Wednesday, January 6, 2010

ಕೃಷಿ ಉದ್ಯಮಶೀಲತಾ ಕಾರ್ಯಗಾರ

ಕೃಷಿಕರು ಉದ್ಯಮಶೀಲರಾಗುವ ಮೂಲಕ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ವಿಜಯಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಶ್ರೀ ನಾಗೇಶ್ವರರಾವ್ ಹೇಳಿದರು.
ಮಂಡ್ಯದ ವಿಜಯಾ ಬ್ಯಾಂಕ್ ಸ್ವ ಉದ್ಯೋಗಿ ತರಬೇತಿ ಸಂಸ್ಥೆ, ಮೈಸೂರು ಆಕಾಶವಾಣಿ, ವಿಕಸನ ಗ್ರಾಮೀಣಾಭಿವೃದ್ಧಿ ಸಂಸ್ಥೆ, ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಹಾಗೂ ಬಾನುಲಿ ಕೃಷಿಕರ ಬಳಗದ ಸಂಯುಕ್ತಾಶ್ರಯದಲ್ಲಿ ಮಂಡ್ಯದಲ್ಲಿ ಏರ್ಪಡಿಸಿರುವ ಐದು ದಿನಗಳ ಕೃಷಿ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರೈತ ಸಮುದಾಯ, ಸಾಂಪ್ರದಾಯಿಕ ಕೃಷಿ ಜೊತೆಗೆ ಹೊಸ ಆಲೋಚನಾ ವಿಧಾನ ರೂಢಿಸಿಕೊಳ್ಳಬೇಕು. ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ತಾವು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆದುಕೊಳ್ಳಬೇಕು. ಮಾರುಕಟ್ಟೆ ಅವಕಾಶಗಳ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಕೃಷಿಯಲ್ಲಿ ಉದ್ಯಮಶೀಲತೆ ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಇಂದಿನ ದಿನಗಳಲ್ಲಿ ಅತೀ ಅವಶ್ಯ. ಬೆಲೆ ಕುಸಿತದ ದಿನಗಳಲ್ಲಿ ಪರ್ಯಾಯ ಮಾರುಕಟ್ಟೆ ಬಗ್ಗೆ ಆಲೋಚಿಸಬೇಕು. ಹತಾಶ ಮಾರಾಟಕ್ಕೆ ಮೊರೆ ಹೋಗದೆ, ಮಾರುಕಟ್ಟೆ ತಂತ್ರಗಳನ್ನು ಅರಿತು, ಅಳವಡಿಸಿಕೊಳ್ಳುವ ಮೂಲಕ ತಮ್ಮ ಉತ್ಪನ್ನಗಳಿಗೆ ಯೋಗ್ಯ ಬೆಲೆ ಪಡೆಯಬೇಕು. ಈ ನಿಟ್ಟಿನಲ್ಲಿ ಕಾರ್ಯಗಾರ ಏರ್ಪಡಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶ್ರೀ ನಾಗೇಶ್ವರರಾವ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಬಾರ್ಡ್ ವ್ಯವಸ್ಥಾಪಕ ಟಿ. ರಾಮಸ್ವಾಮಿ ಅವರು ಮಾತನಾಡಿ ನಬಾರ್ಡ್ ವತಿಯಿಂದ ರಾಷ್ಟ್ರದಲ್ಲಿ 34 ಸಾವಿರ ರೈತರ ಕೂಟಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ರಾಜ್ಯದಲ್ಲಿ 3 ಸಾವಿರ ರೈತಕೂಟಗಳು ಇದ್ದು, ಮಂಡ್ಯ ಜಿಲ್ಲೆಯಲ್ಲಿ 82 ಕೂಟಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕೂಟಗಳ ಮೂಲಕ ಕೃಷಿ ಅಭಿವೃದ್ಧಿಗೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಗ್ರಾಮೀಣ ಅವಿಷ್ಕಾರ ನಿಧಿ ಸ್ಥಾಪಿಸುವ ಮೂಲಕ ನಬಾರ್ಡ್ ಹೊಸದಾಗಿ ಉದ್ಯಮ ಆರಂಭಿಸುವವರಿಗೆ ನೆರವು ನೀಡುತ್ತಿದೆ ಎಂದು ಶ್ರೀ ರಾಮಸ್ವಾಮಿ ಹೇಳಿದರು.
ರೈತರು ವಿಜ್ಞಾನಿ, ವ್ಯಾಪಾರಿ ಎಲ್ಲವೂ ಆಗುವ ಮೂಲಕ ಕೃಷಿ ಕ್ಷೇತ್ರಕ್ಕೆ ಚೈತನ್ಯ ನೀಡಬೇಕು. ಕೃಷಿ ಲಾಭದಾಯಕ ಉದ್ದಿಮೆ ಆಗುವಂತೆ ಮಾಡಲು ರೈತರಿಗೆ ಇಂತಹ ಕಾರ್ಯಗಾರ ಗಳ ಮೂಲಕ ಪ್ರೇರಣೆ ನೀಡಬೇಕಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ರಾವ್ ಅಭಿಪ್ರಾಯಪಟ್ಟರು.
ವಿಕಸನ ಸಂಸ್ಥೆಯ ಮಹೇಶ್ಚಂದ್ರ ಗುರು, ಆಕಾಶವಾಣಿ ಕಾರ್ಯಕ್ರಮಗಳ ನಿರ್ವಾಹಕ ಶ್ರೀ ವಿ.ಮಾ. ಜಗದೀಶ್, ವಾರ್ತಾ ಇಲಾಖೆ ಉಪನಿರ್ದೇಶಕ ಶ್ರೀ ಎ.ಆರ್. ಪ್ರಕಾಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಜಯಾಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಶ್ರೀ ಬಾಲಸುಬ್ರಹ್ಮಣ್ಯಂ ಸ್ವಾಗತಿಸಿದರು. ಆಕಾಶವಾಣಿ ಮೈಸೂರು ಪ್ರಸಾರ ನಿರ್ವಾಹಕ ಶ್ರೀ ಎಸ್. ಕೇಶವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ 5 ದಿನಗಳ ಶಿಬಿರದ ಉದ್ದೇಶ ವಿವರಿಸಿದರು. ಕೃಷಿಕ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು. ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಮತ್ತಿತರ ಜಿಲ್ಲೆಗಳ ನಲವತ್ತಕ್ಕೂ ಹೆಚ್ಚು ರೈತರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು .










No comments:

Post a Comment