿ ವಿಜ್ಞಾನ ಕೇಂದ್ರ, ಚಾಮರಾಜನಗರ ಮುಖ್ಯ ಅತಿಥಿಗಳಾಗಿದ್ದರು.
ಸಸ್ಯಶಾಮಲ ತೋಟವನ್ನು ಸಾವಯವ ಕೃಷಿಯ ಮಾದರಿ ಶೈಕ್ಷಣಿಕ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಮಾದರಿ ಸಣ್ಣ ಮನೆಗಳು, ಕೊಟ್ಟಿಗೆ ಕಟ್ಟಲಾಗಿದೆ. ನಾಡಹಸುಗಳನ್ನು ಸಾಕಲಾಗಿದೆ. ಸಭಾಮಂಟಪ, ಎರೆಹುಳು ತೊಟ್ಟಿ, ಕೃಷಿ ಹೊಂಡ (ಶ್ರೀ ತಿಮ್ಮರಾಜು, ಕೃಷಿ ಅಧಿಕಾರಿ, ಜಲಾನಯನ ಇಲಾಖೆ, ನಂಜನಗೂಡು ಇವರ ಸಹಕಾರ) ನಿರ್ಮಿಸ ಲಾಗಿದೆ .
ತಾ: 26.10.2009 ಸೋಮವಾರ ಸಸ್ಯ ಶಾಮಲ ದಲ್ಲಿ ಬಾನುಲಿ ಬೆಳಗು ಕೃಷಿ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಟ್ಟ ಸಂಘಟಿಕರಿಗೆ ಧನ್ಯವಾದಗಳು.
-ಎಂ ಶ್ರೀಪಾದರಾವ್














No comments:

Post a Comment