Wednesday, January 6, 2010


ಸಾಧಕರಿಗೆ ಸನ್ಮಾನ - ಬಹುಮಾನ ವಿತರಣೆ
ರೈತ ದಿನ - ಅರ್ಥಪೂರ್ಣ ಆಚರಣೆ
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ, ಕೃಷಿ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಕೃಷಿ ಕ್ಷೇತ್ರದ ಇತ್ತೀಚಿನ ಮಾಹಿತಿ ನೀಡುವ ಮೂಲಕ ರೈತರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೈಸೂರು ಜಿಲ್ಲಾ ಪಂಚಾಯತ್ನ ಕೃಷಿ, ತೋಟಗಾರಿಕೆ, ಜಲಾನಯನ ಅಭಿವೃದ್ಧಿ, ರೇಷ್ಮೆ, ಪಶುಪಾಲನೆ ಮತ್ತು ಮೀನುಗಾರಿಕೆ, ವಾರ್ತಾ ಇಲಾಖೆ ಹಾಗೂ ಆಕಾಶವಾಣಿ, ಮೈಸೂರು ಸಹಯೋಗದೊಡನೆ ಜೆ.ಎಸ್.ಎಸ್. ಅಂಗವಿಕಲರ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ರೈತ ದಿನ ಆಚರಿಸಲಾಯಿತು.
ಬಾನುಲಿ ಕೃಷಿ ಪ್ರಶಸ್ತಿ ಪಡೆದ ಹನುಮನಹಳ್ಳಿ ಇಂದಿರಮ್ಮ, ಕೃಷಿ ವಿಶ್ವವಿದ್ಯಾನಿಲಯದಿಂದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ಪಡೆದ ನಂಜನಗೂಡು ತಾಲ್ಲೂಕು ಸಿಂಧುವಳ್ಳಿ ಗ್ರಾಮದ ಶ್ರೀಮತಿ ರಾಜೇಶ್ವರಿ, ಕೃಷಿ ವಿ.ವಿ. ಅತ್ಯುತ್ತಮ ರೈತ ಪ್ರಶಸ್ತಿ ಪಡೆದ ನಂಜನಗೂಡು ತಾಲ್ಲೂಕು ಮುದ್ದಹಳ್ಳಿ ನವಿಲೂರು ಗ್ರಾಮದ ಚಿಕ್ಕದೇವಯ್ಯ ಅವರುಗಳನ್ನು ಸನ್ಮಾನಿಸಲಾಯಿತು.
ಕೃಷಿ ಇಲಾಖೆ ಆಯೋಜಿಸಿದ್ದ ದ್ವಿದಳ ದೀಪ ರಸಪ್ರಶ್ನೆ ಸ್ಪರ್ದೆಯಲ್ಲಿ ವಿಜೇತರಾದ 30ಕ್ಕೂ ಹೆಚ್ಚು ರೈತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ: ಎನ್. ಮಂಜುಳಾ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವ ಮೂಲಕ ರೈತಪರ ಕಾರ್ಯಕ್ರಮಗಳನ್ನು ಗ್ರಾಮೀಣ ಜನರಿಗೆ ತಲುಪಿಸಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಮೂಲ ಸೌಲಭ್ಯ ಕಲ್ಪಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಕೃಷಿ ಹೊಂಡ ನಿರ್ಮಾಣವು ಸೇರಿದಂತೆ ಜಮೀನು ಸುಧಾರಣೆಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅವಕಾಶ ಇದೆ. ಸಾಮಗ್ರಿ ವೆಚ್ಚ ನೀಡುವುದೂ ಸೇರಿದಂತೆ ರೈತರು ತಮ್ಮ ಜಮೀನಿನಲ್ಲಿ ಮಾಡುವ ಕೆಲಸಕ್ಕೂ ಕೂಲಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಕೃಷಿ ವಿಜ್ಞಾನಿ ಡಾ ಅರಸು ಮಲ್ಲಯ್ಯ ಅವರು ಮಾತನಾಡಿ ಹವಾಮಾನ ವೈಪರೀತ್ಯದಿಂದ ಮಣ್ಣಿನ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದ್ದು, ಶೇ. 20 ರಿಂದ 40ರಷ್ಟು ಇಳುವರಿ ಕುಂಠಿತವಾಗುತ್ತಿದೆ. ರೈತರು ಸ್ವತ: ವಿಜ್ಞಾನಿಗಳಾಗುವ ಮೂಲಕ, ಪ್ರಯೋಗಶೀಲರಾಗುವ ಮೂಲಕ ಇಂತಹ ದುಷ್ಪರಿಣಾಮಗಳನ್ನು ನಿವಾರಿಸಿಕೊಳ್ಳಬೇಕು ಎಂದು ಹೇಳಿದರು.
ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀ ಜಯಣ್ಣ, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ: ರಾಘವ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ: ನಾಗರಾಜ್ ಅವರು ತೋಟಗಾರಿಕೆ ಮಾಹಿತಿ ನೀಡಿದರು. ರೇಷ್ಮೆ ಇಲಾಖೆ ಉಪನಿರ್ದೇಶಕ ಡಾ: ಚಿಗರಿ ತಮ್ಮ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು. ರೇಷ್ಮೆ ಕೃಷಿಗೆ ಸಂಬಂಧಿಸಿದ 15 ಕಾಮಗಾರಿಗಳನ್ನು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಹೇಳಿದರು.
ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾ 30ಕ್ಕೂ ಹೆಚ್ಚು ದೇಶಿ ಭತ್ತದ ತಳಿ ಸಂರಕ್ಷಣೆ ಮಾಡಿರುವ ಕೃಷಿಕ ಟಿ. ನರಸೀಪುರ ತಾಲ್ಲೂಕು ಸಿದ್ದನಹುಂಡಿ ಗ್ರಾಮದ ಶ್ರೀ ಶ್ರೀನಿವಾಸ ಮೂರ್ತಿ ತಮ್ಮ ಕೃಷಿ ಅನುಭವ ಹಂಚಿಕೊಂಡರು. ಬಿತ್ತನೆ ಬೀಜಗಳಿಗೆ ಬಹುರಾಷ್ಟ್ರೀಯ ಕಂಪನಿಗಳನ್ನು ಅವಲಂಬಿಸುವ ಬದಲಿಗೆ ಸ್ವಾವಲಂಬನೆ ಸಾಧಿಸಿ, ಅಪರೂಪದ ತಳಿಗಳನ್ನು ಸಂರಕ್ಷಿಸಿಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯತ್ನ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಡಿ. ರವಿಶಂಕರ್, ಜಿಲ್ಲಾ ಪಂಚಾಯತ್ ಸದಸ್ಯ ಚೋಳರಾಜು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ: ವಿಷಕಂಠ ಸ್ವಾಗತಿಸಿದರು. ವಾರ್ತಾ ಇಲಾಖೆ ಉಪನಿರ್ದೇಶಕ ಶ್ರೀ .ಆರ್. ಪ್ರಕಾಶ್, ಆಕಾಶವಾಣಿ ಪ್ರಸಾರ ನಿರ್ವಾಹಕ ಶ್ರೀ ಕೇಶವಮೂರ್ತಿ ಉಪಸ್ಥಿತರಿದ್ದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀ ಸೋಮಶೇಖರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಕೃಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

No comments:

Post a Comment