Friday, January 28, 2011

ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆ
ಬಾನುಲಿ ಕೃಷಿಕರ ಕಂಪನಿ
ಬಾನುಲಿ ಕೃಷಿಕರ ಕಂಪನಿ (ಪ್ರೈ) ಲಿ. - ವಿಚಿತ್ರ ಆದರೂ ಸತ್ಯ ಅನ್ನುವಂತಿದೆ ಈ ಹೆಸರು. ನಮಗೆ ಪರಿಚಿತರಾಗಿರುವ ಹಲವು ಬಗೆಯ ರೈತರಿದ್ದಾರೆ. ಸಾವಯವ ಕೃಷಿಕರು, ನೈಸರ್ಗಿಕ ಕೃಷಿಕರು, ಪ್ರಗತಿಪರ ಕೃಷಿಕರು, ಮೀನು ಕೃಷಿಕರು, ತೆಂಗು ಕೃಷಿಕರು. . . . ಹೀಗೆ ಕೃಷಿಕರು ತಾವು ತೊಡಗಿಸಿಕೊಂಡಿರುವ ಅಥವಾ ಪರಿಣತಿ ಸಾಧಿಸಿರುವ ಕ್ಷೇತ್ರಕ್ಕೆ ಸಂಬಂಧಿಸಿದ ವಿಶೇಷಣವನ್ನು ಬಳಸುವುದು ಅಥವಾ ಅಂತಹ ರೈತರನ್ನು ಈ ರೀತಿ ವಿಶಿಷ್ಠವಾಗಿ ಗುರುತಿಸುವುದು ರೂಢಿಯಲ್ಲಿದೆ.
ಆದರೆ ಈ ಬಾನುಲಿ ಕೃಷಿಕ ಅನ್ನುವುದು ವಿಚಿತ್ರವಾಗಿದೆ. ಆದರೂ ಈ ಪದ ಬಳಕೆ ಚಾಲ್ತಿಗೆ ಬಂದಿದೆ ಎಷ್ಟೆಂದರೆ ಅದರ ಹೆಸರಿನಲ್ಲಿ ರೈತರ ಕೂಟವೊಂದು ಕಂಪನಿ ಸ್ಥಾಪಿಸಿ ಲಾಭದಾಯಕ ವ್ಯಾಪಾರ ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸ ಮೂಡುವ ಮಟ್ಟಿಗೆ.
ಬಾನುಲಿ ಕೃಷಿಕ - ಕನ್ನಡದ ಪದಕೋಶ ಸೇರಿದ್ದು ನಾಲ್ಕು ವರ್ಷಗಳ ಹಿಂದೆ ಬಾನುಲಿ ಕೃಷಿಕರ ಬಳಗದ ಮೂಲಕ. ಈ ಪದದ ಸೃಷ್ಠಿಕರ್ತ ಮೈಸೂರು ಆಕಾಶವಾಣಿ. ಕರ್ನಾಟಕ ಸಂಗೀತಕ್ಕೆ ಹೆಸರುವಾಸಿಯಾದ ಮೈಸೂರು ಆಕಾಶವಾಣಿಯನ್ನು ಕೃಷಿ ವಿಚಾರದಲ್ಲಿಯೂ ಜನಪ್ರಿಯಗೊಳಿಸಿರುವುದು ಅದರ ಕೃಷಿರಂಗ ವಿಭಾಗ. ಅದಕ್ಕೆ ಸಾಕ್ಷಿಯಾಗಿರುವುದು ಬಾನುಲಿ ಕೃಷಿಕರ ಬಳಗ ಹಾಗೂ ಅದರ ಮುಂದುವರಿದ ಆವೃತ್ತಿ ಬಾನುಲಿ ಕೃಷಿಕರ ಕಂಪನಿ.
ಯಾವುದೇ ಸಂಸ್ಥೆಯೊಂದರ ಹೆಸರಿನಲ್ಲಿ ಕೃಷಿಕನನ್ನು ಗುರುತಿಸುವುದು ಪ್ರಾಯಶಃ ಇದೇ ಮೊದಲು. ಕೃಷಿ ವಿಷಯಗಳನ್ನು ಪ್ರಸಾರ ಮಾಡುವ ಇತರೆ ಆಕಾಶವಾಣಿ / ದೂರದರ್ಶನ ಕೇಂದ್ರಗಳಿವೆ. ಕೃಷಿ ವಿಷಯ ಪ್ರಕಟಿಸುವ ಹಲವು ಜನಪ್ರಿಯ ಪತ್ರಿಕೆಗಳಿವೆ. ಕೃಷಿಗೆಂದೇ ಮೀಸಲಾದ ಪತ್ರಿಕೆಗಳೂ ಇವೆ. ಆದಾಗ್ಯೂ ಅದರ ಕೇಳುಗರೋ, ವೀಕ್ಷಕರೋ, ಓದುಗರೋ, ಬಳಗವೊಂದನ್ನು ರೂಪಿಸಿಕೊಂಡು ಸಕ್ರಿಯವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಕೃಷಿ ವಿಷಯಗಳನ್ನು ಚರ್ಚಿಸುತ್ತ ಅರ್ಥಪೂರ್ಣ ಸಂವಾದದಲ್ಲಿ ತೊಡಗಿಸಿಕೊಂಡಿರುವುದು ವಿರಳ. ಇಂತಹ ವಿರಳಾತಿವಿರಳ ಕಾಯಕವನ್ನು ಆಗುಮಾಡಿರುವ ಮೈಸೂರು ಆಕಾಶವಾಣಿ ಅಭಿನಂದನಾರ್ಹವಾಗಿದೆ. ಈ ದಿಸೆಯಲ್ಲಿ ಮಾರ್ಗಪ್ರವರ್ತಕವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ಕೃಷಿ ಕಾರ್ಯಕ್ರಮಗಳನ್ನು ರೈತರಿಗೆ ಪರಿಣಾಮಕಾರಿಯಾಗಿ ತಲುಪಿಸುತ್ತಿರುವ ಮಾಧ್ಯಮ ಎಂದರೆ ಆಕಾಶವಾಣಿ ಎಂಬುದನ್ನು ಮನಗಂಡ ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯ 2001ರಲ್ಲಿ ಆಕಾಶವಾಣಿಯ ಹಲವು ಕೇಂದ್ರಗಳಿಗೆ ಕೃಷಿ ಪ್ರಸಾರಕ್ಕಾಗಿಯೇ ವಿಶೇಷ ಧನಸಹಾಯ ನೀಡಿತು. ಕಿಸಾನ್ವಾಣಿ - ಕೃಷಿರಂಗ ಹೆಸರಿನಲ್ಲಿ ಆರಂಭವಾದ ಕೃಷಿ ಕಾರ್ಯಕ್ರಮಗಳು ರೈತರು ಸುಸ್ಥಿರ ಕೃಷಿಯತ್ತ ದೃಢಹೆಜ್ಜೆಗಳನ್ನು ಇಡಲು ಪ್ರೇರೇಪಣೆ ನೀಡಿದವು.
ಮೈಸೂರು ಆಕಾಶವಾಣಿ ಕೇಂದ್ರ ಇತರೆ ಆಕಾಶವಾಣಿಗಳಿಗಿಂತ ಭಿನ್ನ ಹೆಜ್ಜೆ ತುಳಿದದ್ದೇ ಈ ಹಂತದಲ್ಲಿ. ಇದು ಒಂದು ಹೆಜ್ಜೆ ಮುಂದೆ ಹೋಗಿ ತಾನು ಪ್ರಸಾರ ಮಾಡಿದ ಕೃಷಿ ಕಾರ್ಯಕ್ರಮಗಳ ಪರಿಣಾಮಗಳನ್ನು, ಉಪಯುಕ್ತತೆಯನ್ನು ಅರಿಯುವ ಪ್ರಯತ್ನ ಮಾಡಿತು. ರೇಡಿಯೋ ಕೇಂದ್ರದಿಂದ ಹೊರನಡೆದು ರೈತರ ಹೊಲಗದ್ದೆ ತೋಟಗಳಲ್ಲಿ ಅಡ್ಡಾಡಲು ಆರಂಭಿಸಿತು.
ಕೃಷಿ ವಿಶ್ವವಿದ್ಯಾನಿಲಯ, ಕೃಷಿ ಸಂಶೋಧನಾ ಕೇಂದ್ರಗಳಂತೆ ಕ್ಷೇತ್ರ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ರೈತರಿಗೆ ಮುಖಾಮುಖಿಯಾಗಿ ದ್ವಿಮುಖ ಸಂವಹನ ಆರಂಭಿಸಿತು. ದಿನನಿತ್ಯ ಕೃಷಿ ಕಾರ್ಯಕ್ರಮ ಆಲಿಸುತ್ತಿದ್ದ ರೈತರು, ಪ್ರತಿ ತಿಂಗಳು ಒಂದೆಡೆ ರೈತರ ಜಮೀನಿನಲ್ಲಿಯೇ ಸಭೆ ಸೇರಿ ಕೃಷಿ ವಿಷಯಗಳನ್ನು ಚರ್ಚಿಸುವ ಪರಿಪಾಠ ಆರಂಭವಾಯಿತು. ಇತಂಹ ಸಭೆಗಳಲ್ಲಿ ಕೃಷಿ ತಜ್ಞರು ಹಾಗೂ ಪೂರಕ ಕಸಬುಗಳಿಗೆ ಸಂಬಂಧಿಸಿದ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಇತರೆ ಇಲಾಖೆಗಳ ಸಹಯೋಗವನ್ನು ಪಡೆದುಕೊಳ್ಳಲಾಯಿತು. ಬಾನುಲಿ ಕೃಷಿ ಬೆಳಗು ಎಂಬ ಹೆಸರಿನಲ್ಲಿ ಪ್ರತಿ ತಿಂಗಳು ಕಾರ್ಯಕ್ರಮ ಆಯೋಜನೆಯಾದವು.
ಕಾರ್ಯಕ್ರಮದ ಉಪಯುಕ್ತತೆ ಮನಗಂಡ ರಾಜ್ಯ ವಾರ್ತಾ ಇಲಾಖೆಯು ಬಾನುಲಿ ಕೃಷಿ ಬೆಳಗು ಕಾರ್ಯಕ್ರಮಕ್ಕೆ ಎರಡು ವರ್ಷಗಳಿಗೆ ಪ್ರಾಯೋಜನೆ ನೀಡಿದೆ.
ನಿಯಮಿತವಾಗಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ರೈತರು ಬಾನುಲಿ ಕೃಷಿ ಬಳಗ ಸ್ಥಾಪಿಸಿಕೊಂಡು, ಅತ್ಯುತ್ತಮ ರೈತರಿಗೆ ಬಾನುಲಿ ಕೃಷಿ ಪ್ರಶಸ್ತಿ ಯನ್ನು ನೀಡುವ ಪರಿಪಾಠ ಆರಂಭಿಸಿದರು. ಈ ಎಲ್ಲ ಚಟುವಟಿಕೆಗಳನ್ನು ದಾಖಲಿಸಲು ನೇಗಿಲಯೋಗಿ ಎಂಬ ವಾರ್ತಾ ಪತ್ರವನ್ನು ಆರಂಭಿಸಲಾಯಿತು. ರೈತರ ಯಶೋಗಾಥೆಗಳನ್ನು ಪ್ರಕಟಿಸಲಾಯಿತಲ್ಲದೆ ಬಾನುಲಿ ಕೃಷಿ ಬೆಳಗು ನಡೆದು ಬಂದ ದಾರಿಯನ್ನು ದಾಖಲಿಸಲಾಯಿತು. ಹಲವು ರೈತರೇ ಈ ಪತ್ರಿಕೆಗೆ ಲೇಖನ ಬರೆದು ತಮ್ಮ ಸ್ವಾನುಭವ ವಿವರಿಸಿದರು. ನೇಗಿಲಯೋಗಿಯ ವ್ಯಾಪ್ತಿ ವಿಸ್ತರಿಸಲು ನೇಗಿಲಯೋಗಿ ಬ್ಲಾಗ್ ಸಹ ಆರಂಭಿಸಿ ಇನ್ನೊಂದು ಹೆಜ್ಜೆ ಮುಂದಿರಿಸಿತು.
ಇದೀಗ ಈ ಬಳಗ ಬಾನುಲಿ ಕೃಷಿಕರ ಕಂಪನಿ ಸ್ಥಾಪಿಸುತ್ತಿದೆ. ನೋಂದಣಿ ಪ್ರಕ್ರಿಯೆ ಮುಗಿದಿದ್ದು, ಜನವರಿ 31ರಂದು ಕಂಪನಿಯ ಉದ್ಘಾಟನೆಯೂ ಆಗಲಿದೆ. ರೈತರಿಂದ ಶೇರು ಸಂಗ್ರಹಿಸಿ, ರೈತರ ಉತ್ಪನ್ನಗಳ ಮೌಲ್ಯವರ್ಧನೆಯಾಗುವ ರೀತಿಯಲ್ಲಿ ಕೃಷಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಯೋಜಿಸಿದೆ. ಜೈವಿಕ ಇಂಧನ ತಯಾರಿಸುವ ಮಹತ್ವಾಕಾಂಕ್ಷೆ ಹೊಂದಿದೆ.
ಹಲವು ಸ್ವಾವಲಂಬಿ ಉತ್ಪನ್ನಗಳನ್ನು, ತಳಿಗಳನ್ನು ರೈತರೇ ಸಂಶೋಧಿಸಿದ್ದು, ಇವುಗಳಿಗೆ ಮಾರುಕಟ್ಟೆ ಒದಗಿಸುವುದೂ ಸೇರಿದಂತೆ ಹಲವು ಉದ್ದೇಶಗಳೊಡನೆ ಆರಂಭವಾಗುತ್ತಿರುವ ಈ ಕಂಪನಿ ಯಶಸ್ಸು ಕಾಣಲಿ ಎಂಬುದೇ ಎಲ್ಲರ ಹಾರೈಕೆ. ಇದಕ್ಕೆ ಪ್ರೇರಕವಾಗಿರುವ ಮೈಸೂರು ಆಕಾಶವಾಣಿ ಕೃಷಿರಂಗ ವಿಭಾಗದ ಮುಖ್ಯಸ್ಥ ಶ್ರೀ ಎನ್. ಕೇಶವಮೂರ್ತಿ ಹಾಗೂ ಅವರಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ನಿಲಯ ನಿರ್ದೇಶಕರಾದ ಶ್ರೀಮತಿ ವಿಜಯಾಹರನ್ ಅವರಿಗೆ ಅಭಿನಂದನೆಗಳು.
-ಎ.ಆರ್. ಪ್ರಕಾಶ್
ಉಪನಿರ್ದೇಶಕ
ವಾರ್ತಾ ಇಲಾಖೆ ,ಮೈಸೂರು

No comments:

Post a Comment