Tuesday, February 16, 2010

ಬೇಸಾಯಕ್ಕೊಬ್ಬನೇ ಬಸಪ್ಪ

ನನ್ನ ಹಸುವಿನ ಒಂದು ಲೀಟರ್ ಗಂಜಲಾನ ಒಂದು ತೊಲ ಚಿನ್ನ ಕೊಡ್ತೀನಂದ್ರೂ ಕೊಡೋಲ್ಲ '' ಅಂತ ದೃಢವಾಗಿ ನುಡಿಯುವ ಬಸಪ್ಪನನ್ನು ಕಂಡಾಗ ಒಂದು ಕ್ಷಣ ಅಚ್ಚರಿಯಾಗುತ್ತೆ. ನನ್ನ ಜಮೀನಿಗೆ ಟನ್ಗಟ್ಟಳೆ ಸಾವಯವ ತ್ಯಾಜ್ಯ ಸೇರಿಸಿದ್ದೀನಿ. ಮಣ್ಣು ಎರೆಹುಳುಗಳಿಂದ ತುಂಬಿದೆ. ಬೆಳೆ ಹುಲಸಾಗಿ ಬೆಳೆದಿದೆ. ನಂಗೆ ಬಿಡುವಾದಾಗ ನಾನು ನೀರು ಕೊಡೋದು ಅಷ್ಟೇ. ಆಗ ಆ ಬೆಳೆ ನೀರನ್ನು ತೋಗೋಬೇಕು.ಬರ ಬಿದ್ರೂ ನನ್ನ ಬೆಳೆ ಉಳಿಯುತ್ತೆ. ನೆರೆ ಬಂದು ನೀರು ನಿಂತ್ರೂ ನನ್ನ ಬೆಳೆ ಉಳಿಯುತ್ತೆ. ನನ್ನ ಜಮೀನಿನ ಮಣ್ಣು ಬೆಳೆ ನಾನು ಹೇಳಿದಂತೆ ಕೇಳುತ್ತೆ'' ಅನ್ನುವ ಬಸಪ್ಪನ ಮುಗ್ದ ಮಾತುಗಳನ್ನು ಕೇಳುವಾಗ ಈತ ಎಂತಹ ಕೃಷಿ ತಪಸ್ವಿ ಅನ್ನಿಸುತ್ತೆ.
ಎಲ್ಲರೂ ನಾಟಿ ಟೊಮ್ಯಾಟೋ ಬೆಳೀವಾಗ ನಾನು ಹೈಬ್ರಿಡ್ ಬೆಳೀತೀನಿ ನೀವು ನಂಬೋಲ್ಲ ಒಂದು ವರುಷದವರೆವಿಗೂ ನಾನು ಟೋಮ್ಯಾಟೋ ಹಣ್ಣು ಕುಯ್ತೀನಿ. ಬೇರೆಯವರು ಅಷ್ಟರಲ್ಲಿ ಮೂರು ಬೆಳೆ ಬೆಳೆದಿದ್ದಾರೆ. ಒಂದೇ ಬೆಳೇಲಿ ಒಂದು ವರುಷದವರೆಗೆ ಟೊಮ್ಯಾಟೋ ಕಾಯಿ ನಾನು ಕುಯ್ತೀನಿ ಅನ್ನುವ ಮಾತು ಕೇಳಿದ್ರೆ ನಿಮಗೆ ನಂಬೋಕಾಗುತ್ತಾ ಇಲ್ಲ ಅಲ್ವಾ. ಆದ್ರೆ ಬಸಪ್ಪ ಹೇಳಿದ್ದನ್ನು ಮಾಡಿ ತೋರಿಸಿದ್ದಾರೆ. ಆನೆ ನಡೆದದೇ ದಾರಿ ಎಂಬಂತೆ ಕೃಷಿಗೆ ಹೊಸ ಭಾಷ್ಯ ಬರೆದಿದ್ದಾರೆ.
ಕೊಳ್ಳೇಗಾಲದ ಸಮೀಪ ಇರುವ ಲಕ್ಕರಸನಪಾಳ್ಯವೇ ಬಸಪ್ಪನವರ ಕರ್ಮಭೂಮಿ. ಪತ್ನಿ ಹಾಗೂ ಮಗಳೊಂದಿಗೆ ಜಮೀನಿನಲ್ಲಿಯೇ ವಾಸವಿರುವ ಬಸಪ್ಪನವರಿಗೆ ದಿನದ 24 ಗಂಟೆಯೂ ವ್ಯವಸಾಯದ ಚಿಂತಯೇ. ಕೆಂಪನಪಾಳ್ಯದ ಪುಟ್ಟಬುದ್ದಿ ಆರಾಧ್ಯರು ನನಗೆ ಬಸಪ್ಪನನ್ನು ಪರಿಚಯಿಸಿದ್ದು. ಬಸಪ್ಪನನ್ನು ನೋಡುವ ತವಕದಿಂದ ಜಮೀನಿಗೆ ಹೋದಾಗ ಬಸಪ್ಪ ಅಲ್ಲಿರಲಿಲ್ಲ. ಆರಾಧ್ಯರು ಹೇಳಿದ್ರು ಅವನು ಜಮೀನಿನಲ್ಲಿ ಇಲ್ಲ ಅಂದ್ರೆ ಇಲ್ಲೇ ಎಲ್ಲಾದ್ರೂ ತರಗು ಬಾಚ್ತಾ ಇರ್ತಾನೆ. ನೋಡೋಣಬನ್ನಿ ಅಂದ್ರು. ಅನತಿದೂರದಲ್ಲಿಯೇ ಮುಸಗಿನ ಜೋಳದ ಗಾಬಿನ ತ್ಯಾಜ್ಯದ ರಾಶಿ ನಡುವೆ ಕುಳಿತಿದ್ದ ಬಸಪ್ಪ ಕಣ್ಣಿಗೆ ಬಿದ್ರು. ಈ ಜಮೀನಿನವರು ಇದಕ್ಕೆ ಬೆಂಕಿ ಹಾಕ್ತೀನಿ ಅಂತಿದ್ರು. ನಾನು ಬೇಡ ಅಂತ ಹೇಳಿ ತುಂಬ್ತಾ ಇದ್ದೀನಿ. ಈ ತ್ಯಾಜ್ಯ ಬಹಳ ಅಮೂಲ್ಯವಾದದ್ದು ನೋಡಿ ಅಂತ ತಳದ ಗೊಬ್ಬರದಂತಹ ರಾಶಿ ಕೆದಕಿದಾಗ ಎರೆಹುಳುಗಳು ರಾಶಿ ರಾಶಿಯಾಗಿ ಕೈಗೆಸಿಕ್ಕವು. ನಮ್ಮ ರೈತರಿಗೆ ಬುದ್ದಿ ಬರೋದು ಯಾವಾಗ ಸ್ವಾಮಿ? ಅಂತ ಬಸಪ್ಪ ಪ್ರಶ್ನೇ ಕೇಳಿದ್ರೆ ನಾನು ನಿರುತ್ತರನಾಗಿದ್ದೆ.
ಬಸಪ್ಪನವರ ಬಳಿ ಯಾವಾಗಲೂ ಒಂದು ಸೈಕಲ್ ಹಾಗೂ ತ್ಯಾಜ್ಯ ತುಂಬಲು ಒಂದು ಚೀಲ ಇರುತ್ತೆ. ಇವೆರಡೂ ಇರದೇ ಇದ್ದಾಗ ಆಕಸ್ಮಾತ್ ತ್ಯಾಜ್ಯ ಪದಾರ್ಥ ಸಿಕ್ಕಿದ್ರೆ ಉಟ್ಟಿರುವ ಪಂಚೆಯಲ್ಲೇ ಅದನ್ನ ತುಂಬಿಕೊಂಡು ಜಮೀನಿಗೆ ಬರ್ತಾರೆ ಇವರು. ಮೊದಲ ಮುಂಗಾರು ಮಳೆ ಬಂದ ಮೇಲೆ ಊರಿನ ಓಣಿಯಲ್ಲಿ ಮರಳನ್ನು ಬಾಚಿ ತಂದು ಕೊಟ್ಟಿಗೇಲಿ ಹರಡಿ ಎರಡು ಮೂರು ದಿನ ಅದು ಸಗಣಿ ಗಂಜಲದೊಂದಿಗೆ ಬೆರೆತ ಮೇಲೆ ಚೀಲಕ್ಕೆ ತುಂಬಿ ಇಟ್ರೆ ಗೊಬ್ಬರ ತಯಾರು. ಈ ರೀತಿ ಸಂಗ್ರಹಿಸಿದ ಹತ್ತಾರು ಚೀಲ ಗೊಬ್ಬರ ಬಸಪ್ಪನ ಹಟ್ಟಿಯಲ್ಲಿ ಯಾವಾಗಲೂ ಇರುತ್ತೆ. ಸಾವಯವ ತ್ಯಾಜ್ಯಗಳನ್ನು ಕೊಟ್ಟಿಗೇಲಿ ಹರಡಿ ವಾರಗಟ್ಟಳೆ ಅದನ್ನು ಕಲಿಸಿ ನಂತರ ಜಮೀನಿಗೆ ಹೊದಿಕೆಯಾಗಿ ಬಳಸ್ತಾರೆ ಬಸಪ್ಪ. ಈ ಹೊದಿಕೆಯೇ ಮೇಲೆ ಸಗಣಿ ಬಗ್ಗಡದ ನೀರನ್ನು ಸದಾ ಚೆಲ್ತಾ ಬರ್ತಾರೆ. ತಳಭಾಗದ ಮಣ್ಣು ಬಸಪ್ಪ ಹೇಳಿದಂತೆ ಕೇಳುತ್ತೆ. ಜಮೀನಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಎಂದಿಗೂ ಬಳಸಿಲ್ಲ ಬಸಪ್ಪ.
ಕೇವಲ ನಾಲಿ ಹಸುವಿನ ಗಂಜಲ ಹಾಗೂ ಸಗಣಿ ಮಿಶ್ರಣ ಮಾಡದ್ರೆ ಸಾಕ, ಇದಕ್ಕೆ ಬೇರೆ ಏನನ್ನು ಸೇರಿಸುವ ಅಗತ್ಯವಿಲ್ಲ. ಸಾವಯವ ತ್ಯಾಜ್ಯದ ಮೇಲೆ ಇದನ್ನು ಚೆಲ್ತಾ ಬಂದ್ರೆ ಮಣ್ಣು ಚಿನ್ನ ಆಗುತ್ತೆ ಅನ್ನುವ ಬಸಪ್ಪ ಬಸಪ್ಪಾಮೃತದ ಸಾರವನ್ನು ಬಿಡಿಸಿ ಹೇಳ್ತಾರೆ. ಈ ಆರಂಭ ಮಾಡೋದಕ್ಕೆ ಬೇಕಿರೋದು ಒಂದು ಕುಡುಗೋಲು, ಒಂದು ಮಚ್ಚು ಮಾತ್ರ ನೋಡಿ ನನ್ನ ಜಮೀನಿಗೆ ಬನ್ನಿ. ಈ ಎರಡರಿಂದ ನಾನು ಯಾವ ರೀತಿ ಬೇಸಾಯ ಮಾಡ್ತೀನಿ ನಿಮಗೆ ತಿಳಿಯುತ್ತೆ ಅಂತಾರೆ . ಅಕ್ಕಪಕ್ಕದವರು ಪಾರ್ಥೇನಿಯಂ ಬೇಡ ಅಂದ್ರು ಪಾರ್ಥೇನಿಯಂ ಗೊಬ್ಬರವನ್ನು ಮಣ್ಣಿಗೆ ಸೇರಿಸಿದ್ದಾರೆ ಬಸಪ್ಪ. ಪ್ರಕೃತಿಯಲ್ಲಿ ಬೆಸಾಯವಿಲ್ಲದೆ ಬೆಳೆಯುವ ಹಸಿರುಎಲೆಗೊಬ್ಬರ ಪಾರ್ಥೇನಿಯಂ ಅನ್ನುವುದು ಇವರ ದೃಢವಾದ ನಿಲುವು.ರೈತರು ಒಂದೇ ಬೆಳೆ ಬೆಳೀಬಾರು ಹತ್ತಾರು ಬೆಳೆ ಜಮೀನಿನಲ್ಲಿ ಬೆಳೀಬೇಕು ಅನ್ನುವುದು ಇವರ ವ್ಯವಸಾಯದ ಗುಟ್ಟು. ಟೊಮ್ಯಾಟೋ, ಅರಿಸಿನ, ಕೊತ್ತಂಬರಿ, ಬೀನ್ಸ್, ಮೂಲಂಗಿ ಒಟ್ಟಿಗೆ ಬೆಳೆದಿದ್ದಾರೆ. ರಾತ್ರಿಯೀಡಿ ತರಗು ತುಂಬಿ ಸಗಣಿ ಗಂಜಲದ ಬಗ್ಗಡ ಹಾಕಿದ್ದಾರೆ. ಮಣ್ಣೇ ಕಾಣದಂತೆ ಸಾವಯವ ತ್ಯಾಜ್ಯದಿಂದ ಜಮೀನು ಮುಚ್ಚಿದ್ದಾರೆ. ತಿಂಗಳಿಗೊಮ್ಮೆ ನೀರು ಮಾತ್ರ. ಎಂತಹ ಬೇಸಿಗೆಯಲ್ಲೂ ಬೆಳೆ ಬಾಡಿಲ್ಲ. ಗೊಬ್ಬರ ಬೇಕಿಲ್ಲ. ಕೀಟ ರೋಗಗಳ ಬಾಧೆಯಂತೂ ಇಲ್ಲವೇ ಇಲ್ಲ. ಖಏಔಓ ಸಾವಯವ ಅರಿಸಿನ ಬೆಳೆದು ಸೈ ಅನ್ನಿಸಿಕೊಂಡಿದ್ದಾರೆ .
ಬಸಪ್ಪ ಇಷ್ಟವಾಗೋದು ಆತನ ನೇರ ನಡೆ ನುಡಿಗಳಿಂದ. ಜಮೀನಿನಲ್ಲಿ ದನಕರ ಕುಣೀಬೇಕು. ಆನಂದದಿಂದ ಓಡಾಡಬೇಕು. ನಮ್ಮ ದನಕರ ನಾವು ಎದ್ದಿದ್ರೆ ಅವು ಎದ್ದಿರ್ತವೆ. ನಾವು ಮಲ್ಗಿದ್ರೆ ಅವು ಮಲಗಿರ್ತವೆ.ನಮ್ಮ ಜತೇಲಿ ಅವುಗಳ ವಾಸ ಅಂತ ಮನೆ ಪಕ್ಕದ ಕೊಟ್ಟಿಗೆ ತೋರಿಸ್ತಾರೆ. ಎಲ್ಲರೂ ಜಮೀನಿನ ತುಂಬಾ ಬಾಳೆ ಬೆಳೀತಾರೆ. ಆದ್ರೆ ನಾನು ಜಮೀನಿನ ಬದುವಿನಲ್ಲಿ ಎರಡು ಅಡಿಗೆ ಒಂದರಂತೆ 900 ಬಾಳೆ ಬೆಳೆದಿದ್ದೀನಿ. ಯಾವಗೊಬ್ರ, ಗೋಡೂ ಇಲ್ಲ. ಬಾಳೆ ಸಾಧಾರಣವಾಗಿ ಬೆಳೆದಿದೆ. ಒಂದೊಂದು ಗೊನೆ ನಾಲ್ಕರಿಂದ ಐದು ಕೆ.ಜಿ. ತೂಗತ್ತೆ. ಬಂದಷ್ಟೇ ಬರಲಿ ಬಿಡಿ ಅಂತ ನಗುತ್ತಾರೆ. ಶಿಸ್ತಿನ ಸಿಪಾಯಿ ಗಳಂತೆ ಬದುವಿನಲ್ಲಿ ಬೆಳೆದಿರುವ ಬಾಳೆ ಬಸಪ್ಪನ ಮಾತಿಗೆ ತಲೆಯಾಡಿಸುತ್ತವೆ.

ಒಣ ತರುಗಿನ ಪುಡಿ, ಗೋಡು ಮಣ್ಣೂ, ಹಟ್ಟಿಗೊಬ್ಬರ ಇದನ್ನು ಪದರ ಪದರವಾಗಿ ಹಾಕಿ ಕೃತಕವಾದ ಈ ಹಾಸಿಗೆಯ ಮೇಲೆ ಕುಂಬಳ, ಹಾಗಲ, ಹೀರೆ ಈ ರೀತಿ ಬಳ್ಳಿ ಜಾತಿಯ ಬೆಳೆಗಳನ್ನು ಬಸಪ್ಪ ಬೆಳೆದಿದ್ದಾರೆ. ಈ ತರಹ ಜಮೀನಿನ ಮಣ್ಣಾದರೆ ರೈತನಸ್ಟು ಶ್ರೀಮಂತ ಮತ್ತೋಬ್ಬರಿಲ್ಲ. ನೂರಾರು ಟನ್ ಸಾವಯವ ತ್ಯಾಜ್ಯ ಮಣ್ಣಿಗೆ ಹಾಕಿದ್ರೆ ಜಮೀನು ನಂನದವನವಾಗುತ್ತೆ ಅನ್ನುವುದು ಬಸಪ್ಪನವರ ಅನುಭವದ ಮಾತು.
ಬಸಪ್ಪನ ಮಾತುಗಳಲ್ಲಿ ಕಪಟವಿಲ್ಲ. ಮಾಡಿದ್ದನ್ನೇ ಹೇಳುವ ಬಸಪ್ಪ ದೊಡ್ಡದೊಂದು ಕೃಷಿ ಪುಸ್ತಕ ಓದಿರದ ಹಳ್ಳಿ ರೈತ. ಈತನ ಒಡನಾಡಿ ಮೈಸೂರು ಆಕಾಶವಾಣಿ ಮಾತ್ರ. ಮನೆ ಮಂದಿಯಲ್ಲಾ ಕುಳಿತು ಆಕಾಶವಾಣಿಯ ಕೃಷಿ ಕಾರ್ಯಕ್ರಮ ಕೇಳ್ತಾರೆ. ಬಸಪ್ಪ ಹಾಗೆ ಕೇಳಿದ್ದನ್ನು ಜಮೀನಿನಲ್ಲಿ ಅಳವಡಿಸಿದ್ದಾರೆ .ಒಂದು ನಿಮಿಷ ವ್ಯರ್ಥಮಾಡದ ಬಸಪ್ಪನವರದ್ದು ಪಾದರಸದಂತಹ ವ್ಯಕ್ತಿತ್ವ. ಇವರ ಜಮೀನಿನಲ್ಲಿ ಬೆಳೆದ ಒಂದು ಸಂಬಾರ ಗಿಡವನ್ನು ಒಂದು ಕಂತೆ ಕಟ್ಟಬಹುದು. ಅಷ್ಟು ದೊಡ್ಡದಿದೆ. ಬಾಳೆ, ತೆಂಗು, ಪಪ್ಪಾಯಿ , ಅರಿಸಿನ,ಶುಂಠಿ ಎಳ್ಳು ತರಕಾರಿ ಯಾವುದರಲ್ಲೂ ಕೀಟ, ರೋಗವಿಲ್ಲ. ಮಣ್ಣಂತೂ ಹೂವಿನಂತೆ ಮೃದುವಾಗಿದೆ. ಎಷ್ಟೆಂದರೆ ಕೈಯಿಂದಲೇ ಉಳುಮೆ ಮಾಡುವಷ್ಟು. ಎಲೆ ಮರೆಯ ಕಾಯಿಯಂತಿರುವ ಬಸಪ್ಪ ಇತರೇ ರೈತರಿಗೆ ಮಾದರಿ. ಈತನನ್ನು ನೋಡಿದ ಮೇಲೆಯೇ ನನಗೆ ಅನ್ನಿಸಿದ್ದು ಬೇಸಾಯಕ್ಕೊಬ್ಬನೇ ಬಸಪ್ಪ ಅಂತ. ನಮಸ್ಕಾರ.
ಎನ್. ಕೇಶವಮೂರ್ತಿ .

No comments:

Post a Comment