Wednesday, January 6, 2010

ಸುಸ್ಥಿರ ಕೃಷಿ ಶಿಖರ ಶಿವಣ್ಣಗೌಡ

ಶಿವಣ್ಣಗೌಡರು ಮಿತ ಭಾಷಿ, ಮೃದು ಭಾಷಿ. ಮೈಸೂರು ಆಕಾಶವಾಣಿಯ 'ಬಾನುಲಿ ಕೃಷಿ ಬೆಳಗು' ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಜಮೀನಿನಲ್ಲೂ ಇಂತಹ ಕಾರ್ಯಕ್ರಮ ಮಾಡಿ ತಾನು ಮಾಡುತ್ತಿರುವ ಸುಸ್ಥಿರ ಬೇಸಾಯ ವಿಧಾನಗಳನ್ನು ಇತರ ರೈತರಿಗೆ ಪರಿಚಯಿಸುವ ಮಹದೋದ್ದೇಶ ಹೊತ್ತು ನನ್ನ ಬಳಿ ಬಂದಿದ್ದರು. ಅವರ ಮಾತು, ಸರಳ ಚಿಂತನೆ, ಕಾರ್ಯ ತತ್ಪರತೆ ಕಂಡು ನಾನೂ ಬೆರಗಾದೆ. ವ್ಯವಸಾಯದ ಮೂಲ ಉದ್ದೇಶವಾದರೂ ಏನು? ರೈತ ತನ್ನ ಜಮೀನಿನಲ್ಲಿ ತನಗೆ ಬೇಕಾದುದನ್ನೆಲ್ಲಾ ಬೆಳೆಯುವುದು ತಾನೆ? ಇದೇ 'ಸುಸ್ಥಿರ ಕೃಷಿ'. ತನಗೆ ಬೇಕಾದ್ದನ್ನೆಲ್ಲಾ ಬೆಳೆದು, ಮಾರುಕಟ್ಟೆಗಾಗಿ, ಆರ್ಥಿಕ ಸಬಲತೆಗಾಗಿ ಒಂದೆರಡು ವಾಣಿಜ್ಯ ಬೆಳೆ ಬೆಳೆದ್ರೆ ಮಾರುಕಟ್ಟೆ ಏರಿಳಿತಗಳು ರೈತನನ್ನು ಭಾಧಿಸೋಲ್ಲ. ವ್ಯವಸಾಯದ ಸುಸ್ಥಿರತೆಗೆ ಮಿಶ್ರ ಬೇಸಾಯದ ಚಿಂತನೆ ಸಹಕಾರಿ. ಶಿವಣ್ಣಗೌಡರೂ ಸಹ ಮಾಡುತ್ತಿರುವುದು ಇದನ್ನೇ. ಇವರ ಒಟ್ಟು ಕುಟುಂಬಕ್ಕಿರುವ ಜಮೀನು, ಆರು ಎಕರೆ ನೀರಾವರಿ ಹಾಗೂ 4 ಎಕರೆ ಖುಷ್ಕಿ ಮಾತ್ರ. ಇದರಲ್ಲಿ ಹತ್ತು ಜನರ ಜೀವನ ಸಾಗಬೇಕು. ಶಿವಣ್ಣಗೌಡರು ಜಮೀನಿನಲ್ಲಿ ಪೋಷಿಸಿರುವ ಜೀವ ವೈವಿಧ್ಯವಾದರೂ ಎಂತಹುದು. ಒಂದು ಜತೆ ಎತ್ತು, ಮೂರು ಸೀಮೆ ಹಸು, ಮೂರು ಎಮ್ಮೆ, ಒಂದು ನಾಟಿ ಹಸು, ಹತ್ತಾರು ಕುರಿ, ನಾಟಿ ಕೋಳಿಗಳು, ಗೊಬ್ಬರಕ್ಕಾಗಿ ಎರೆಹುಳು ಸಾಕಣೆ, ಖುಷ್ಕಿಯಲ್ಲಿ ರಾಗಿ, ತೊಗರಿ, ಎಳ್ಳು, ಹರಳು, ಹುರುಳಿ, ಅಲಸಂದೆ, ಹಸಿಕಡಲೆ, ಅವರೆ, ಹುಚ್ಚೆಳ್ಳು, ಬಗೆಬಗೆಯ ಸೊಪ್ಪು, ತರಕಾರಿಗಳು, ನೀರಾವರಿಯಲ್ಲಿ ನಾಲ್ಕು ಎಕರೆ ಕಬ್ಬು, ಎರಡು ಎಕರೆ ಭತ್ತ, ಮನೆಗೆ ಬೇಕಾದ ಎಲ್ಲ ಜಾತಿಯ ಮರಗಿಡಗಳು, ಹೆಸರಿಸುವುದಾದರೆ 22 ಆಲ, 30 ಹೊಂಗೆ, 700 ಅಕೇಶಿಯ, 50 ತೆಂಗು, 70 ತೇಗ, 16 ಸಿಲ್ವರ್, 20 ಸವರ್ೆ ಮರ, 25 ಬೇವಿನ ಮರಗಳು, 60 ನೀಲಗಿರಿ, 10 ಬುಗರಿ ಮರ, 5 ಜಂಬುನೇರಳೆ ಮರ, 6 ಅಡಿಕೆ, 2 ಬಾಗೆ, 2 ಗೊಬ್ಬಳಿ, 5 ಬಿದಿರು ಮೆಳೆ, 2 ಮರ ಹತ್ತಿ, ಒಂದು ಬಸಲಿ ಮರ, 3 ಹಲಸು, 3 ಮಾವು, 2 ಸಪೋಟ, 5 ಹುಣಸೆ, ಒಂದು ಸೀಗೆ ಮೆಳೆ, 4 ಪಪ್ಪಾಯ, 20 ಬಾಳೆ ಗಿಡಗಳು, 2 ಅರಳಿ, 6ನೀರಂಜ ಒಟ್ಟು 775 ಮರಗಿಡಗಳು ಇವರ ಸುಸ್ಥಿರ ಕೃಷಿ ಬದುಕಿಗೆ ಸಾಕ್ಷಿಯಾಗಿ ನಿಂತಿವೆ. ಇದಲ್ಲವಾ ಬೆಳೆ ವೈವಿಧ್ಯತೆ. ಬರೀ ಭತ್ತ, ಕಬ್ಬು ಬೆಳೆಯುವ ಮಂಡ್ಯದಲ್ಲಿ ಶಿವಣ್ಣಗೌಡರು ವಿಭಿನ್ನವಾಗಿ ನಿಲ್ಲುತ್ತಾರೆ. ಹೆಚ್ಚು ಆಪ್ತರಾಗುತ್ತಾರೆ. ನೆಲಮುಟ್ಟಿ ದುಡಿಯುವ ಗೌಡರ ವ್ಯಕ್ತಿತ್ವ ಇಷ್ಟವಾಗುತ್ತೆ.
ಕಬ್ಬಿನ ಬೇಸಾಯದಲ್ಲಿ ಹೊಸ ಪ್ರಯೋಗಗಳನ್ನು ಶಿವಣ್ಣಗೌಡರು ಮಾಡಿದ್ದಾರೆ. ಹಿಂಗಾರಿನಲ್ಲಿ ಕಬ್ಬಿನೊಳಗೆ ಹಸಿಕಡಲೆ ಬೆಳೆದು ಯಶಸ್ವಿಯಾಗಿದ್ದಾರೆ. ಕಬ್ಬಿನ ತರಗು ಸುಡದೆ, ಕತಾಳೆ ಕಬ್ಬಿನ ಬೇಸಾಯ ಮಾಡಿದ್ದಾರೆ. ರಾಸಾಯನಿಕಗಳ ಬಳಕೆ ಮಿತಗೊಳಿಸಿದ್ದಾರೆ. 60 ರಿಂದ 65 ಟನ್ ಸರಾಸರಿ ಇಳುವರಿ ಪಡೆಯುತ್ತಿದ್ದಾರೆ.
ಆಕಾಶವಾಣಿ ಕಾರ್ಯಕ್ರಮಗಳನ್ನು ಕೇಳಿ ಸಾವಯವ ಬೇಸಾಯದತ್ತ ವಾಲಿರುವ ಶಿವಣ್ಣಗೌಡರು ಈಗ ಒಂದು ಎಕರೇಲಿ ಸಾವಯವ ಬೇಸಾಯ ವಿಧಾನದಲ್ಲಿ ನಾಟಿತಳಿ 'ರತ್ನಚೂಡಿ' ಭತ್ತವನ್ನು ಬೆಳೆದಿದ್ದಾರೆ. ಜಮೀನಿಗೆ ಹಟ್ಟಿಗೊಬ್ಬರ, ಎರೆಗೊಬ್ಬರ ಹಾಕಿ, ಹಸಿರೆಲೆ ಗೊಬ್ಬರವನ್ನೂ ಹಾಕಿ, ಸ್ಥಳೀಯ ತಳಿ 'ರತ್ನಚೂಡಿ' ಭತ್ತವನ್ನು ಒಟ್ಲು ಹಾಕಿ, ಸಸಿ ಏಳಿಸಿಕೊಂಡು ನಾಟಿ ಮಾಡಿದಾಗ ಗೌಡರಿಗೆ ತೊಂದರೆಕೊಟ್ಟಿದ್ದು ಭತ್ತದ ಸುಳಿಕೊರಕ ಕೀಟ.
ಸಾವಯವದಲ್ಲಿ ಭತ್ತ ಬೆಳೀತಿರೋರು ಕೀಟನಾಶಕ ಬಳಸುವಂತಿಲ್ಲ. ಬೇವಿನ ಕಷಾಯಕ್ಕೆ ಕೀಟ ಬಗ್ಗುತ್ತಿಲ್ಲ. ಆಗ ಮಂಡ್ಯದ ಪರತಂತ್ರಜೀವಿ ಪ್ರಯೋಗಾಲಯಕ್ಕೆ ಹೋಗಿ ಅಲ್ಲಿಂದ ಭತ್ತದ ಕಾಂಡಕೊರಕ ಕೀಟಕ್ಕೆ ಪರಭಕ್ಷಕ ಕೀಟಗಳನ್ನು ತಂದು, ಭತ್ತದ ಗದ್ದೆಯಲ್ಲಿ ಮೂರು ಬಾರಿ ಬಿಟ್ಟು, ಸುಳಿಕೊರಕ ಕೀಟವನ್ನು ನಿಯಂತ್ರಿಸಿದ್ದಾರೆ. ಸಮಗ್ರ ಪೀಡೆ ನಿರ್ವಹಣೆ ಕಲೆಯನ್ನು ಶಿವಣ್ಣಗೌಡರು ಕರಗತ ಮಾಡಿಕೊಂಡಿದ್ದಾರೆ. ಸಾವಯವ ಬೇಸಾಯದಲ್ಲಿ ಭತ್ತ ಬೆಳೆದ್ರೆ ಜಳ್ಳು ಕಡಿಮೆ, ಅಕ್ಕಿಯ ಇಳುವರಿ ಜಾಸ್ತಿ, ರುಚಿಯೂ ಸೊಗಸು ಅನ್ನುವುದು ಶಿವಣ್ಣಗೌಡರ ವಿಚಾರ.





ತಂದೆ ದೊಡ್ಡಕರಿಗೌಡ ಹಾಗೂ ತಾಯಿ ಮಾದಮ್ಮನವರನ್ನು ಕಂಡರೆ ಶಿವಣ್ಣಗೌಡರಿಗೆ ಬಲು ಪ್ರೀತಿ. ತಂದೆ ಕರಿಗೌಡರು ಎತ್ತುಗಳನ್ನು ಪ್ರೀತಿಯಿಂದ ಸಾಕಿರುವುದನ್ನು ಹೆಮ್ಮೆಯಿಂದ ಹೇಳ್ತಾರೆ. ಎತ್ತನ್ನ ಎಲ್ಲೋ ಕೊಟ್ಟಿಗೇಲಿ ಕಟ್ಟಿ ನಾವಿಲ್ಲಿ ಹಾಸಿಗೇಲಿ ಸುಖವಾಗಿ ಮಗಲಬಾರದು. ಅವೂ ನಮ್ಮ ಜತೇನೇ ಇರಬೇಕು ಅಂತ ತಂದೆ ಹೇಳ್ತಿರ್ತಾರೆ. ಹಾಗೇ ಅವರೂ ಸಹ. ತಮ್ಮ ಜತೆಯಲ್ಲಿಯೇ ರಾತ್ರಿಯ ವೇಳೆ ರಾಸುಗಳನ್ನು ಇಟ್ಟುಕೊಂಡಿರ್ತಾರೆ ಅಂತ ಅಭಿಮಾನಪೂರ್ವಕವಾಗಿ ನುಡಿಯುತ್ತಾರೆ. ಇಳಿ ವಯಸ್ಸಿನಲ್ಲೂ ಜಮೀನಿಗೆ ಬಂದು ಕೆಲಸ ಮಾಡುವ ತಾಯಿ ಮಾದಮ್ಮನವರನ್ನು ಕಂಡರೆ ಗೌಡರಿಗೆ ಅಕ್ಕರೆ. ಶಿವಣ್ಣಗೌಡರ ಜತೆ ಜೋಡೆತ್ತಿನ ಸಂಸಾರದ ನೊಗಕ್ಕೆ ಹೆಗಲುಕೊಟ್ಟಿರುವುದು ಪತ್ನಿ ಪ್ರಭಾವತಿ. ಪ್ರಭಾವತಿ ಅವರೂ ಗಂಡನ ಜತೆಜತೆಗೇ ದುಡಿದು ಕುಟುಂಬ ಕಟ್ಟಿದ್ದಾರೆ. ಅಣ್ಣ, ಅತ್ತಿಗೆ, ಅವರ ಎರಡು ಮಕ್ಕಳು, ತಮ್ಮ ಎರಡು ಮಕ್ಕಳು, ತಂದೆ ತಾಯಿ ಜತೆಗೂಡಿದ ಕೂಡು ಕುಟುಂಬ ಶಿವಣ್ಣ ಗೌಡರದ್ದು. ವ್ಯವಸಾಯಕ್ಕೆ ಒಟ್ಟು ಕುಟುಂಬಗಳು ಪೂರಕ ಎನ್ನುವ ಮಾತನ್ನು ಶಿವಣ್ಣಗೌಡರಂತಹ ಕುಟುಂಬ ನೋಡಿಯೇ ಹೇಳಿರಬೇಕು.
ಮಕ್ಕಳಲ್ಲಿ ವ್ಯವಸಾಯದ ಬಗೆಗಿನ ಪ್ರೀತಿಯನ್ನೂ ಈಗಿನಿಂದಲೇ ತುಂಬುತ್ತಿದ್ದಾರೆ ಗೌಡರು. ರಜಾದಿನಗಳಲ್ಲಿ ಮಕ್ಕಳನ್ನೂ ಸಹ ಜಮೀನಿಗೆ ದುಡಿಯಲು ಕರೆದುಕೊಂಡು ಹೋಗ್ತಾರೆ ಗೌಡರು. ಎರೆಹುಳು ಸಾಕಣೆ, ಕೊಟ್ಟಿಗೆ ನಿರ್ವಹಣೆಯಲ್ಲಿ ಮಕ್ಕಳ ಪಾಲುಂಟು.
'ತೊಗರಿ ಬೇಸಾಯ' ಗೌಡರ ಅಚ್ಚುಮೆಚ್ಚಿನ ಆರಂಭ. ತೊಗರಿಯಲ್ಲಿ ಕೂಳೆ ಬೆಳೆದೂ ಸಹ ಶಿವಣ್ಣಗೌಡರು ಯಶಸ್ವಿಯಾಗಿದ್ದಾರೆ.
ಬಿಆರ್ಜಿ - 1, ಬಿಆರ್ಜಿ-2, ಹೈದರಾಬಾದ್ 3 ಸಿ ತೊಗರಿ ತಳಿಯನ್ನು ತಮ್ಮ ಜಮೀನಿನಲ್ಲಿ ಬೆಳೆದಿದ್ದಾರೆ. ಅಧಿಕ ಇಳುವರಿ ಪಡೆದಿದ್ದಾರೆ. ತೊಗರಿಯನ್ನು ಬೇಳೆ ಮಾಡಿ ಮಾರುವ ಇರಾದೆ ಗೌಡರಿಗಿದೆ.ಶಿವಣ್ಣಗೌಡರದ್ದು ಸಂತೃಪ್ತ ಕೃಷಿ ಬದುಕು. ತನಗೆ ಬೇಕಾದ್ದನ್ನು ಎಲ್ಲವನ್ನೂ ತಾನು ಬೆಳೆಯುತ್ತಿದ್ದೇನೆಂಬ ಹೆಮ್ಮೆ ಶಿವಣ್ಣಗೌಡರಿಗಿದೆ. ವ್ಯವಸಾಯದಲ್ಲಿ ತೃಪ್ತಿ, ನೆಮ್ಮದಿ ಕಂಡಿದ್ದಾರೆ. ಈ ರೀತಿಯ ಸಂತೃಪ್ತಿ ಎಷ್ಟು ಜನ ರೈತರಿಗಿದೆ! ಸಂತೃಪ್ತ, ಸುಸ್ಥಿರ ಕೃಷಿಗೆ ಶಿಖರಪ್ರಾಯವಾಗಿರುವ ಶಿವಣ್ಣಗೌಡರ ಕೃಷಿ ಬದುಕಿನಿಂದ ಇತರರು ಕಲಿಯುವುದು ಬಹಳ ಇದೆ. ಕೃಷಿಯಲ್ಲಿ ಸಾಧಿಸುವವನಿಗೆ ಶಿವಣ್ಣಗೌಡರು ಆದರ್ಶ ಆಗಬಲ್ಲರು ಎಂಬುದು ನನ್ನ ಅನಿಸಿಕೆ. ನಮಸ್ಕಾರ !
ಲೇಖನ - ಎನ್ .ಕೇಶವಮೂರ್ತಿ
ಪ್ರಸಾರ ನಿವಾಹಕರು (ಕೃಷಿ)
ಆಕಾಶವಾಣಿ, ಮೈಸೂರು

No comments:

Post a Comment