Tuesday, February 16, 2010

ಕೊಡಗಿನ ಕೃಷಿ ಬಾನುಲಿ

ಕಾಫಿ, ಏಲಕ್ಕಿ, ಕಾಳುಮೆಣಸು ಕೊಡಗಿನ ಬದುಕನ್ನು ರೂಪಿಸಿದ ಬೆಳೆಗಳು. ಕೊಡಗಿನ ಕಿತ್ತಳೆ, ಜೇನು ಗತಕಾಲದ ನೆನಪನ್ನಷ್ಟೇ ಉಳಿಸಿ ಅವಸಾನದ ಅಂಚಿಗೆ ಬಂದು ತಲುಪಿವೆ. ಜಿಲ್ಲೆಯ ಮುಖ್ಯ ಆಹಾರ ಬೆಳೆಯಾದ ಭತ್ತ ' ಹುತ್ತರಿ ' ಹಬ್ಬದೊಂದಿಗೆ ಹೊಸೆದುಕೊಂಡರೂ ಕೂಲಿಯಾಳುಗಳ ಅಭಾವ, ಏರುತ್ತಿರುವ ಉತ್ಪಾದನಾ ವೆಚ್ಚ ಮೊದಲಾದ ಕಾರಣಗಳಿಗಾಗಿ ಕುಂಟುತ್ತಾ ಸಾಗುತ್ತಿದೆ. ವಾಣಿಜ್ಯ ಬೆಳೆಯಾಗಿ ಕಾಲಿಟ್ಟ ಶುಂಠಿ, ಬಾಳೆ, ಅಡಿಕೆ ಹೊಸ ಹೊಸ ಸವಾಲುಗಳನ್ನು ಎದುರಿಸುವಂತಾಗಿದೆ. ಆಂಥೂರಿಯಂನಂಥ ಪುಷ್ಪ ಕೃಷಿಗೆ ಪೂರಕ ವಾತಾವರಣವಿದ್ದರೂ ಅಧಿಕ ಬಂಡವಾಳದ ಅಗತ್ಯವಿರುವುದರಿಂದ ಜನಸಾಮಾನ್ಯ ಕೃಷಿಕರ ಬೆಳೆಯಾಗಿ ಅಭಿವೃದ್ಧಿ ಕಾಣಲಿಲ್ಲ. ಪರಿಸರ ಸ್ನೇಹಿ ಪ್ರವಾಸೋದ್ಯಮ '' ಇತ್ತೀಚಿನ ಬೆಳವಣಿಗೆಯಾಗಿದ್ದು ಕೃಷಿಗೆ ಪೂರಕವಾಗಿ ಆದಾಯವನ್ನು ಹೆಚ್ಚಿಸುವ ಮತ್ತು ಆ ಮೂಲಕ ಗೃಹಿಣಿಯರಿಗೆ ಮನೆಯಲ್ಲಿಯೇ ಉದ್ಯೋಗವನ್ನು ಕಂಡುಕೊಳ್ಳುವ ಸಾಧ್ಯತೆಯನ್ನು ತೆರೆದಿಟ್ಟಿದೆ.
ಕೊಡಗಿನ ಕೃಷಿ ಬದುಕನ್ನು ರೂಪಿಸುವಲ್ಲಿ ಸಹಕಾರ ಬ್ಯಾಂಕುಗಳ ಪಾತ್ರ ಉಲ್ಲೇಖನೀಯ.ಶತಮಾನದ ಇತಿಹಾಸವನ್ನು ಹೊಂದಿರುವ ಸಹಕಾರ ಕ್ಷೇತ್ರ ಜಿಲ್ಲೆಯ ಹಳ್ಳಿಹಳ್ಳಿಗಳಲ್ಲಿ ಕೃಷಿಕರ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತಾ ಬಂದಿವೆ. ಕಳೆದ ಒಂದು ದಶಕದಿಂದ ಐದು ಸಾವಿರಕ್ಕೂ ಮೀರಿ ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳು ಆರ್ಥಿಕ , ಸಾಮಾಜಿಕ ಭದ್ರತೆಯೊಂದಿಗೆ ಮುಖ್ಯವಾಹಿನಿಯತ್ತ ಹೊರಳುತ್ತಿದ್ದಾರೆ. ಇದರ ಜೊತೆ ಜೊತೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುರುಷರ ' ಪುರುಷರ ಪ್ರಗತಿಬಂಧು' ಸ್ವಸಹಾಯ ಸಂಘಗಳು, ಸ್ವಾವಲಂಬನೆಗೆ ಹೊಸ ಅರ್ಥವನ್ನು ಬರೆದಿದೆ. ಇವೆಲ್ಲದರ ಹೊರತಾಗಿಯೂ ಕೊಡಗಿನ ಕೃಷಿ, ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಹೊಸ ದಿಶೆಯತ್ತ ಎದುರು ನೋಡುತ್ತಿದೆ. ದುಡಿಯುವ ಕೈಗಳು ನಿತ್ರಾಣವಾಗಿ ನಿರಾಶೆಯ ಚಡಪಡಿಕೆಯಲ್ಲಿದ್ದರೆ ಬಿಸಿರಕ್ತದ ಯುವಕರು ಕೃಷಿಯತ್ತ ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಮೂಟೆ ಮೂಟೆ ರಸಗೊಬ್ಬರಗಳನ್ನು ಮಣ್ಣಿಗೆ ಸುರಿಯುವುದರಿಂದ ಮಾತ್ರ ಕೃಷಿ ಮಾಡಲು ಸಾಧ್ಯ ಎಂದು ದೃಡವಾಗಿ ನಂಬಿಕೊಂಡು, ಹತ್ತಾರು ವರ್ಷಗಳಿಂದ ಅದನ್ನೇ ಅನುಸರಿಸಿಕೊಂಡು ಬರುತ್ತಿರುವ ' ಸಾಂಪ್ರದಾಯಿಕ ಕೃಷಿಕರ' ನಡುವೆ ಜೀವಾಮೃತ, ಹಟ್ಟಿಗೊಬ್ಬರ, ಎರೆಗೊಬ್ಬರ ಆಧಾರಿತ ಸಹಜ-ಸಾವಯವ ಜೀವಾಧಾರಕ ಕೃಷಿ ವಿಧಾನ ಹೊಸ ಭರವಸೆಯನ್ನು ಮೂಡಿಸಿದೆ.
ವರ್ಷದ ಐದಾರು ತಿಂಗಳು ಸುರಿಯುವ ಮಳೆ, ವಿದ್ಯುತ್ತಿನ ಕಣ್ಣಾಮುಚ್ಚಾಲೆ, ಸುಲಭ ಸಂಪರ್ಕ ವ್ಯವಸ್ಥೆಯ ಕೊರತೆ ರೈತರು ಹಾಗೂ ಅವರ ಕೃಷಿ ಉತ್ಪನ್ನವನ್ನು ಪ್ರೋತ್ಸಾಹಕ ಬೆಲೆಗೆ ಮಾರುವಲ್ಲಿ ಪ್ರಮುಖ ತೊಡಕಾಗಿ ಕಾಡುತ್ತಿದೆ. ನಿಸರ್ಗ ರಮಣೀಯ ಎಂದು ಕರೆಸಿಕೊಳ್ಳುವಲ್ಲಿ ಹಿಂದೆ ಬೀಳದ ಈ ಪುಟ್ಟ ಜಿಲ್ಲೆಯಲ್ಲಿ ದಿನಪತ್ರಿಕೆಗಳು ಸಂಜೆಯ ಓದಿಗೆ ಮನೆಗೆ ತಲುಪುವ ಸ್ಥಿತಿಯಿದ್ದರೆ ಮಾಹಿತಿಯ ಕೊರತೆ ಜನಮಾನಸವನ್ನು ತಟ್ಟುತ್ತಿದೆ. 1993 ಆಗಸ್ಟ್ 28 ಕೊಡಗಿನ ಧ್ವನಿ ತರಂಗದಲ್ಲಿ ಹೊಸ ಶಕೆಯ ಆರಂಭ. ಅಂದು ಮಡಿಕೇರಿ ಆಕಾಶವಾಣಿ ಕೇಂದ್ರದ ಬಾನುಲಿ '' ಮನೆ-ಮನದ ಕದ ತಟ್ಟಿದ ದಿನ.ಮೊದಲಿಗೆ ಬೆಳಗಿನ ಪ್ರಸಾರದೊಂದಿಗೆ ಆರಂಭಗೊಂಡ ಕಾರ್ಯಕ್ರಮಗಳು ಹಂತ ಹಂತವಾಗಿ ಮೇಲೇರಿ ದಿನದ 16ಗಂಟೆಯ ಮಾಹಿತಿ, ಮನೋರಂಜನೆ ಹಾಗೂ ಶಿಕ್ಷಣದ ಮೂಲ ಉದ್ದೇಶದೊಂದಿಗೆ ತನ್ನ ಕರ್ತವ್ಯವನ್ನು ಸಮರ್ಥವಾಗಿ ನೆರವೇರಿಸಿಕೊಂಡು ಬರುತ್ತಿದೆ. ಪತ್ರಾಧಾರಿತ ಪ್ರತಿಕ್ರಿಯೆಗಳೊಂದಿಗೆ ನೇರ ಫೋನ್-ಇನ್ ಕಾರ್ಯಕ್ರಮಗಳ ಮೂಲಕ ದ್ವಿಮುಖ ಸಂವಾದಕ್ಕೆ ವೇದಿಕೆಯಾಗಿದೆ. ವಿವಿಧ ಇಲಾಖಾಧಿಕಾರಿಗಳು, ವಿಷಯ ತಜ್ಞರು ಕೇಳುಗರ ಸಂದೇಹಗಳಿಗೆ ಸ್ಪಂದಿಸಿದ್ದಾರೆ. ತಳಮಟ್ಟದ ವಾಸ್ತವತೆಗೆ ಕೈಗನ್ನಡಿಯಾಗಿದೆ. ಕೃಷಿ, ಕ್ರೀಡೆ, ರಾಜಕೀಯ, ಶಿಕ್ಷಣ, ಸಭೆ-ಸಮಾರಂಭಗಳನ್ನೊಳಗೊಂಡಂತೆ ಸ್ಥಳೀಯ ಎಲ್ಲಾ ಆಗು ಹೋಗುಗಳಿಗೆ ಸ್ಪಂದಿಸುತ್ತಿರುವ ಮಡಿಕೇರಿ ಆಕಾಶವಾಣಿ ಜನಧ್ವನಿ'' ಯಾಗಿ ಬೆಳೆದು ಬಂದಿದೆ. ಬಾನುಲಿಯನ್ನು ಸಮರ್ಥ ಹಾಗೂ ಕ್ಷಿಪ್ರ ಸಂವಹನ ಮಾಧ್ಯಮವಾಗಿ ನೆಚ್ಚಿಕೊಳ್ಳುವಂತೆ ಮಾಡಿದೆ.
ಕೃಷಿಯಾಧಾರಿತ ಗ್ರಾಮೀಣ ಕೇಳುಗರಿಗಾರಿಯೇ ರೂಪುಗೊಂಡಿರುವ ' ಕಿಸಾನ್ವಾಣಿ' ಕಾರ್ಯಕ್ರಮ ಕೃಷಿ, ತೋಟಗಾರಿಕೆ, ಸಂಶೋಧನಾ ಸಂಸ್ಥೆಗಳ ಅಧಿಕಾರಿಗಳು, ವಿಷಯತಜ್ಞರು ಮತ್ತು ಕೇಳುಗರ ನಡುವೆ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತಿದೆ. ಸಾವಯವ ಕೃಷಿಕರ ಅನುಭವವನ್ನು ಹೊತ್ತ ನೇಗಿಲ ಯೋಗಿ'', ಮಹಿಳಾ ಸ್ವ ಸಹಾಯ, ಸ್ತ್ರೀಶಕ್ತಿ ಸಂಘಗಳ ಸದಸ್ಯರ ಅನುಭವ ಹಂಚಿಕೊಳ್ಳಲು ಮಹಿಳಾ ವಾಣಿ, ನೇರ ಫೋನ್-ಇನ್ ಕಾರ್ಯಕ್ರಮಗಳು ಕಾಫಿ, ಏಲಕ್ಕಿ, ಜೇನು ಕೃಷಿಗೆ ಸಂಬಂಧಿಸಿದಂತೆ ಬಾನುಲಿ ಕೃಷಿ ಪಾಠಗಳ ಸರಣಿ ಕೇಳುಗರನ್ನು ಆಕರ್ಷಿಸುತ್ತವೆ .ಉಪಯುಕ್ತವೂ ಅನಿಸಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಮಾರುಕಟ್ಟೆ ಕುರಿತಂತೆ ಸರಣಿ ಕಾರ್ಯಕ್ರಮಗಳು ಉತ್ತಮ ಬೆಲೆಯನ್ನು ಪಡೆಯುವಲ್ಲಿ ರೈತರಿಗೆ ನೆರವಾಗುತ್ತಿದೆ.
ಕೃಷಿರಂಗ'' ಕೇವಲ ಕೃಷಿಗೆ ಮಾತ್ರ ಸೀಮಿತವಾದ ಕಾರ್ಯಕ್ರಮವಲ್ಲ. ಗ್ರಾಮ ನೈರ್ಮಲ್ಯ, ಸಾಮಾಜಿಕ ಸ್ವಾಸ್ಥ್ಯ, ಸ್ವಾವಲಂಬಿ ಸಂಘಟನೆ, ಶಿಕ್ಷಣ, ಮೂಡನಂಬಿಕೆ ವಿರುದ್ದ ಜನಜಾಗೃತಿ ಹೀಗೆ ಬಹು ವಿಧ ಉದ್ದೇಶಗಳನ್ನಿಟ್ಟುಕೊಂಡು ಕಾರ್ಯಕ್ರಮವನ್ನು ರೂಪಿಸುತ್ತಿದೆ. ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರ, ಅಪ್ಪಂಗಲದ ಭಾರತೀಯ ಸಂಬಾರ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯವಲ್ಲದೆ ಕೃಷಿ-ತೋಟಗಾರಿಕೆಮ ಪಶುಸಂಗೋಪನೆ ಮೊದಲಾದ ಇಲಾಖೆಗಳು ಕಾಫಿ-ಸಂಬಾರ ಮಂಡಳಿಗಳು, ಹೀಗೆ ಕೃಷಿಗೆ ಪೂರಕವಾದ ಎಲ್ಲಾ ಸಂಘ-ಸಂಸ್ಥೆಗಳೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿರುವ ರೇಡಿಯೋ ಕಿಸಾನ್ವಾಣಿ ವಿಭಾಗ ಪ್ರಾದೇಶಿಕ ಅವಶ್ಯಕತೆಗೆ ಅನುಗುಣವಾಗಿ ಕಾಲಕಾಲಕ್ಕೆ ಮಾಹಿತಿ, ಸಂದರ್ಶನ, ಚರ್ಚೆ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಕೊಡಗಿನ ಕೃಷಿ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇವು ಈ ಹಿಂದೆಯೂ ಇದ್ದವು. ಈಗ ಮಾತ್ರ ಎದ್ದು ಕಾಣುತ್ತಿದೆ. ಇದಕ್ಕೆ ಪರಿಹಾರ ಆಶ್ವಾಸನೆಯಿಂದಷ್ಟೇ ಸಿಗುವುದಕ್ಕೆ ಸಾಧ್ಯವಿಲ್ಲ. ರೈತರು, ಇಲಾಖೆ, ಮಾಧ್ಯಮ ಪರಸ್ಪರ ಕೈ ಜೋಡಿಸಬೇಕು . ಕೃಷಿ ಸಹ್ಯವಾಗಬೇಕಾದರೆ ಇದು ಇಂದಿನ ಅನಿವಾರ್ಯತೆ.

ಟಿ.ಎಸ್.ಪ್ರಸಾದ್
ಪ್ರಸಾರ ನಿರ್ವಾಹಕರು
ಆಕಾಶವಾಣಿ
ಮಡಿಕೇರಿ.

1 comment:

  1. ಇವತ್ತಿನ ಮಾಧ್ಯಮ ಯುಗದಲ್ಲಿ ಉಪಯುಕ್ತವಾದ ಕಾರ್ಯವನ್ನು ಮಾಮಾಡುತ್ತಿದೆ ಕಿಸಾನ್ವಾಣಿ. ಮಾಹಿತಿಯನ್ನು ತಿಳಿದು ತುಂಬಾ ಸಂತೋಷವಾಯಿತು. ಈ ಬಗ್ಗೆ ಹೆಚ್ಚಿನ ಮಾಹಿತಿಗಳಿದ್ದರೆ ತಿಳಿಸಿ. ನಮ್ಮ ಪತ್ರಿಕೆಗೆ ನೀವೇ ಬರೆದರೆ ಕಂಡಿತ ಪ್ರಕಟಿಸುತ್ತೇವೆ.

    ಹೊಸದಿಗಂತ ಪುರವಣಿ ವಿಭಾಗದ ಪರವಾಗಿ,
    - ನಾಗರಾಜ.ವೈದ್ಯ
    ಹೊಸದಿಗಂತ
    vaidyanv@gmail.com

    ReplyDelete